ಕೊಳವೆಬಾವಿಯೊಳಗೆ ಪತ್ತೆಯಾಯ್ತು ಮುನಿಗಳ ಮೃತದೇಹ

0
26

ಚಿಕ್ಕೋಡಿ: ಹಿರೇಕೋಡಿ ನಂದಿ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಮೃತದೇಹ ೨೦ ಅಡಿ ಆಳದ ಕೊಳವೆಬಾವಿಯಲ್ಲಿ ಪತ್ತೆಯಾಗಿದ್ದು, ಕೈ, ಕಾಲು, ದೇಹವನ್ನು ೯ ಭಾಗಗಳಾಗಿ ತುಂಡರಿಸಿ ಬಟ್ಟೆಯಲ್ಲಿ ಸುತ್ತಿ ಹಾಕಿರುವುದು ಬೆಳಕಿಗೆ ಬಂದಿದೆ.
ಜೆಸಿಬಿ ಮೂಲಕ ಬೆಳಗ್ಗೆ ೬ ಗಂಟೆಯಿಂದ ಶೋಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರಿಗೆ ಮಧ್ಯಾಹ್ನ ೨.೩೦ರ ಸುಮಾರಿಗೆ ೨೦ ಅಡಿ ಆಳದಲ್ಲಿ ಮುನಿಗಳ ಮೃತದೇಹದ ಅವಶೇಷಗಳು ಪತ್ತೆಯಾದವು. ಅವುಗಳನ್ನು ಹೊರತೆಗೆದ ಪೊಲೀಸ್ ಸಿಬ್ಬಂದಿ ಬಳಿಕ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಸ್ವಂತ ಜಮೀನಿನ ಕೊಳವೆಬಾವಿಗೆ ಎಸೆದಿದ್ದ ಆರೋಪಿ: ಸ್ವಾಮೀಜಿಯೊಂದಿಗೆ ಒಡನಾಟ ಹೊಂದಿದ್ದ ರಾಯಬಾಗ ತಾಲೂಕಿನ ಖಡಕಲಾಟ ಗ್ರಾಮದ ಆರೋಪಿ ಮುನಿಗಳಿಗೆ ನಿಕಟವಾಗಿದ್ದ. ಮುನಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಆರೋಪಿ ಮುನಿಗಳು ವಾಪಸ್ ಹಣ ಕೇಳಿದ್ದರಿಂದ ಕೋಪಗೊಂಡು ಪ್ಲಾನ್ ಮಾಡಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮುನಿಗಳ ಸ್ವಾಮೀಜಿ ಪ್ರಕಾರ ಬುಧವಾರ ರಾತ್ರಿ ಆಶ್ರಮಕ್ಕೆ ಬಂದಿದ್ದ ಆರೋಪಿಗಳು ಕರೆಂಟ್ ಶಾಕ್ ಹೊಡೆಸಿ ಕೊಲೆ ಮಾಡಿ ಬಳಿಕ ಮೃತದೇಹವನ್ನು ವಾಹನದಲ್ಲಿ ಹಾಕಿಕೊಂಡು ರಾಯಬಾಗದ ಖಡಕಲಾಟ ಗ್ರಾಮಕ್ಕೆ ತಂದು ಮೃತದೇಹ ಪೀಸ್ ಪೀಸ್ ಮಾಡಿ ಸ್ವಂತ ಜಮೀನಿನಲ್ಲಿದ್ದ ಕೊಳವೆಬಾವಿಗೆ ಹಾಕಿದ್ದ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕೃತ್ಯದಲ್ಲಿ ಇಬ್ಬರು ಆರೋಪಿಗಳು ಭಾಗಿಯಾಗಿರುವುದು ಪತ್ತೆಯಾಗಿದೆ. ಖಡಕಲಾಟ ಗ್ರಾಮದ ಮುಖ್ಯ ಆರೋಪಿಗೆ ಚಿಕ್ಕೋಡಿಯ ಯುವಕ ಸಹಾಯ ಮಾಡಿದ್ದಾನೆ. ಇಬ್ಬರನ್ನು ಬಂಧಿಸಿದ್ದು, ಬೇರೆ ಬೇರೆ ಆಯಾಮದಿಂದ ತನಿಖೆ ಮುಂದುರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Previous articleಮೆಕ್‌ಡೊನಾಲ್ಡ್‌ ಟೊಮೆಟೊ ಖರೀದಿಸಲು ಸಾಧ್ಯವಿಲ್ಲ
Next articleಪಂಚಾಯತ್​ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ