ಬೆಂಗಳೂರು: ಐಷಾರಾಮಿ ಜೀವನ, ಎಸಿ ಮನೆ, ಮೃದುವಾದ ಹಾಸಿಗೆಯಲ್ಲಿ ಮಲಗಿ ಅಭ್ಯಾಸವಾಗಿದ್ದ ನಟ ದರ್ಶನ್, ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನ ತಣ್ಣನೆಯ ನೆಲದಲ್ಲಿ ಚಳಿಗೆ ನಡುಗುತ್ತಿದ್ದಾರೆ. ಬೆಂಗಳೂರಿನ ಚಳಿಯನ್ನು ತಡೆಯಲಾಗದೆ, “ನಮಗೆ ನಿದ್ದೆ ಮಾಡಲು ಕೂಡ ಆಗುತ್ತಿಲ್ಲ,” ಎಂದು ನ್ಯಾಯಾಧೀಶರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅಳಲು ತೋಡಿಕೊಂಡ ನಟ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ನವೆಂಬರ್ 19) ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ವೇಳೆ, ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು.
ವಿಚಾರಣೆ ಆರಂಭವಾಗುತ್ತಿದ್ದಂತೆ, ಆರೋಪಿ ನಾಗರಾಜ್ ಎಂಬಾತ, “ಮನೆಯಿಂದ ತಂದುಕೊಟ್ಟ ಕಂಬಳಿಯನ್ನು ಜೈಲಿನ ಅಧಿಕಾರಿಗಳು ನೀಡುತ್ತಿಲ್ಲ, ಚಳಿ ಹೆಚ್ಚಾಗಿದ್ದರೂ ಹೆಚ್ಚುವರಿ ಕಂಬಳಿ ಕೊಡುತ್ತಿಲ್ಲ,” ಎಂದು ದೂರು ನೀಡಿದ.
ಆಗ ಮಧ್ಯಪ್ರವೇಶಿಸಿದ ದರ್ಶನ್, ಇಂಗ್ಲಿಷ್‌ನಲ್ಲಿ ‘We can’t even sleep’ (ನಮಗೆ ನಿದ್ದೆ ಮಾಡಲು ಕೂಡ ಆಗುತ್ತಿಲ್ಲ) ಎಂದು ತಮ್ಮ ಅಳಲನ್ನು ತೋಡಿಕೊಂಡರು. “ತುಂಬಾನೇ ಚಳಿ ಇದೆ ಸಾರ್, ನಾವ್ಯಾರೂ ರಾತ್ರಿ ಸರಿಯಾಗಿ ಮಲಗುತ್ತಿಲ್ಲ. ದಯವಿಟ್ಟು ಹೆಚ್ಚುವರಿ ಕಂಬಳಿ ಕೊಡಿಸಿ,” ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ಜೈಲು ಅಧಿಕಾರಿಗಳಿಗೆ ಜಡ್ಜ್ ಕ್ಲಾಸ್: ದರ್ಶನ್ ಮನವಿಗೆ ತಕ್ಷಣವೇ ಸ್ಪಂದಿಸಿದ ನ್ಯಾಯಾಧೀಶರು, ಜೈಲಿನ ಅಧಿಕಾರಿಗಳನ್ನು ಪ್ರಶ್ನಿಸಿದರು. “ಪದೇ ಪದೇ ಆದೇಶ ಮಾಡಿದರೂ, ಚಳಿ ಇದ್ದಾಗ ಕೈದಿಗಳಿಗೆ ಕಂಬಳಿ ಕೊಡಲು ಯಾಕೆ ಹೀಗೆ ಮಾಡುತ್ತೀರಿ?” ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ದರ್ಶನ್ ಮತ್ತು ಇತರ ವಿಚಾರಣಾಧೀನ ಕೈದಿಗಳಿಗೆ ಅಗತ್ಯವಿರುವ ಕಂಬಳಿಗಳನ್ನು ಒದಗಿಸುವಂತೆ ಜಡ್ಜ್ ಜೈಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಐಷಾರಾಮಿ ಬದುಕಿನಿಂದ ಜೈಲಿನ ನೆಲಕ್ಕೆ: ಒಂದು ಕಾಲದಲ್ಲಿ ತಮ್ಮ ಮನೆಯಲ್ಲಿ ತಾಪಮಾನವನ್ನು ತಮಗೆ ಬೇಕಾದಂತೆ ಹೊಂದಿಸಿಕೊಂಡು, ದಪ್ಪನೆಯ ಬೆಡ್‌ಶೀಟ್ ಹೊದ್ದು ಮಲಗುತ್ತಿದ್ದ ದರ್ಶನ್‌ಗೆ, ಜೈಲಿನ ಸಾಮಾನ್ಯ ಸೌಲಭ್ಯಗಳಿಗೆ ಹೊಂದಿಕೊಳ್ಳುವುದು ಕಷ್ಟಕರವಾಗಿದೆ. ಈ ಬಾರಿ ಅವರಿಗೆ ಯಾವುದೇ ವಿಶೇಷ ಸವಲತ್ತುಗಳನ್ನು ನೀಡದೆ, ಸಾಮಾನ್ಯ ಕೈದಿಯಂತೆಯೇ ನಡೆಸಿಕೊಳ್ಳಲಾಗುತ್ತಿದೆ. ಹೀಗಾಗಿ, ಬೆಂಗಳೂರಿನ ಚಳಿಗಾಲದ ಚಳಿಯು ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸದ್ಯಕ್ಕೆ, ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಡಿಸೆಂಬರ್ 3ಕ್ಕೆ ಮುಂದೂಡಿದೆ. ಇದೇ ವೇಳೆ, ಪ್ರಕರಣದ 14ನೇ ಆರೋಪಿ ಪ್ರದೋಷ್ ಮಧ್ಯಂತರ ಜಾಮೀನನ್ನು ನವೆಂಬರ್ 22ರವರೆಗೆ ವಿಸ್ತರಿಸಲಾಗಿದೆ.
