Kantara: Chapter 1: ದೈವದ ಎಚ್ಚರಿಕೆ, ಅಪಚಾರ ಮಾಡಿದರೆ ಬುದ್ಧಿ ಕಲಿಸ್ತೇನೆ!

0
32

‘ಕಾಂತಾರ’ ಚಲನಚಿತ್ರವು ತೆರೆಕಂಡ ನಂತರ ದೈವದ ಆಚರಣೆಗಳನ್ನು ಅನುಕರಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೈವದ ಅನುಕರಣೆಯ ವೀಡಿಯೊಗಳು ನಿರಂತರವಾಗಿ ಹರಿದಾಡುತ್ತಿದ್ದು, ಇದು ಅನೇಕ ದೈವ ನರ್ತಕರು ಮತ್ತು ದೈವಾರಾಧಕರಿಗೆ ತೀವ್ರ ಬೇಸರ ತಂದಿದೆ.

ಮಂಗಳೂರು ಹೊರವಲಯದ ಬಜಪೆ ಸಮೀಪದ ಶ್ರೀ ಕ್ಷೇತ್ರ ಪೆರಾರ, ಬ್ರಹ್ಮದೇವರು, ಇಷ್ಟ ದೇವತಾ ಬಲವಂಡಿ, ಪಿಲಿಚಂಡಿ ದೈವಸ್ಥಾನದಲ್ಲಿ ದೈವಾರಾಧಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ದೈವದ ಅಪಹಾಸ್ಯದ ವಿರುದ್ಧ ದೂರು ಹೇಳಿದ್ದಾರೆ.

ಈ ಪ್ರಾರ್ಥನೆಯ ಸಂದರ್ಭದಲ್ಲಿ ದೈವವು ಆವಾಹನೆಯಾಗಿ, “ನನ್ನ ಹೆಸರಿನಲ್ಲಿ ಹಣ ಸಂಪಾದಿಸುವವರನ್ನು ನಾನು ನೋಡಿಕೊಳ್ಳುತ್ತೇನೆ. ಸಂಪತ್ತು ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ಬುದ್ಧಿ ಕಲಿಸುತ್ತೇನೆ. ಇನ್ನು ಮುಂದೆ ಯಾವುದೇ ದೈವಸ್ಥಾನಗಳಲ್ಲಿ ಚಿತ್ರೀಕರಣವನ್ನು ನಿಲ್ಲಿಸಿ. ನಿಮ್ಮ ಹೋರಾಟವನ್ನು ಮುಂದುವರಿಸಿ, ನಾನು ನಿಮ್ಮ ಬೆಂಬಲಕ್ಕಿದ್ದೇನೆ” ಎಂದು ಗಂಭೀರ ಎಚ್ಚರಿಕೆ ನೀಡಿದೆ.

‘ಕಾಂತಾರ’ ಚಲನಚಿತ್ರದ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ಈ ಹಿಂದಿನಿಂದಲೂ ದೈವದ ಅನುಕರಣೆಯನ್ನು ವಿರೋಧಿಸುತ್ತಲೇ ಬಂದಿವೆ. 2022ರಲ್ಲಿ ಮೊದಲ ‘ಕಾಂತಾರ’ ಸಿನಿಮಾ ಬಿಡುಗಡೆಯಾದಾಗಿನಿಂದಲೂ ಇಂತಹ ಘಟನೆಗಳು ನಡೆಯುತ್ತಿವೆ.

ಇತ್ತೀಚೆಗೂ ಹೊಂಬಾಳೆ ಫಿಲಮ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ದೈವದ ಅನುಕರಣೆ ಮಾಡದಂತೆ ಮನವಿ ಮಾಡಿತ್ತು. ಆದರೂ ಇಂತಹ ಘಟನೆಗಳು ಮುಂದುವರಿದಿರುವುದು ದೈವಾರಾಧಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಕೆಲವು ದೈವ ನರ್ತಕರು ಮತ್ತು ಆರಾಧಕರು ರಿಷಬ್ ಶೆಟ್ಟಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದು, ದೈವದ ಬಗ್ಗೆ ಸಿನಿಮಾ ಮಾಡಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ದೈವ ಮತ್ತು ದೈವ ನರ್ತನವನ್ನು ಭಕ್ತಿಯ ದೃಷ್ಟಿಯಿಂದ ನೋಡಬೇಕೇ ಹೊರತು, ಚಲನಚಿತ್ರ ಮಾಡುವ ಮೂಲಕ ಅದನ್ನು ಕೇವಲ ಒಂದು ಉದ್ಯಮದ ದೃಷ್ಟಿಯಿಂದ ನೋಡಲಾಗಿದೆ ಎಂದು ಕೆಲವರು ಟೀಕಿಸಿದ್ದಾರೆ.

ಹಣ ಸಂಪಾದನೆಗಾಗಿ ದೈವವನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ದೈವದ ಈ ಎಚ್ಚರಿಕೆ ಭವಿಷ್ಯದಲ್ಲಿ ಇಂತಹ ಅನುಕರಣೆಗಳನ್ನು ತಡೆಯಲು ಸಹಕಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.

Previous articleUKಯ 9 ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್ ತೆರೆಯಲು ಸಿದ್ಧ
Next articleಪಡಿತರ: ಅಕ್ಕಿ ಜತೆ ಆಹಾರ ಕಿಟ್‌ ನೀಡಲು ಸಚಿವ ಸಂಪುಟ ನಿರ್ಣಯ

LEAVE A REPLY

Please enter your comment!
Please enter your name here