ಜೈನಮುನಿ ಮೃತದೇಹ ಹೊರತೆಗೆಯಲು ಜೆಸಿಬಿ ಕಾರ್ಯಾಚರಣೆ

0
19

ಚಿಕ್ಕೋಡಿ: ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹಿರೇಕೋಡಿ ನಂದಿಆಶ್ರಮದ ಜೈನಮುನಿ ಕಾಮರಾಜಕುಮಾರ್ ನಂದಿ ಮಹಾರಾಜರು ಹತ್ಯೆ ಮಾಡಿ ರಾಯಬಾಗ ತಾಲೂಕಿನ ಕಟಕಬಾವಿಯ ಜಮೀನಿನ ತೆರೆದ ಕೊಳವೆಬಾವಿಯಲ್ಲಿ ಮೃತದೇಹ ಹಾಕಲಾಗಿದ್ದು, ಪೊಲೀಸರು ಮೃತದೇಹ ಹೊರತೆಗೆಯಲು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಶನಿವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಸಂಜೀವ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಬುಧವಾರ ರಾತ್ರಿಯಿಂದ ಸ್ವಾಮೀಜಿ ಕಾಣೆಯಾಗಿರುವ ಬಗ್ಗೆ ಶುಕ್ರವಾರ ಭಕ್ತರು ದೂರು ನೀಡಿದ್ದರು. ಭಕ್ತರ ದೂರಿನ ಮೇರೆಗೆ ತನಿಖೆ ಕೈಗೊಂಡು ಬುಧವಾರ ಹಾಗೂ ಹಿಂದಿನ ದಿನಗಳಲ್ಲಿ ಆಶ್ರಮಕ್ಕೆ ಯಾರು ಬಂದು ಹೋಗಿದ್ದರೆಂಬುದರ ಬಗ್ಗೆ ವಿಚಾರಣೆ ನಡೆಸಲಾಯಿತು. ಸ್ವಾಮೀಜಿಗೆ ಪರಿಚಯವಿದ್ದ ವ್ಯಕ್ತಿಯ ಬಂದುಹೋಗಿರುವ ಮಾಹಿತಿ ಲಭ್ಯವಾಯಿತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಶ್ರಮದಲ್ಲಿ ಮಹಾರಾಜರನ್ನು ಕೊಲೆ ಮಾಡಿ ಬೇರೆ ಕಡೆಗೆ ಶವ ಸಾಗಿಸಿ ತೆರೆದ ಕೊಳವೆಬಾವಿಯಲ್ಲಿ ಬಿಸಾಕಿದ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಕೃತ್ಯಕ್ಕೆ ಸಹಕಾರ ನೀಡಿದ್ದ ಮತ್ತೋರ್ವ ಸೇರಿ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಜೈನಮುನಿಗಳು ಆರೋಪಿಗಳಿಗೆ ಹಣ ನೀಡಿದ್ದು, ಆ ಹಣ ವಾಪಸ್ ಕೊಡಲು ಒತ್ತಾಯ ಮಾಡಲಾರಂಭಿಸಿದ್ದರಿAದ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಜೆಸಿಬಿಗಳ ಮೂಲಕ ಕೊಳವೆಬಾವಿಯಿಂದ ಮೃತದೇಹ ಹೊರತೆಗೆಯುವ ಕಾರ್ಯಾಚರಣೆ ನಡೆದಿದೆ. ಸಾಕ್ಷ್ಯಾಧಾರ ಕಲೆಹಾಕಿ ನ್ಯಾಯಾಲಯಕ್ಕೆ ನೀಡಬೇಕಿರುವ ಹಿನ್ನೆಲೆ ಸದ್ಯಕ್ಕೆ ಕಾರ್ಯಾಚರಣೆ ಸ್ಥಳಕ್ಕೆ ಮಾಧ್ಯಮಗಳು ಸೇರಿ ಯಾರಿಗೂ ಪ್ರವೇಶವಿಲ್ಲ. ಪ್ರಕರಣದ ತನಿಖೆ ಮುಂದುವರಿದಿದೆ. ಕೊಲೆಗೆ ಬೇರೆ ವ್ಯವಹಾರ ಏನಾದರೂ ಇತ್ತಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ವೈಯಕ್ತಿಕ ಕಾರಣಕ್ಕೆ ಹತ್ಯೆ ನಡೆದಿದೆ. ಆರೋಪಿಗಳು ಹೇಳಿದ ಹಲವು ಪ್ರದೇಶಗಳಲ್ಲಿ ಶೋಧ ಮಾಡಿದ್ದೇವೆ ಎಂದು ಎಸ್‌ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದರು.
ಮೃತದೇಹ ಹೊರತೆಗೆಯುವ ಕಾರ್ಯಾಚರಣೆ ನಡೆದಿರುವ ಹಿನ್ನೆಲೆ ಖಟಕಬಾವಿ ಗ್ರಾಮ ಗದ್ದೆಗೆ ತೆರಳುವ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಮಾರ್ಗ ಹಾಗೂ ಖಟಕಬಾವಿ-ಮುಗಳಖೋಡ ರಸ್ತೆ ಬಂದ್ ಮಾಡಲಾಗಿದ್ದು, ೧೦೦ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಶ್ರೀ ಕುಮಾರ್ ನಂದಿ ಮಹಾರಾಜರು ಕಳೆದ ೧೫ ವರ್ಷಗಳಿಂದ ನಂದಿ ಪರ್ವತದಲ್ಲಿ ವಾಸವಾಗಿದ್ದರು. ಕಳೆದ ಬುಧವಾರ ಜೈನಮುನಿಗಳು ನಾಪತ್ತೆಯಾಗಿದ್ದರು. ತಾವು ವಾಸವಿದ್ದ ಕೋಣೆಯಲ್ಲಿ ಪಿಂಚಿ, ಕಮಂಡಲ ಹಾಗೂ ಮೊಬೈಲ್ ಮಾತ್ರ ಇದ್ದವು. ಬಳಿಕ ಗ್ರಾಮಸ್ಥರು ಜೈನ್‌ಬಸದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸಿದರೂ ಸುಳಿವು ಸಿಗದಿದ್ದಾಗೆ ಶುಕ್ರವಾರ ಬೆಳಗ್ಗೆ ಆಶ್ರಮದ ಟ್ರಸ್ಟ್ ಅಧ್ಯಕ್ಷರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮುನಿಗಳ ಹತ್ಯೆ ಸುದ್ದಿ ತಿಳಿದು ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಹಿರೇಕೋಡಿಯಲ್ಲಿ ನೀರವಮೌನ ಆವರಿಸಿದೆ. ಮುಂಜಾಗ್ರತಾ ಕ್ರಮವಾಗಿ ಹಿರೇಕೋಡಿ ಗ್ರಾಮದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.

Previous articleಕೊರೊನಾ ವೇಳೆ ಭ್ರಷ್ಟಾಚಾರ ನಡೆದಿಲ್ಲ ಎಂದು ದೀಪ ಹಚ್ಚಲಿ
Next articleಕಲಬುರಗಿ ವಿಮಾನ ನಿಲ್ದಾಣ: ಕಲ್ಯಾಣ ಕರ್ನಾಟಕ ಭಾಗದ ಬಹುಮುಖ್ಯ ಸಂಪರ್ಕ ಕೊಂಡಿ