ಬಸವಸಾಗರ ಜಲಾಶಯದಿಂದ 1,15,000 ಕ್ಯೂಸೆಕ್‌ ನೀರು ಬಿಡುಗಡೆ

ನಾರಾಯಣಪುರ(ಯಾದಗಿರಿ): ನಾರಾಯಣಪುರದ ಬಸವಸಾಗರ ಜಲಾಶಯದಿಂದ 21 ಗೇಟುಗಳ ಮೂಲಕ 1,15,000 ಕ್ಯೂಸೆಕ್‌ ನೀರನ್ನು ನದಿ ಪಾತ್ರಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಲಮಟ್ಟಿ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ 1,70,000 ಕ್ಯೂಸೆಕ್‌ ಹೊರ ಹರಿವು ಬಿಡುವ ಸಾಧ್ಯತೆ ಇರುವುದರಿಂದ ಇಲ್ಲಿಯ ಜಲಾಶಯದ ಅಧಿಕಾರಿಗಳು ಆಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆಲಮಟ್ಟಿ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರತಿ ಗಂಟೆ ಗಂಟೆಗೂ ಒಳ ಹರಿವು ಹೆಚ್ಚಾಗುತ್ತಿದ್ದರಿಂದ ಇಲ್ಲಿಯ ಮುಖ್ಯ ಇಂಜನೀಯರ ಮಂಜುನಾಥ, ಅಧೀಕ್ಷಕ ಅಭಿಯತರರಾದ ಜಿ.ಜಿ. ಪವಾರ್ ಜಲಾಶಯಕ್ಕೆ ಬರುತ್ತಿರುವ ಒಳ ಹರಿವು ವೀಕ್ಷಿಸಿ ಸ್ಥಳದಲ್ಲೇ ಇದ್ದ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ಪ್ರಭಾಕರ್ ಹಾಗೂ ಶಾಖಾಧಿಕಾರಿಗಳಾದ ವಿಜಯಕುಮಾರ್ ಅರಳಿ, ಶಿವರಾಜ್ ಪ್ರತಿ ಗಂಟೆಯ ಜಲಾಶಯಕ್ಕೆ ಬರುವ ನೀರಿನ ಆಗತ್ಯ ಮಾಹಿತಿ ಒದಗಿಸಲು ತಿಳಿಸಿದರು.
ನಿರಂತರ ಸುರಿಯುತ್ತಿರುವ ಮಳೆಯಲ್ಲೂ ಜಲಾಶಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಜಲಾಶಯದ ಕಾರ್ಯನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ.
ಪ್ರಸ್ತುತ ಜಲಾಶಯ ಮಟ್ಟ 490.05 ಮೀಟರ್ ಮಟ್ಟ. (492.250 ಗರಿಷ್ಠ ಮಟ್ಟ )26.42 TMC ಪ್ರಸ್ತುತ ಜಲಾಶಯದಲ್ಲಿ ಸಂಗ್ರಹವಾದ ನೀರು. ( 33.31 ಗರಿಷ್ಟ ಟಿಎಮ್‌ಸಿ ಜಲಾಶಯದ ಸಂಗ್ರಹ ಗಾತ್ರ)