Home News ಮನ್ ಕಿ ಬಾತ್‌ನಲ್ಲಿ ಕಲಬುರಗಿ ರೊಟ್ಟಿಗೆ ಪ್ರಧಾನಿ ಪ್ರಶಂಸೆ

ಮನ್ ಕಿ ಬಾತ್‌ನಲ್ಲಿ ಕಲಬುರಗಿ ರೊಟ್ಟಿಗೆ ಪ್ರಧಾನಿ ಪ್ರಶಂಸೆ

ಕಲಬುರಗಿ: ಬಿಸಿಲನಾಡು ಕಲಬುರಗಿಯ ಖಡಕ್ ‘ಜೋಳದ ರೊಟ್ಟಿ’ಗೆ ಪ್ರಧಾನಿ ನರೇಂದ್ರ ಮೋದಿಯವರ ಪ್ರಶಂಸೆ ಸಿಕ್ಕಿದೆ. ಮಹಿಳೆಯರ ಈ ಪರಿಶ್ರಮಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾನುವಾರ ಮನ್ ಕಿ ಬಾತ್‌ನ 123ನೇ ಸರಣಿಯಲ್ಲಿ ಈ ಕುರಿತು ಉಲ್ಲೇಖಿಸಿದ ಮೋದಿ ಅವರು, ಮಹಿಳಾ ಸ್ವಾವಲಂಬನೆ ಭಾರತದ ಅಭಿವೃದ್ಧಿಯ ಹೊಸ ಮಂತ್ರವಾಗಿದೆ. ಮಹಿಳೆ ತಾಯಿ, ಸಹೋದರಿ, ಮಗಳಾಗಿ ಇಡೀ ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತಿದ್ದಾಳೆ. ಕಲಬುರಗಿ ಮಹಿಳೆಯರು ಆತ್ಮನಿರ್ಭರ ಅಭಿಯಾನದಡಿ ಜೋಳದ ರೊಟ್ಟಿಯನ್ನು ಒಂದು ಬ್ರ‍್ಯಾಂಡ್ ಆಗಿ ರೂಪಿಸಿದ್ದಾರೆ ಎಂದು ಶ್ಲಾಘಿಸಿದರು.

ಮೂರು ಸಾವಿರ ರೊಟ್ಟಿ….
ಕಲಬುರಗಿ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಪ್ರತಿನಿತ್ಯ 3 ಸಾವಿರ ರೊಟ್ಟಿ ತಯಾರಿಸುತ್ತಾರೆ. ಈ ರೊಟ್ಟಿ ಕೇವಲ ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ವಿಶೇಷ ಮಳಿಗೆ ತೆರೆದಿದ್ದು, ಆನ್‌ಲೈನ್ ಮೂಲಕ ಆರ್ಡರ್ ಬರುತ್ತವೆ. ಇದು ಮಹಿಳೆಯರ ಸಾಧನೆಯಾಗಿದೆ. ಇದು ಆತ್ಮನಿರ್ಭರದ ಪ್ರತೀಕ ಎಂದು ಶ್ಲಾಘಿಸಿದ್ದಾರೆ.
ವಿಶ್ವದ ದೈತ್ಯ ಆನ್‌ಲೈನ್ ಕಂಪನಿಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಮೂಲಕ ಸಾರ್ವಜನಿಕರ ಕೈಗೆ ಸಿಗುವಂತೆ ಮಾಡಲು ಕಲಬುರಗಿ ಜಿಲ್ಲಾಡಳಿತ ಒಡಂಬಡಿಕೆ ಮಾಡಿಕೊಂಡಿದ್ದು, ಕಳೆದ ನವ್ಹೆಂಬರ 16 ರಿಂದ ಈ ರೊಟ್ಟಿ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿದೆ. ಸಿರಿಧಾನ್ಯಗಳಿಂದ ತಯಾರಿಸಲಾದ ಈ ರೊಟ್ಟಿಗಳು ರುಚಿಕರ ಮತ್ತು ಆರೋಗ್ಯಕರವಾಗಿವೆ. ಪ್ರತಿ ರೊಟ್ಟಿಗೆ 6 ರೂ.

ವಿದೇಶದಲ್ಲೂ ಬೇಡಿಕೆ…
ಉತ್ತರ ಕರ್ನಾಟಕದ ಜೋಳದ ರೊಟ್ಟಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಕಲಬುರಗಿಯ ಖಡಕ್ ರೊಟ್ಟಿಗೆ ಕರ್ನಾಟಕ ಮಾತ್ರವಲ್ಲದೇ ದೇಶ, ವಿದೇಶಗಳಲ್ಲೂ ಬಹುಬೇಡಿಕೆಯಿದೆ.
ಹತ್ತು ರೊಟ್ಟಿ ಸೇರಿಸಿ ಒಂದು ಬಾಕ್ಸ್ ಮಾಡಲಾಗುತ್ತಿದ್ದು, ಬಾಕ್ಸ್ ಮೇಲೆ ಕಲಬುರಗಿ ಖಡಕ್ ರೊಟ್ಟಿ ಎಂದು ನಮೂದಿಸಲಾಗುತ್ತಿದೆ. ಜೊತೆಗೆ ಕ್ಯೂಆರ್ ಕೋಡ್ ಹಾಕಲಾಗಿದೆ. ಸ್ಕ್ಯಾನ್ ಮಾಡುವ ಮೂಲಕ ಆರ್ಡರ್ ಮಾಡಬಹುದಾಗಿದೆ. ಸಜ್ಜೆ ರೊಟ್ಟಿ, ದಪಾಟಿ, ಶೇಂಗಾ ಹೊಳಿಗೆ ಕುರಿತಂತೆ ಹೋಟೆಲ್ ಮಾಲೀಕರ ಸಂಘದೊಂದಿಗೆ ಸಭೆ ನಡೆಸಲಾಗುತ್ತಿದೆ. ಕಲಬುರಗಿ ರೊಟ್ಟಿ ಬಗ್ಗೆ ನ್ಯೂಜಿಲೆಂಡ್ ರಾಯಭಾರಿ ಕಚೇರಿ ಸಹ ಮಾಹಿತಿ ಪಡೆದುಕೊಂಡಿದೆ. ಕಲಬುರಗಿ ಖಡಕ್ ರೊಟ್ಟಿ ಈಗ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ.

Exit mobile version