ಕರ್ನಾಟಕ ಬಂದ್‌ಗೆ ಕಾಫಿ ನಾಡಲ್ಲಿ ಉತ್ತಮ ಪ್ರತಿಕ್ರಿಯೆ

0
31

ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ನೀಡಲಾದ ಕರ್ನಾಟಕ ಬಂದ್ ಗೆ ಕಾಫಿನಾಡು ನಗರದಲ್ಲಿ ಹೋರಾಟ ತೀವ್ರಗೊಂಡಿದೆ.
ಚಿಕ್ಕಮಗಳೂರು ನಗರದ ತಾಲೂಕು ಕಚೇರಿಯಿಂದ ಹನುಮಂತಪ್ಪ ವೃತ್ತದವರೆಗೆ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು. ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ರೈತ ಸಂಘ, ಕರವೇ, ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಕಾರ್ಯಕರ್ತರು ಉರುಳುಸೇವೆ ನಡೆಸಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಒಂದು ಕಡೆ ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ತಲೆ ಮೇಲೆ ಖಾಲಿ ಕೊಡ ಹೊತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ, ಡಿಕೆಶಿ ಪ್ರತಿಕೃತಿಗಳನ್ನು ದಹಿಸಲು ಯತ್ನಿಸಿ, ವಿರೋಧ ವ್ಯಕ್ತಪಡಿಸಿ, ಪ್ರತಿಕೃತಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಈ ಸಂದರ್ಭದಲ್ಲಿ ಕಾರ್ಯರ್ತರಿಗೂ ಪೊಲೀಸರಿಗೂ ನಡುವೆ ಎಳೆದಾಟ ನಡೆಯಿತಲ್ಲದೆ, ಮಾತಿನ ಚಕಮಕಿ ನಡೆಯಿತು. ಸಿಎಂ ಪ್ರತಿಕೃತಿ ಹಿಡಿದು ಎಳೆದಾಡಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ವಿರೋಧದ ನಡುವೆಯೂ ಪ್ರತಿಕೃತಿ ದಹನ ಪೂರೈಸಿದರು. ಚಿಕ್ಕಮಗಳೂರು ನಗರದ ಬಿಜೆಪಿ ಕಚೇರಿ ಬಳಿ ಘಟನೆ ನಡೆಯಿತು.
ತಮಟೆ ಚಳುವಳಿ: ನಗರದಲ್ಲಿ ತಮಟೆ ಬಡಿಯುತ್ತಾ, ಖಾಲಿ ಮಡಕೆ ಹಿಡಿದು ಪ್ರದರ್ಶನ ನಡೆಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪ ಗೌಡರಿಂದ ತಮಟೆ ಚಳವಳಿ ಚಿಕ್ಕಮಗಳೂರು ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ನಡೆಯಿತು.
ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆದಿದ್ದು, ಹೆಗಲ ಮೇಲೆ ಖಾಲಿ ಮಡಕೆ ಹೊತ್ತು ತಮಟೆ ಬಡಿಯುತ್ತಾ ರೈತ ಸಂಘ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

Previous articleಮಂಡ್ಯ ಬಂದ್ ಸಂಪೂರ್ಣ ಯಶಸ್ವಿ
Next articleಚಿತ್ರದುರ್ಗ ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ