ಏರ್‌ಬಸ್‌ನಲ್ಲಿ ಮೊದಲ ದಿನ 121 ಜನ ಪ್ರಯಾಣ

0
26

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಮುಂಬೈಗೆ ೧೮೬ ಆಸನಗಳು ಇರುವ ಏರ್‌ಬಸ್ ವಿಮಾನ ಸೇವೆಯನ್ನು ಇಂಡಿಗೋ ಸಂಸ್ಥೆ ರವಿವಾರ ಆರಂಭಿಸಿತು.
ಈ ಮೊದಲು ಕೇವಲ ೭೮ ಆಸನಗಳ ಸಾಮರ್ಥ್ಯದ ಎಟಿಆರ್ ವಿಮಾನ ಸೇವೆ ಇತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನವಿ ಮೇರೆಗೆ ಇಂಡಿಗೋ ವಿಮಾನಯಾನ ಸಂಸ್ಥೆಯು ರವಿವಾರದಿಂದ ೧೮೬ ಆಸನಗಳ ಸಾಮರ್ಥ್ಯದ ಏರಬಸ್ ವಿಮಾನ ಸೇವೆ ಆರಂಭಿಸುವ ಮೂಲಕ ಈ ಭಾಗದ ವಿಮಾನ ಪ್ರಯಾಣಿಕರ ಬಹುದಿನದ ಬೇಡಿಕೆಗೆ ಸ್ಪಂದಿಸಿದೆ.
ಕೇವಲ ಒಂದು ತಾಸಿನಲ್ಲಿ ಹುಬ್ಬಳ್ಳಿಯಿಂದ ಮುಂಬೈಗೆ ಹಾಗೂ ಮುಂಬೈನಿಂದ ಹುಬ್ಬಳ್ಳಿಗೆ ತಲುಪಬಹುದಾದ ಈ ಏರಬಸ್ ವಿಮಾನ ಸೇವೆಗೆ ಮೊದಲ ದಿನವೇ ಪ್ರಯಾಣಿಕರಿಂದ ಭಾರಿ ಉತ್ಸುಕತೆ ಕಂಡು ಬಂದಿತು. ರವಿವಾರ ರಜೆ ದಿನವಾದರೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಉಭಯನಗರಗಳಿಗೆ ಪ್ರಯಾಣಿಸಿದರು.
ಮೊದಲ ದಿನ ಈ ಏರ್‌ಬಸ್ ವಿಮಾನದಲ್ಲಿ ಮುಂಬೈನಿಂದ ೧೪೦ ಪ್ರಯಾಣಿಕರು ಹುಬ್ಬಳ್ಳಿಗೆ ಆಗಮಿಸಿದರೆ ಹುಬ್ಬಳ್ಳಿಯಿಂದ ಮುಂಬೈಗೆ ೧೨೧ ಪ್ರಯಾಣಿಕರು ಪ್ರಯಾಣ ಬೆಳೆಸಿದರು. ಪ್ರಯಾಣಿಕರ ಬೇಡಿಕೆಗನುಗುಣವಾಗಿ ಈ ವಿಮಾನಯಾನ ಸೇವೆ ಆರಂಭಿಸಿದ್ದು, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯನ್ನು ಬಳಸಿಕೊಳ್ಳುವ ವಿಶ್ವಾಸವಿದೆ ಎಂದು ಇಂಡಿಗೋ ಸಂಸ್ಥೆಯ ಮೂಲಗಳು ತಿಳಿಸಿವೆ.
ಇದು ಮುಂದುವರಿದ ವಿಮಾನ ಯಾನ ಸೇವೆ ಆಗಿದ್ದರಿಂದ ರವಿವಾರ ವಿಮಾನ ನಿಲ್ದಾಣದಲ್ಲಿ ಈ ಕುರಿತು ಉದ್ಘಾಟನೆ ಕಾರ್ಯಕ್ರಮ, ವಾಟರ್ ಕೆನಾನ್ ಆಗಲಿ ಇರಲಿಲ್ಲ.
ವಿಮಾನ ಸಮಯ: ಹುಬ್ಬಳ್ಳಿ-ಮುಂಬೈ ಈ ( ೬ಇ ೯೩೬) ನೂತನ ವಿಮಾನ ಸೇವೆ ಸಮಯ ಇಂತಿದ್ದು, ಮಧ್ಯಾಹ್ನ ೧೨ ಮುಂಬೈನಿಂದ ಹೊರಟು ಮಧ್ಯಾಹ್ನ ೧.೧೫ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ಮಧ್ಯಾಹ್ನ ೧.೪೫ಕ್ಕೆ ಹೊರಟು ಮಧ್ಯಾಹ್ನ ೨.೪೦ಕ್ಕೆ ಮುಂಬೈ ವಿಮಾನ ನಿಲ್ದಾಣ ತಲುಪಲಿದೆ.

Previous articleರೈಲು ಅಪಘಾತ: ಮೂವರು ಸಾವು
Next articleಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ದಾಳಿ