ಬಾಲಿವುಡ್ ನಟ ರಣವೀರ್ ಸಿಂಗ್ ದೈವಕ್ಕೆ ಅಪಮಾನ ಮಾಡಿದ್ದಾರೆ. ಅಲ್ಲದೇ ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದಾರೆ.
ಗೋವಾ ಫಿಲ್ಮೋತ್ಸವದಲ್ಲಿ ಭಾಗಿಯಾಗಿದ್ದ ನಟ ರಣವೀರ್ ಸಿಂಗ್ ವೇದಿಕೆ ಮೇಲೆ ರಿಷಬ್ ಶೆಟ್ಟಿ ನಟನೆಯನ್ನು ಹೊಗಳಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ.
ಕಾಂತಾರ ಚಾಪ್ಟರ್-1 ಚಿತ್ರದಲ್ಲಿ ಬರುವ ಚಾಮುಂಡಿ ದೇವರನ್ನು ‘ಹೆಣ್ಣು ದೆವ್ವ’ ಅಂತ ಕರೆದಿದ್ದಾರೆ. ಈ ಮೂಲಕ ತುಳುನಾಡಿನ ದೈವಕ್ಕೆ ರಣವೀರ್ ಸಿಂಗ್ ಅಪಮಾನ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ರಿಷಬ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಲಿಲ್ಲ: ಚಾಮುಂಡಿ ದೇವಿಯನ್ನು ದೈವವೆನ್ನುವ ಬದಲು ದೆವ್ವ ಎನ್ನುವ ರೀತಿ ಸಂಭೋದಿಸಿದ್ದಾರೆ. ರಿಷಬ್ ಶೆಟ್ಟಿ ನಟನೆಯನ್ನು ವಿಕಾರವಾಗಿ ತೋರಿಸಿದ್ದಾರೆ. ಅವರು ಆ ರೀತಿ ಮಾಡುವಾಗ ರಿಷಬ್ ಶೆಟ್ಟಿ ಕಾರ್ಯಕ್ರಮದ ಮುಂದಿನ ಸಾಲಿನಲ್ಲೇ ಕುಳಿತಿದ್ದರು. ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿಯವರು ಅದನ್ನು ನೋಡಿ ವಿರೋಧಿಸುವ ಬದಲು ನಗುತ್ತಾ ಪ್ರೋತ್ಸಾಹಿಸಿದ್ದು ಕೂಡ ಹಲವರಿಗೆ ಇಷ್ಟವಾಗಿಲ್ಲ. ಈ ಕುರಿತಂತೆ ರಿಷಬ್ ಯಾಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನಿಸಿದ್ದಾರೆ.


























