ಬೆಂಗಳೂರು: ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಇಷ್ಟು ದಿನ ಮೌನವಾಗಿದ್ದ ಸಂತ್ರಸ್ತ ನಟಿ, ತಮ್ಮ ನೋವಿನ ಹಿಂದಿನ ಅಸಲಿ ಕಥೆಯನ್ನು ಮನಬಿಚ್ಚಿ ಮಾತನಾಡಿದ್ದಾರೆ.
ಉದ್ಯಮಿ ಅರವಿಂದ್ ರೆಡ್ಡಿ “ನಾನು ಅವಳಿಗಾಗಿ 3 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ, ಸೈಟ್, ಕಾರು ಕೊಡಿಸಿದ್ದೇನೆ,” ಎಂದು ಮಾಡಿದ ಆರೋಪಗಳಿಗೆ ಪ್ರತ್ಯುತ್ತರ ನೀಡಿರುವ ನಟಿ, ಆ ಸಂಬಂಧವು ಹೊರಗಿನಿಂದ ಕಂಡಷ್ಟು ಸುಂದರವಾಗಿರಲಿಲ್ಲ, ಅದೊಂದು ‘ಮಾನಸಿಕ ನರಕ’ವಾಗಿತ್ತು ಎಂಬ ಕಣ್ಣೀರಿನ ಹಿಂದಿನ ಕರಾಳ ಸತ್ಯವನ್ನು ತೆರೆದಿಟ್ಟಿದ್ದಾರೆ.
“ಕೇವಲ ಆರು ತಿಂಗಳು ಮಾತ್ರ ಚೆನ್ನಾಗಿದ್ದಿದ್ದು”: “ನಮಗಿಬ್ಬರಿಗೂ ಪರಿಚಯವಾಗಿ ಎರಡೂವರೆ ವರ್ಷಗಳಾಗಿದ್ದವು. ಆದರೆ, ನಾವು ಚೆನ್ನಾಗಿದ್ದಿದ್ದು ಕೇವಲ ಆರಂಭದ ಆರು ತಿಂಗಳು ಮಾತ್ರ,” ಎಂದು ಮಾತು ಆರಂಭಿಸಿದ ನಟಿ, ಸಂಬಂಧದ ಕರಾಳ ಮುಖವನ್ನು ಬಿಚ್ಚಿಟ್ಟರು.
“ಆರಂಭದಲ್ಲಿ ಎಲ್ಲವೂ ಕನಸಿನಂತಿತ್ತು. ಆದರೆ, ದಿನಗಳು ಕಳೆದಂತೆ ಇಬ್ಬರ ನಡುವೆ ಹೊಂದಾಣಿಕೆಯ ಕೊರತೆ ಶುರುವಾಯಿತು. ನಮ್ಮಿಬ್ಬರ ಜೀವನಶೈಲಿ, ಆಲೋಚನೆಗಳು ಯಾವುದೂ ಹೊಂದಿಕೆಯಾಗುತ್ತಿರಲಿಲ್ಲ. ಇದರಿಂದಾಗಿ ನಿರಂತರ ಜಗಳಗಳು ನಡೆಯುತ್ತಿದ್ದವು, ನನ್ನ ನೆಮ್ಮದಿಯನ್ನೇ ಕಳೆದುಕೊಂಡಿದ್ದೆ,” ಎಂದು ಹೇಳಿದರು.
“ನಾನು ಬಯಸಿದಾಗ ಅವರು ನನ್ನ ಜೊತೆ ಇರಲಿಲ್ಲ”: ಸಂಬಂಧದಲ್ಲಿದ್ದರೂ ತಾನು ಅನುಭವಿಸುತ್ತಿದ್ದ ಒಂಟಿತನ ಮತ್ತು ಮಾನಸಿಕ ಹಿಂಸೆಯ ಬಗ್ಗೆ ಮಾತನಾಡಿದ ಅವರು, “ನನಗೆ ಅವರ ಅವಶ್ಯಕತೆ ಇದ್ದಾಗ, ಅವರು ನನ್ನ ಜೊತೆ ಇರುತ್ತಿರಲಿಲ್ಲ.
ಹೇಳದೇ ಕೇಳದೇ ತಿಂಗಳುಗಟ್ಟಲೆ ವಿದೇಶಕ್ಕೆ ಹೋಗಿಬಿಡುತ್ತಿದ್ದರು. ಒಂದು ತಿಂಗಳ ಕಾಲ ಸಂಪರ್ಕಕ್ಕೇ ಸಿಗುತ್ತಿರಲಿಲ್ಲ. ಇದರಿಂದ ನಾನು ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಈ ನೋವನ್ನು ಸಹಿಸುವುದಕ್ಕಿಂತ ದೂರವಾಗುವುದೇ ಲೇಸು ಎಂದು ನಾನು ನಿರ್ಧರಿಸಿದೆ,” ಎಂದು ತಿಳಿಸಿದರು.
“ಹೊರಬರಲು ಯತ್ನಿಸಿದಾಗ ಬೆದರಿಕೆ ಹಾಕಿದರು”: “ನಾನು ಈ ಸಂಬಂಧದಿಂದ ಹೊರಬರಲು ಪ್ರಯತ್ನಿಸಿದಾಗಲೆಲ್ಲಾ, ಅವರು ಮತ್ತೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದರು. ‘ನಿನ್ನ ಜೊತೆಗೇ ಇರಬೇಕು’ ಎನ್ನುತ್ತಿದ್ದರು. ಆದರೆ, ಆ ಮಾತುಗಳಲ್ಲಿ ನನಗೆ ಯಾವುದೇ ಭಾವನಾತ್ಮಕ ನಂಬಿಕೆ ಬರುತ್ತಿರಲಿಲ್ಲ. ಕೊನೆಗೆ, ನಾನು ಈ ಸಂಬಂಧದಿಂದ ಸಂಪೂರ್ಣವಾಗಿ ಹೊರಬರುತ್ತೇನೆ ಎಂದು ಖಚಿತಪಡಿಸಿದಾಗ, ನನ್ನನ್ನು ಹೆದರಿಸಲು ಆರಂಭಿಸಿದರು,” ಎಂದು ಹೇಳುವಾಗ ನಟಿ ಭಾವುಕರಾದರು.
“‘ನಿನ್ನ ಬಗ್ಗೆ ನಿಮ್ಮ ತಂದೆ-ತಾಯಿಗೆ ಹೇಳುತ್ತೇನೆ, ನಿನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ’ ಎಂದು ಬೆದರಿಕೆ ಹಾಕಿದರು. ಈ ರೀತಿ ಬ್ಲಾಕ್‌ಮೇಲ್ ಮಾಡಲು ಶುರು ಮಾಡಿದಾಗ, ನನಗೆ ಬೇರೆ ದಾರಿ ಕಾಣಿಸಲಿಲ್ಲ,” ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.
ಉದ್ಯಮಿ ಅರವಿಂದ್ ರೆಡ್ಡಿ ಈ ಸಂಬಂಧವನ್ನು ಕೇವಲ ಹಣದ ದೃಷ್ಟಿಯಿಂದ ಬಿಂಬಿಸಲು ಯತ್ನಿಸಿದಾಗ, ಅದರ ಹಿಂದಿನ ಮಾನಸಿಕ ಹಿಂಸೆ, ಭಾವನಾತ್ಮಕ ಶೋಷಣೆ ಮತ್ತು ಬೆದರಿಕೆಯ ಕಥೆಯನ್ನು ನಟಿ ತೆರೆದಿಟ್ಟಿದ್ದಾರೆ.
