ಬೆಂಗಳೂರು: ನಟ ಸೃಜನ್ ಲೋಕೇಶ್ ನಿರ್ದೇಶಿಸಿ, ನಟಿಸಿರುವ ಹೊಸ ಸಿನಿಮಾ ಜಿಎಸ್‌ಟಿ (GST) ಈ ತಿಂಗಳ 28ರಂದು ತೆರೆಕಾಣಲು ಸಿದ್ಧವಾಗಿದೆ. ನಟ, ನಿರೂಪಕ, ನಿರ್ಮಾಪಕ ಎಂಬ ಹತ್ತು ಹಲವು ಪಾತ್ರಗಳನ್ನು ನಿರ್ವಹಿಸಿರುವ ಸೃಜನ್ ಈಗ ಮೊದಲ ಬಾರಿಗೆ ನಿರ್ದೇಶಕರ ಕುರ್ಚಿ ಅಲಂಕರಿಸಿದ್ದಾರೆ. ಅವರ ತಾತ ಸುಂಬಯ್ಯ ನಾಯ್ಡು ಕನ್ನಡ ಸಿನಿಮಾ ಕ್ಷೇತ್ರದ ಪಿತಾಮಹರಲ್ಲಿ ಒಬ್ಬರು. ತಂದೆ ಲೋಕೇಶ್ ಕನ್ನಡದ ಹೆಸರಾಂತ ನಟ-ನಿರ್ದೇಶಕರಾಗಿದ್ದರು. ಇದೀಗ ಸೃಜನ್ ಕುಟುಂಬದ ಚಲನಚಿತ್ರ ಪರಂಪರೆಯನ್ನು ನಿರ್ದೇಶಕರಾಗಿ ಮುಂದುವರಿಸಿದ್ದಾರೆ.
ಈ ಚಿತ್ರದಲ್ಲಿ ಸೃಜನ್ ಮಗ ಸುಕೃತ್ ಕೂಡಾ ಬಾಲನಟನಾಗಿ ಕಾಣಿಸಿಕೊಂಡಿದ್ದು, ಸುಬ್ಬಯ್ಯ ನಾಯ್ಡು ಪರಂಪರೆಯ ನಾಲ್ಕನೇ ತಲೆಮಾರು ಕಿರುತೆರೆಯತ್ತ ಬರಿಸಿರುವ ವಿಶಿಷ್ಟ ದಾಖಲೆಯೂ ಇದು.
ಚಿತ್ರದ ಟ್ರೇಲರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದು ಉತ್ತಮ ಮೆಚ್ಚುಗೆ ಗಳಿಸಿದೆ. ಅದರ ಬೆನ್ನಲ್ಲೇ ಈಗ ‘ಚಮೇಲಿ ಚಲ್’ ಹೆಸರಿನ ನೂತನ ಹಾಡು ಬಿಡುಗಡೆಗೊಂಡಿದೆ. ಈ ಹಾಡಿನಲ್ಲಿ ಸೃಜನ್ ಲೋಕೇಶ್ ಜೊತೆಗೆ ಸಂಹಿತಾ ವಿನ್ಯಾ ಸ್ಟೈಲಿಷ್ ನೃತ್ಯ ಹೆಜ್ಜೆ ಹಾಕಿದ್ದಾರೆ. ಜನಪ್ರಿಯ ತಬಲ ನಾಣಿ ಕೂಡಾ ಕಾಣಿಸಿಕೊಳ್ಳುವುದರಿಂದ ಹಾಡಿನ ವೈಶಿಷ್ಟ್ಯ ಇನ್ನಷ್ಟು ಹೆಚ್ಚಿದೆ.
ಹಾಡಿಗೆ ವಿಜಯ್ ಈಶ್ವರ್ ಸಾಹಿತ್ಯ ಬರೆದು, ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಿದ್ದು, ಅವರು ಸ್ವತಃ ಹಾಡಿದ್ದಾರೆ. ಅನಿತಾ ಸಾರಾ ಮಹೇಶ್ ಸಹ ದನಿಗೊಡಿಸಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ಸೃಜನ್ ಲೋಕೇಶ್, “ಸಂದೇಶ, ಬೋಧನೆ, preach ಮಾಡುವ ಸಿನಿಮಾ ಅಲ್ಲ ಇದು. ನಗಿಸುವುದು ಮಾತ್ರ ನಮ್ಮ ಧರ್ಮ. ಪ್ರೇಕ್ಷಕರು ನಕ್ಕು ಸಂಭ್ರಮದಿಂದ ಥಿಯೇಟರ್ ಬಿಟ್ಟು ಹೊರಬರುತ್ತಾರೆ — ಅದಂತೂ ಖಚಿತ” ಎಂದು ಹೇಳಿದ್ದಾರೆ.
ಹಾಗಾದರೆ GST ಎಂದರೇನು?: ಸೃಜನ್ ಹಾಸ್ಯಶೈಲಿಯಲ್ಲಿ ‘Ghost In Trouble’ ಎಂದು ವಿಸ್ತರಿಸಿದ್ದಾರೆ. ಸಾಮಾನ್ಯವಾಗಿ ಭೂತಗಳು ಜನರನ್ನು ಕಾಡುತ್ತವೆ ಎನ್ನುವ ಕಲ್ಪನೆಗೆ ವಿರುದ್ಧವಾಗಿ, ಇಲ್ಲಿ ದೆವ್ವಗಳೇ ಸಂಕಷ್ಟಕ್ಕೆ ಸಿಲುಕಿ ನಾಯಕನ ಮೊರೆ ಹೋಗುತ್ತವೆ ಎಂಬ ವಿಶಿಷ್ಟ ಕಥಾಹಂದರ ಚಿತ್ರದಲ್ಲಿದೆ.
ಚಿತ್ರದಲ್ಲಿ ನಟಿ ರಜಿನಿ ಭಾರದ್ವಾಜ್, ಗಿರಿಜಾ ಲೋಕೇಶ್, ಅಶೋಕ್, ಮತ್ತಿತರ ಹಿರಿಯ ನಟರು ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ನೀಡಿರುವ ಸಂದೇಶ್ ಕಂಬೈನ್ಸ್ ಈ ಚಿತ್ರದ ನಿರ್ಮಾಪಕರು.
