ಮಂಗಳೂರು: ಬಿರುಗಾಳಿಗೆ ವಿದ್ಯುತ್ ಕಂಬದ ತಂತಿಗಳು ಪರಸ್ಪರ ಸ್ಪರ್ಶಿಸಿ ಟ್ರಿಪ್ ಆಗಿ ಸ್ಥಳೀಯರಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು ಸ್ಥಳಕ್ಕೆ ಬಂದ ಮೆಸ್ಕಾಂ ಲೈನ್‌ಮ್ಯಾನ್ ನೆರೆ ನೀರಲ್ಲಿ ಮುಳುಗಿ ಕಂಬವನ್ನೇರಿ ತುರ್ತು ದುರಸ್ತಿ ಕಾರ್ಯ ನಡೆಸಿದ ವೀಡಿಯೋ ವೈರಲ್ ಆಗಿದೆ.
ಮಂಗಳವಾರ ದೇರಳಕಟ್ಟೆಯ ಬೆರಿಕೆ ಎಂಬಲ್ಲಿ ಬಿರುಗಾಳಿ, ಮಳೆಗೆ ವಿದ್ಯುತ್ ಕಂಬದ ತಂತಿಗಳು ಪರಸ್ಪರ ಸ್ಪರ್ಶಿಸಿ ಸ್ಥಳೀಯ 40ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ ಸ್ಥಳೀಯರು ಮೆಸ್ಕಾಂಗೆ ದೂರು ನೀಡಿದ್ದರು. ಸ್ಥಳಕ್ಕೆ ಮೆಸ್ಕಾಂನ ಲೈನ್‌ಮ್ಯಾನ್ ವಸಂತ್ ಎಂಬವರು ಭೇಟಿ ನೀಡಿದ್ದಾರೆ. ಆದರೆ ಟ್ರಿಪ್ ಆಗಿದ್ದ ವಿದ್ಯುತ್ ಕಂಬವು ನೆರೆ ನೀರಿಂದ ಸಂಪೂರ್ಣ ಜಲಾವೃತಗೊಂಡಿತ್ತು. ನೆರೆ ನೀರನ್ನ ಲೆಕ್ಕಿಸದ ವಸಂತ್ ಅವರು ಸ್ಥಳೀಯರೋರ್ವರ ಮಾರ್ಗದರ್ಶನದಿಂದ ನೀರಲ್ಲಿ ಮುಳುಗಿ ಒದ್ದೆಯಾಗಿಯೇ ಸಾಗಿ ಕಂಬವನ್ನೇರಿ ತುರ್ತು ದುರಸ್ಥಿ ಕಾರ್ಯ ನಡೆಸಿ ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ವಿದ್ಯುತ್ ಸರಬರಾಜಲ್ಲಿ ಸ್ವಲ್ಪ ವ್ಯತ್ಯಯವಾದರೂ ಮೆಸ್ಕಾಂ ಸಿಬ್ಬಂದಿಗೆ ಹಿಡಿ ಶಾಪ ಹಾಕುವವರೇ ಹೆಚ್ಚು. ಆದರೆ ಬಿರುಗಾಳಿ, ಮಳೆ, ಉರಿ ಬಿಸಿಲನ್ನೂ ಲೆಕ್ಕಿಸದೆ ತುರ್ತು ಕಾರ್ಯಾಚರಣೆ ಮಾಡಿ ಜನರಿಗೆ ವಿದ್ಯುತ್ ಸಂಪರ್ಕ ಒದಗಿಸುವ ಲೈನ್‌ಮ್ಯಾನ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.