Kantara Chapter 1: ತೆರೆಮರೆಯ ನೋವು ತೋಡಿಕೊಂಡ ರಿಷಬ್ ಶೆಟ್ಟಿ

0
21

ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್-1’ ಸಿನಿಮಾ ಪ್ರೇಕ್ಷಕರ ಮನ ಗೆದ್ದು ಭರ್ಜರಿ ಯಶಸ್ಸು ಗಳಿಸಿದೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲೂ ಈ ಸಿನಿಮಾ ಮೆಚ್ಚುಗೆ ಪಡೆದಿದೆ. ಇದು ರಿಷಬ್ ದೀರ್ಘಕಾಲದ ಕನಸಾಗಿದ್ದು, ಅದಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಪ್ರೇಕ್ಷಕರಿಂದ ಸಿಕ್ಕ ಪ್ರತಿಕ್ರಿಯೆ ಪರಿಶ್ರಮಕ್ಕೆ ಸಿಕ್ಕ ಫಲ ಎನ್ನುತ್ತಾರೆ ರಿಷಬ್.

ಈ ಭರ್ಜರಿ ಯಶಸ್ಸಿನ ಹಿಂದೆ ರಿಷಬ್ ಶೆಟ್ಟಿ ಅನುಭವಿಸಿದ ನೋವು, ಕಷ್ಟ ಅಷ್ಟಿಷ್ಟಲ್ಲ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣದ ವೇಳೆ ರಿಷಬ್ ಶೆಟ್ಟಿ ಅನುಭವಿಸಿದ ಸಂಕಷ್ಟವನ್ನು ಸ್ವತಃ ಅವರೇ ವಿವರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಾಲು ಊದಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿರುವ ಅವರು, “ಕಾಂತಾರ ಚಾಪ್ಟರ್-1 ಕ್ಲೈಮ್ಯಾಕ್ಸ್ ಶೂಟಿಂಗ್‌ನ ಸಮಯ, ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ” ಎಂದು ಬರೆದುಕೊಂಡಿದ್ದಾರೆ.

ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ರಿಷಬ್ ಸಮರ್ಪಣಾ ಭಾವಕ್ಕೆ ಬೆರಗಾಗಿದ್ದಾರೆ. ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ ಕ್ಲೈಮ್ಯಾಕ್ಸ್ ಹಿಂದೆ ಇಂತಹ ಕಷ್ಟ ಅಡಗಿದೆ ಎಂದು ತಿಳಿದು ಎಲ್ಲರೂ ಶಾಕ್ ಆಗಿದ್ದಾರೆ. ರಿಷಬ್ ಈ ಮಾತುಗಳು ‘ಕಾಂತಾರ’ ಕೇವಲ ಒಂದು ಸಿನಿಮಾ ಅಲ್ಲ, ಅದೊಂದು ಭಾವನಾತ್ಮಕ ಪಯಣ ಎಂಬುದನ್ನು ಸಾರುತ್ತವೆ.

ಸಿನಿಮಾ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ 337.4 ಕೋಟಿ ರೂಪಾಯಿಗಳನ್ನು ಗಳಿಸಿ, ಒಟ್ಟು 438.65 ಕೋಟಿ ರೂ.ಗಳನ್ನು ತಲುಪಿದೆ. ಇದು ಪ್ರಭಾಸ್ ಮತ್ತು ಎಸ್.ಎಸ್. ರಾಜಮೌಳಿ ‘ಬಾಹುಬಲಿ-1’ ಚಿತ್ರದ 421 ಕೋಟಿ ರೂ.ಗಳ ಕಲೆಕ್ಷನ್‌ ಅನ್ನು ಮೀರಿಸುವ ಮೂಲಕ ಭಾರತೀಯ ಚಿತ್ರರಂಗದ ಅತಿದೊಡ್ಡ ಹಿಟ್ ಆಗಿ ಹೊರಹೊಮ್ಮಿದೆ.

‘ಕಾಂತಾರ’ದ ಈ ಯಶಸ್ಸು ರಜನಿಕಾಂತ್ ‘ಜೈಲರ್’ ಮತ್ತು ‘ರೋಬೊ 2.0’, ರಣಬೀರ್ ಕಪೂರ್ ‘ಸಂಜು’, ‘ಸಲಾರ್: ಭಾಗ 1’, ‘ಅವತಾರ್: ದಿ ವೇ ಆಫ್ ವಾಟರ್’, ಆಮಿರ್ ಖಾನ್ ‘ದಂಗಲ್’, ‘ಅವೆಂಜರ್ಸ್: ಎಂಡ್‌ಗೇಮ್’ ನಂತಹ ದೊಡ್ಡ ಚಿತ್ರಗಳ ದಾಖಲೆಗಳನ್ನು ಕೂಡ ಹಿಂದಿಕ್ಕಿದೆ. ಮುಂದಿನ ದಿನಗಳಲ್ಲಿ ದೀಪಾವಳಿ ಹಬ್ಬದ ವೇಳೆಗೆ ‘ಕಾಂತಾರ’ ಇನ್ನಷ್ಟು ದಾಖಲೆಗಳನ್ನು ಮುರಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ರಿಷಬ್ ಶೆಟ್ಟಿಯವರ ಈ ಸಿನಿಮಾಗೆ ನಿಜಕ್ಕೂ ಅದ್ಭುತ ಶಕ್ತಿಯ ಆಶೀರ್ವಾದವಿದೆ.

Previous articleBSNL ದೀಪಾವಳಿ ಕೊಡುಗೆ: ಕೇವಲ 200 ರೂ. ರಿಚಾರ್ಜ್ ಯೋಜನೆ,ಇಲ್ಲಿದೆ ಮಾಹಿತಿ
Next articleಮಾಜಿ ಪ್ರಧಾನಿ ಹೆಚ್‌. ಡಿ ದೇವೇಗೌಡ ಆರೋಗ್ಯ ಸ್ಥಿರ: ಆಸ್ಪತ್ರೆಯಿಂದ ಡಿಸ್ಚಾರ್ಜ್

LEAVE A REPLY

Please enter your comment!
Please enter your name here