ಕಾರ್ಕಳ: ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ೯:೩೦ರ ಸುಮಾರಿಗೆ ಬೆಳ್ಮಣ್ ಪೇಟೆಯಲ್ಲಿ ನಡೆದಿದೆ.
ಮೃತರನ್ನು ಪಿಲಾರು ನಿವಾಸಿ ಪ್ರವೀಣ್(೩೦) ಎಂದು ಗುರುತಿಸಲಾಗಿದೆ.
ಕಳೆದ ರಾತ್ರಿ ಭಾರೀ ಮಳೆ ಸುರಿಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಪ್ರವೀಣ್ ಅವರು ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯ ಬೆಳ್ಮಣ್ ಪೇಟೆಯಲ್ಲಿ ತನ್ನ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ರಸ್ತೆ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮರ ಏಕಾಏಕಿ ಉರುಳಿ ಅವರ ಮೈಮೇಲೆಯೇ ಬಿದ್ದಿದೆ. ಮರದಡಿಯಲ್ಲಿ ಸಿಲುಕಿಕೊಂಡಿದ್ದ ಅವರನ್ನು ಸ್ಥಳೀಯರು ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಮರ ಉರುಳಿ ಬೀಳುವ ೨ ಸೆಕೆಂಡುಗಳ ಮುಂಚೆ ಗೂಡ್ಸ್ ಟೆಂಪೊವೊಂದು ಇದೇ ರಸ್ತೆಯಲ್ಲಿ ಹಾದು ಹೋಗಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಅಪಘಾತದ ದೃಶ್ಯಾವಳಿ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.