ಫ್ರೀ ಪ್ರಯಾಣಕ್ಕೆ ಅವನು.. ಅವಳಾದ…

0
15

ಹುಬ್ಬಳ್ಳಿ: ಸರ್ಕಾರದ ಯೋಜನೆಗಳನ್ನು ಅನುಭವಿಸಲು ಜನ ನಕಲಿ ಆಧಾರ್, ವೋಟರ್ ಐಡಿ ಸೇರಿದಂತೆ ಅನೇಕ ಖೊಟ್ಟಿ ದಾಖಲೆ ಸೃಷ್ಟಿಸೋದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಭೂಪ ಶಕ್ತಿ ಯೋಜನೆಯ ಸಲುವಾಗಿ ತನ್ನ ವೇಷವನ್ನೇ ಬದಲಾಯಿಸಿಕೊಂಡಿದ್ದಾನೆ.
ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾದ ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಮೂರ್ನಾಲ್ಕು ಜನ ಯುವಕರು ಸೀರೆಯುಟ್ಟು ಬಸ್‌ಗಾಗಿ ಕಾಯುವ ದೃಶ್ಯ ವೈರಲ್ ಆಗಿತ್ತು. ಈ ವಿಡಿಯೋ ಮನೋರಂಜನೆಗಾಗಿ ಮಾಡಲಾಗಿತ್ತಾದರೂ, ಧಾರವಾಡ ಜಿಲ್ಲೆಯಲ್ಲಿ ಇಂತಹದ್ದೇ ನೈಜ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.
ಥೇಟ್ ಮಹಿಳೆಯರಂತೆ ಬುರ್ಖಾ ಹಾಕಿಕೊಂಡ ಪುರುಷನೋರ್ವ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಬಸ್ ಪ್ರಯಾಣಿಕರು ಹಾಗೂ ಗ್ರಾಮಸ್ಥರು, ಬುರ್ಖಾಧಾರಿಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಒತ್ತಾಯದಿಂದ ಬುರ್ಖಾ ತೆಗೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಸಾರ್ವಜನಿಕರು ಈ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಬುರ್ಖಾ ಧರಿಸಿದ್ದ ವ್ಯಕ್ತಿ, ನಾನು ಭಿಕ್ಷಾಟನೆಗೆ ಬಂದಿದ್ದೇನೆ. ನನ್ನ ಹೆಸರು ವೀರಭದ್ರಯ್ಯ ನಿಂಗಯ್ಯ ಮಠಪತಿ ಎಂದು ಹೇಳಿಕೊಂಡಿದ್ದು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಘೋಡಗೋರಿ ಗ್ರಾಮದವನು ಎಂದು ಹೇಳಿಕೊಂಡಿದ್ದಾನೆ.

Previous articleಗೋಹತ್ಯೆ ಪ್ರಕರಣ: ಶಾಸಕ ಸಲಗರ್ ಸೇರಿ ೯ ಜನರ ವಿರುದ್ಧ ಕೇಸ್
Next articleಚಿಗರಿಗೆ ಚಿಗರಿ ಡಿಕ್ಕಿ: ತಪ್ಪಿದ ಅನಾಹುತ