ನಟ ಕಿಚ್ಚ ಸುದೀಪ್ ಮುಂದಿನ ಚಿತ್ರ ಶೀರ್ಷಿಕೆ ಕುರಿತಂತೆ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿದ್ದ ಚರ್ಚೆಗೆ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ. ಡಿಸೆಂಬರ್‌ಗೆ ಸುದೀಪ್ ಅವರ ಹೊಸ ಚಿತ್ರ ತೆರೆಗೆ ಬರಲಿದ್ದು, ʻಮಾರ್ಕ್ʼ (MARK) ಎಂದು ಹೆಸರಿಡಲಾಗಿದೆ.
ಸೆಪ್ಟೆಂಬರ್ 2ರಂದು ತಮ್ಮ 52ನೇ ಜನ್ಮದಿನ ಆಚರಿಸಿಕೊಳ್ಳಲಿರುವ ಕಿಚ್ಚ ಸುದೀಪ್ ಮತ್ತು ಅವರ ಅಭಿಮಾನಿಗಳಿಗೆ ಚಿತ್ರ ತಂಡ ಒಂದು ದಿನದ ಮುನ್ನವೇ ಟೈಟಲ್, ಟೀಸರ್ ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಿದಂತಾಗಿದೆ.
`K47′ ಎಂಬ ಹೆಸರಿನಲ್ಲಿ ಚಿತ್ರೀಕರಣವಾಗುತ್ತಿದ್ದ ಸಿನಿಮಾಕ್ಕೆ ಟೈಟಲ್ ಹೆಸರು ಏನಿರಬಹುದು ಎಂದು ಈಗಾಗಲೇ ಚರ್ಚೆಗಳು ಜೋರಾಗಿದ್ದವು ಇದರ ಮಧ್ಯೆ ಟೈಟಲ್ ಬಿಡುಗಡೆ ಜತೆಗೆ ಟೀಸರ್ ಕೂಡ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೇವಲ ಎರಡು ಗಂಟೆಗಳಲ್ಲಿಯೇ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ದಾಟಿದೆ.
ಕಳೆದ ವರ್ಷವೂ ಕೂಡ ಡಿಸೆಂಬರ್‌ನಲ್ಲಿಯೇ ತೆರೆಕಂಡಿದ್ದ ಸುದೀಪ್ ಅವರ ʼಮ್ಯಾಕ್ಸ್ʼ ಚಿತ್ರ ಕೂಡ ಸಖತ್ ಸೌಂಡ್ ಮಾಡಿತ್ತು. ಈಗ ಮತ್ತೇ ಅದೇ ಚಿತ್ರತಂಡದೊಂದಿಗೆ ಎರಡನೇ ಸಿನಿಮಾ ಮಾಡುತ್ತಿರುವ ಸುದೀಪ್‌ಗೆ ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳಿದ್ದಾರೆ. ಇಬ್ಬರ ಕಾಂಬಿನೇಷನ್ನಲ್ಲಿ ಬರುತ್ತಿರುವುದು ಇದು ಎರಡನೇ ಸಿನಿಮಾ ಆಗಿದೆ.
ಸತ್ಯಜ್ಯೋತಿ ಫಿಲಂಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ಗಳು ಜೊತೆಯಾಗಿ ನಿರ್ಮಿಸುತ್ತಿರುವ ಈ ಸಿನಿಮಾಗೆ ಅರ್ಜುನ್ ತ್ಯಾಗರಾಜನ್ ಮತ್ತು ಸೆಂಥಿ ತ್ಯಾಗರಾಜನ್ ಬಂಡವಾಳ ಹಾಕಿದ್ದಾರೆ. ಚಿತ್ರದ ತಾಂತ್ರಿಕ ತಂಡದಲ್ಲಿ ಅನುಭವಿ ಕಲಾವಿದರು ಸೇರಿಕೊಂಡಿದ್ದಾರೆ.
ಚಿತ್ರಕ್ಕೆ ಖ್ಯಾತ ಸಂಗೀತ ಸಂಯೋಜಕ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಜೊತೆಗೆ, ಶೇಖರ್ ಚಂದ್ರ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಎಂ.ಟಿ. ಶ್ರೀರಾಮ್ ಕಾರ್ಯನಿರ್ವಹಿಸುತ್ತಿದ್ದಾರೆ.