ಪರೇಶ್ ರಾವಲ್: ದಿ ತಾಜ್ ಸ್ಟೋರಿ ಬಿಡುಗಡೆಗೂ ಮುನ್ನವೇ ವಿವಾದದಲ್ಲಿ

0
218

ಮುಂಬೈ: ಹಾಸ್ಯಮಯ ಪಾತ್ರವಿರಲಿ ಅಥವಾ ಖಳನಾಯಕನ ಪಾತ್ರವಿರಲಿ, ಪರೇಶ್ ರಾವಲ್ ತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಹೃದಯ ಗೆದ್ದವರು. ಇದೀಗ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ದಿ ತಾಜ್ ಸ್ಟೋರಿ ಚಿತ್ರ ಬಿಡುಗಡೆಯ ಮೊದಲುವೇ ವಿವಾದಕ್ಕೆ ಸಿಲುಕಿದೆ.

ಇತ್ತೀಚೆಗೆ ಪರೇಶ್ ರಾವಲ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಚರ್ಚೆಗೆ ಕಾರಣವಾಯಿತು. “ನಿಮಗೆ ಸ್ಮಾರಕ ಗೊತ್ತಿದೆ, ಆದರೆ ಅದರ ನಿಜವಾದ ಕಥೆ ಗೊತ್ತಿದೆಯೇ? ವಿಶ್ವದ ಅತ್ಯಂತ ಸುಂದರವಾದ ಅದ್ಭುತದ ಹಿಂದಿನ ಸತ್ಯ ಈಗ ಬಹಿರಂಗಗೊಳ್ಳಲಿದೆ” ಎಂಬ ಬರಹವು ಸಂಚಲನ ಸೃಷ್ಟಿಸಿತು. ಇದಕ್ಕೆ ಪ್ರತಿಯಾಗಿ ಕೆಲವರು “ತಾಜ್ ಮಹಲ್ ಅನ್ನು ತೇಜೋ ಮಹಾಲಯ ಎಂದು ಹೇಳುವ ಪ್ರಚಾರ ಚಿತ್ರವನ್ನು ಮಾಡಿದವರೇ ಇದೀಗ ಇದೇ ಚಿತ್ರವನ್ನು ಮಾಡಿದ್ದಾರೆ” ಎಂದು ಟೀಕಿಸಿದರು.

ವಿವಾದಕ್ಕೆ ಪರೇಶ್ ರಾವಲ್ ಸ್ಪಷ್ಟನೆ: ವಿವಾದ ಹೆಚ್ಚಿದ ಹಿನ್ನೆಲೆಯಲ್ಲಿ, ಪರೇಶ್ ರಾವಲ್ ಸ್ವತಃ ಸ್ಪಷ್ಟನೆ ನೀಡಿದರು. ದಿ ತಾಜ್ ಸ್ಟೋರಿಯು ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳೊಂದಿಗೆ ಸಂಬಂಧಿಸಿಲ್ಲವೆಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. “ಈ ಚಿತ್ರವು ತಾಜ್ ಮಹಲ್ ಅನ್ನು ಯಾವುದೇ ದೇವಾಲಯಕ್ಕೆ ಲಿಂಕ್ ಮಾಡುತ್ತಿಲ್ಲ. ಇದು ಕೇವಲ ಇತಿಹಾಸ ಮತ್ತು ಆಧಾರಿತ ಸಂಗತಿಗಳನ್ನು ಆಧರಿಸಿ ರೂಪಿಸಲಾದ ಕಥೆಯಾಗಿದ್ದು, ಜನರು ಮೊದಲು ಚಿತ್ರವನ್ನು ವೀಕ್ಷಿಸಿ ನಂತರ ತಮ್ಮದೇ ಅಭಿಪ್ರಾಯ ರೂಪಿಸಿಕೊಳ್ಳಬೇಕು. ನೋಡುವುದಕ್ಕೂ ಮುನ್ನ ತೀರ್ಮಾನಕ್ಕೆ ಬರುವುದರಿಂದ ಅನ್ಯಾಯವಾಗುತ್ತದೆ,” ಎಂದು ಅವರು ಸ್ಪಷ್ಟಪಡಿಸಿದರು.

ಪಾತ್ರವರ್ಗ ಮತ್ತು ಕಥೆ: ಈ ಚಿತ್ರದಲ್ಲಿ ಪರೇಶ್ ರಾವಲ್ ಜೊತೆಗೆ ಜಾಕಿರ್ ಹುಸೇನ್, ಅಮೃತಾ ಖಾನ್ವಿಲ್ಕರ್, ಸ್ನೇಹಾ ವಾಘ್ ಮತ್ತು ನಮಿತ್ ದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ತುಷಾರ್ ಅಮರೀಶ್ ಗೋಯಲ್ ಬರೆದು ನಿರ್ದೇಶಿಸಿದ್ದಾರೆ. ದಿ ತಾಜ್ ಸ್ಟೋರಿ ಅಕ್ಟೋಬರ್ 31, 2025 ರಂದು ಬಿಡುಗಡೆಯಾಗಲಿದ್ದು, ತಾಜ್ ಮಹಲ್ ನಿರ್ಮಾಣದ ಹಿಂದಿನ ಸಂಗತಿಗಳು ಮತ್ತು ಅದರ ಇತಿಹಾಸದ ನಿಗೂಢತೆಗಳನ್ನು ತೆರೆದಿಡಲಿದೆ. ಇತಿಹಾಸ, ಥ್ರಿಲ್ಲರ್ ಮತ್ತು ಮಿಸ್ಟರಿ ಅಂಶಗಳನ್ನು ಒಳಗೊಂಡಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

Previous articleಇಂದಿನಿಂದ ವನಿತೆಯರ ಏಕದಿನ ವಿಶ್ವಕಪ್: ಭಾರತದಲ್ಲೇ ಐಸಿಸಿ ಟೂರ್ನಿ
Next articleಧಾರವಾಡದಲ್ಲಿ ದಸರಾ: ಅ. 1ಕ್ಕೆ ವಿಜಯದಶಮಿ ಸಂಭ್ರಮ; ಜೋಶಿ, ಶೆಟ್ಟರ್, ಲಾಡ್ ಭಾಗಿ

LEAVE A REPLY

Please enter your comment!
Please enter your name here