ಲವ್ ಸ್ಟೋರಿಯಾದರೂ, ಥ್ರಿಲ್ಲಿಂಗ್ ಪ್ಯಾಟರ್ನ್ನಲ್ಲಿ ಹೇಳಿರುವುದು ಏಳುಮಲೆ ಚಿತ್ರದ ವಿಶೇಷವಂತೆ. ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಭಾಗದಲ್ಲಿ ನಡೆದ ಪ್ರೇಮ ಪ್ರಕರಣವನ್ನು ಸಿನಿಮಾವನ್ನಾಗಿಸಿ ತೆರೆಗೆ ತಂದಿದ್ದು, ಈಗಾಗಲೇ ಚಿತ್ರದ ಪೇಯ್ಡ್ ಪ್ರೀಮಿಯರ್‌ಗಳು ಆರಂಭವಾಗಿ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.
ರಕ್ಷಿತಾ ಸಹೋದರ ರಾಣಾ ಮತ್ತು ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ಏಳುಮಲೆ ಸಿನಿಮಾದ ನಾಯಕ-ನಾಯಕಿ. ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ ಮುಂತಾದವರು ಪೋಷಕ ಪಾತ್ರಧಾರಿಗಳು. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಏಳುಮಲೆ ಚಿತ್ರ ಸಿದ್ಧಗೊಂಡಿದ್ದು, ಈ ವಾರ ಕನ್ನಡದಲ್ಲಿ ಮೊದಲು ಬಿಡುಗಡೆ ಆಗಲಿದೆ.
ಪ್ರಮೋಶನ್‌ನ ಭಾಗವಾಗಿ ಇತ್ತೀಚೆಗೆ ಟ್ರೇಲರ್ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು ಚಿತ್ರತಂಡ. ನಟ ಶರಣ್, ಡಾಲಿ ಧನಂಜಯ್, ನವೀನ್ ಶಂಕರ್ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು. ಏಳುಮಲೆ ಸಿನಿಮಾವನ್ನು ಪುನೀತ್ ರಂಗಸ್ವಾಮಿ ನಿರ್ದೇಶನ ಮಾಡಿದ್ದಾರೆ. ಇದವರ ಮೊದಲ ಚಿತ್ರ. ನಿರ್ಮಾಣ ಮಾಡಿರುವುದು ತರುಣ್ ಸುಧೀರ್. ಅಟ್ಲಾಂಟ ನಾಗೇಂದ್ರ ಕೂಡ ಕೈಜೋಡಿಸಿದ್ದಾರೆ.
ಸಮಾರಂಭಕ್ಕೆ ಆಗಮಿಸಿದ ಎಲ್ಲರೂ ಒಂದು ಸಿನಿಮಾ ಮಾಡುವಾಗ ಅದರ ಹಿಂದೆ ತರುಣ್ ಎಷ್ಟೆಲ್ಲ ಶ್ರಮ, ಕೆಲಸ ಮಾಡಿರುತ್ತಾರೆ ಎಂಬುದನ್ನು ನೆನಪಿಸಿಕೊಂಡು ಕೊಂಡಾಡಿದರು. ಅವರು ಒಂದು ಸಿನಿಮಾವನ್ನು ಹೇಗೆ ಕಟ್ಟಿ ನಿಲ್ಲಿಸುತ್ತಾರೆ ಎಂಬುದಕ್ಕೆ ನಾನೇ ಸಾಕ್ಷಿ. ಹೊಸ ತಂತ್ರಜ್ಞರು, ಕಲಾವಿದರಿಂದ ಸಮರ್ಪಕ ಕೆಲಸ ತೆಗೆಯುವುದರಲ್ಲಿ ತರುಣ್ ನಿಷ್ಣಾತ ಎಂದರು ಶರಣ್.
ಪ್ರೀತಿಯೇ ಶ್ರೇಷ್ಠ ಎಂಬುದನ್ನು ಏಳುಮಲೆ ಸಿನಿಮಾ ಸಾರುತ್ತದೆ ಎನ್ನುತ್ತಾರೆ ನಿರ್ಮಾಪಕ ತರುಣ್. ಡಿ.ಇಮ್ಮಾನ್ ಸಂಯೋಜನೆಯ ಹಾಡುಗಳು ಈಗಾಗಲೇ ಸದ್ದು ಮಾಡಿದ್ದು, ಸಿನಿಮಾ ಕೂಡಾ ಅದೇ ಜಾಡು ಹಿಡಿದು ಸಾಗುವ ನಿರೀಕ್ಷೆಯಲ್ಲಿದೆ ಏಳುಮಲೆ ಚಿತ್ರತಂಡ.