ಗಣೇಶ್ ರಾಣೆಬೆನ್ನೂರು
ಚಿತ್ರ: ಏಳುಮಲೆ
ನಿರ್ದೇಶನ: ಪುನೀತ್ ರಂಗಸ್ವಾಮಿ
ನಿರ್ಮಾಣ: ತರುಣ್ ಸುಧೀರ್, ಅಟ್ಲಾಂಟ ನಾಗೇಂದ್ರ
ತಾರಾಗಣ: ರಾಣಾ, ಪ್ರಿಯಾಂಕಾ ಆಚಾರ್, ಕಿಶೋರ್, ಜಗಪತಿ ಬಾಬು, ಟಿ.ಎಸ್.ನಾಗಾಭರಣ ಹಾಗೂ ಜಗ್ಗಪ್ಪ ಇತರರು.
ರೇಟಿಂಗ್ಸ್: 4
ಆಕೆ ಇನ್ನೇನು ಸಪ್ತಪದಿ ತುಳಿಯಬೇಕಿದ್ದ ವಧು. ಅದಾಗಲೇ ಪ್ರೀತಿಯ ಮಳೆಯಲ್ಲಿ ತೋಯ್ದು ಹೋಗಿದ್ದ ರೇವತಿ (ಪ್ರಿಯಾಂಕಾ ಆಚಾರ್), ತನ್ನ ಪ್ರಿಯಕರ ಹರೀಶ (ರಾಣಾ) ಜತೆ ಓಡಿ ಹೋಗಲು ತೀರ್ಮಾನಿಸಿರುತ್ತಾಳೆ. ಇತ್ತ ಕಾರು ಚಾಲಕ ಹರೀಶ ಪ್ರಯಾಣಿಕರನ್ನು ಮೈಸೂರಿಗೆ ಬಿಟ್ಟು, ರೇವತಿಯನ್ನು ಭೇಟಿ ಮಾಡುವ ತವಕದಲ್ಲಿರುತ್ತಾನೆ. ಇವರಿಬ್ಬರೂ ಸಂಧಿಸಬೇಕಿದ್ದ ಜಾಗ-ಏಳುಮಲೆ. ಅದು ಕರ್ನಾಟಕ-ತಮಿಳುನಾಡು ಗಡಿ ಪ್ರದೇಶ. ಕಾಡುಗಳ್ಳನ ತಲಾಷ್‌ನಲ್ಲಿರುವ ಪೊಲೀಸ್ ಪಡೆ `ಆಪರೇಷನ್ ಕುಕೂನ್’ಗೆ ಸಜ್ಜಾಗಿರುತ್ತದೆ.
ಅತ್ತ ಮನೆಯಿಂದ ಓಡಿಹೋದ ತಂಗಿಯನ್ನು ಹುಡುಕಲು ಅಣ್ಣ ಮತ್ತವರ ಗ್ಯಾಂಗ್ ಊರೂರು ಸುತ್ತುತ್ತಿರುತ್ತದೆ. ರೇವತಿಯನ್ನು ವರಿಸಬೇಕಿದ್ದವನು `ನನ್ನನ್ನು ಬಿಟ್ಟು ಹೋದಳಲ್ಲ…’ ಎಂಬ ಕೋಪದಲ್ಲಿ ಮಚ್ಚು ಹಿಡಿದು ಹುಡುಕಾಟ ಶುರು ಮಾಡಿರುತ್ತಾನೆ. ಹೀಗೆ ಒಂದಕ್ಕೊಂದು ಬೆಸೆದುಕೊಂಡಂತಿರುವ ಕಥೆಗೆ, ಅಷ್ಟೇ ಥ್ರಿಲ್ಲಿಂಗ್ ಚಿತ್ರಕಥೆ ಬರೆದು ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕ ಪುನೀತ್ ರಂಗಸ್ವಾಮಿ.
ಇಲ್ಲಿ ಕಾಡು-ಮೇಡು ಸಾಮಾನ್ಯ. ರಸ್ತೆ ತಿರುವುಗಳ ಜತೆಗೆ ಕಥೆಯ ತಿರುವುಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ. ಹೀಗಾಗಿ ಒಂದೊಂದು ತಿರುವಿಗೂ ಒಂದೊಂದು ಟ್ವಿಸ್ಟ್ ಎದುರಾಗುತ್ತಾ ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ಕುತೂಹಲಭರಿತ ಕಥನ ಏಳುಮಲೆಯಲ್ಲಿ ಅಡಕವಾಗಿದೆ.
ನಿರ್ದೇಶಕ ಪುನೀತ್ ಏಳುಮಲೆ ಮೂಲಕ ಭರವಸೆ ಮೂಡಿಸಿದ್ದಾರೆ. ಅವರ ತಂಡವೂ ಅಷ್ಟೇ ಶಿಸ್ತಾಗಿ ಕಾರ್ಯ ನಿರ್ವಹಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್. ಅದೈತ ಗುರುಮೂರ್ತಿ ಛಾಯಾಗ್ರಹಣದಲ್ಲಿರುವ ನೆರಳು-ಬೆಳಕಿನಾಟ ಕೌತುಕವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ನೆರವಾಗಿದೆ. ಡಿ.ಇಮ್ಮಾನ್ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕೆ ಪೂರಕವಾಗಿದೆ.
ರಾಣಾ ಈ ಚಿತ್ರದಲ್ಲಿ ಮತ್ತಷ್ಟು ಮಾಗಿದ್ದಾರೆ. ಪ್ರಿಯಾಂಕಾ ಆಚಾರ್ ಮುಗ್ಧತೆಯೇ ಸಿನಿಮಾದ ಅಂದವನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಿದೆ. ಚೊಚ್ಚಲ ಸಿನಿಮಾದಲ್ಲಿ ಆಕೆ ಭರವಸೆ ಮೂಡಿಸಿದ್ದಾರೆ. ಕಿಶೋರ್ ಎಂದಿನಂತೆ ಪೊಲೀಸ್ ಅಧಿಕಾರಿಯಾಗಿದ್ದರೂ, ನಟನೆಯಲ್ಲಿ ಭಿನ್ನತೆ ತೋರಿದ್ದಾರೆ. ಜಗಪತಿ ಬಾಬು, ಸರ್ದಾರ್ ಸತ್ಯ, ಟಿ.ಎಸ್.ನಾಗಾಭರಣ, ಜಗ್ಗಪ್ಪ ಇನ್ನಿತರರು ಪಾತ್ರವೇ ತಾವಾಗಿ ತನ್ಮಯತೆಯಿಂದ ಕಾಣಿಸಿಕೊಂಡಿದ್ದಾರೆ.
ಬಹಳ ದಿನಗಳ ನಂತರ ಕಾಡುವ ಪ್ರೀತಿ, ಅದರ ಪರಾಕಾಷ್ಠೆಯ ಪ್ರದರ್ಶನ, ಪ್ರೇಮಿಗಳ ತಳಮಳ ಏಳುಮಲೆಯಲ್ಲಿ ಅಡಕವಾಗಿದೆ. ಇದೊಂಥರ ನೋಡಿದ ನಂತರವೂ ಕಾಡುವ ಸಿನಿಮಾ!