ಸಂಪಾದಕೀಯ: ಸಭಾಪತಿ, ಸ್ಪೀಕರ್ ಮಧ್ಯೆ ಸಾಮರಸ್ಯ ಅತ್ಯಂತ ಅಗತ್ಯ

0
13

ಸಂಯುಕ್ತ ಕರ್ನಾಟಕ ಪತ್ರಿಕೆ ಗುರುವಾರದ ಸಂಪಾದಕೀಯ

ಕರ್ನಾಟಕ ವಿಧಾನಮಂಡಲಕ್ಕೆ ಇಡೀ ದೇಶದಲ್ಲಿ ಉತ್ತಮ ಹೆಸರಿದೆ. ಅದರಲ್ಲೂ ಇಲ್ಲಿ ಸ್ಪೀಕರ್ ಮತ್ತು ಸಭಾಪತಿಗಳಾದವರು ಉನ್ನತ ವ್ಯಕ್ತಿಗಳು. ವಿಧಾನ ಮಂಡಲದ ಕಡತಗಳಲ್ಲಿ ಅವರ ಚಿಂತನೆಗಳು ಚಿರಸ್ಥಾಯಿಯಾಗಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಈಗಿನ ಸ್ಪೀಕರ್ ಮತ್ತು ಸಭಾಪತಿಗಳ ಕರ್ತವ್ಯವೂ ಹೌದು. ಸಭಾಪತಿ ಅನುಭವದಲ್ಲಿ ಹಿರಿಯರು. ವಿಧಾನಸಭೆ ಸ್ಪೀಕರ್ ಅಧಿಕಾರ ಶ್ರೇಣಿಯಲ್ಲಿ ದೊಡ್ಡವರು. ಆದರೆ ಇಬ್ಬರಿಗೂ ಸಮಾನ ಅಧಿಕಾರವಿದೆ. ಆಯಾ ಸದನಗಳಿಗೆ ಅವರಿಗೇ ಪರಮಾಧಿಕಾರ. ಯಾವುದೇ ನಿರ್ಧಾರ ಅವರು ಸದನದೊಳಗೆ ಕೈಗೊಂಡಿದ್ದು ಅವರದೇ. ಅವರು ಬೇರೆಯವರ ಮೇಲೆ ವರ್ಗಾಯಿಸಲು ಬರುವುದಿಲ್ಲ. ಹಾಗೇ ನೋಡಿದರೆ ಮೇಲ್ಮನೆಗೆ ನಮ್ಮಲ್ಲಿ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದು ರೂಪುಗೊಂಡಿದ್ದು. ಈಗಿನ ಸಭಾಪತಿ ಅತ್ಯಂತ ಹಿರಿಯರು. ಉತ್ತಮ ಸಂಸದೀಯ ಪಟು. ಅವರ ಸಲಹೆ ಮತ್ತು ಮಾರ್ಗದರ್ಶನ ಸ್ಪೀಕರ್ ಪಡೆದುಕೊಂಡಲ್ಲಿ ತಪ್ಪೇನಿಲ್ಲ. ವಿಧಾನಮಂಡಲದ ಪರಂಪರೆಯನ್ನು ಉಳಿಸಿ ಬೆಳೆಸುವುದು ಇಬ್ಬರ ಕರ್ತವ್ಯ.

ಎಲ್ಲ ರಾಜ್ಯಗಳಲ್ಲಿ ಮೇಲ್ಮನೆ ಇಲ್ಲ. ನಮ್ಮಲ್ಲಿ ಮೊದಲಿನಿಂದಲೂ ಮುಂದುವರಿದಿದೆ. ಇದರಿಂದ ವಿಧಾನಸಭೆಯಲ್ಲಿ ರಚಿಸಿದ ಶಾಸನಗಳನ್ನು ಮುಕ್ತವಾಗಿ ಚರ್ಚಿಸಲು ಮೇಲ್ಮನೆ ಇದೆ. ಸರ್ಕಾರ ಆಯತಪ್ಪದಂತೆ ಎಚ್ಚರವಹಿಸುವುದು ಮೇಲ್ಮನೆ ಎಂಬುದನ್ನು ಮರೆಯಬಾರದು. ಹೀಗಾಗಿ ಹೆಸರಿಗೆ ತಕ್ಕಂತೆ ಅದು ಮೇಲ್ಮನೆ. ಅದಕ್ಕೆ ಗೌರವ ತೋರುವುದು ಅಗತ್ಯ. ಶಾಸನ ರಚನೆಯಲ್ಲಿ ವಿಧಾನಸಭೆ ಹೆಚ್ಚಿನ ಅಧಿಕಾರವಿದ್ದರೂ ಮೇಲ್ಮನೆಯನ್ನು ಕಡೆಗಣಿಸಲು ಬರುವುದಿಲ್ಲ. ಹಿಂದೆ ಮೇಲ್ಮನೆಯಲ್ಲಿ ಬಹಳ ಉತ್ತಮ ವಾಗ್ಮಿಗಳು ಸದಸ್ಯರಾಗಿ ಬರುತ್ತಿದ್ದರು. ಅದರಿಂದ ಚರ್ಚೆ ಕೂಡ ಸುದೀರ್ಘವಾಗಿ ನಡೆಯುತ್ತಿತ್ತು. ಧರಣಿ, ಸಭಾತ್ಯಾಗ ಬಹಳ ಕಡಿಮೆ ಇತ್ತು. ಪಕ್ಷ ರಾಜಕಾರಣ ಮೀರಿ ಚರ್ಚೆ ನಡೆಯತ್ತಿತ್ತು. ಇಂಥ ಮೇಲ್ಮನೆಯ ಸಭಾಪತಿಗಳಿಗೆ ಸಹಜವಾಗೇ ಗೌರವ ಸಲ್ಲಬೇಕು.

ವಿಧಾನಸಭೆ ಸ್ಪೀಕರ್ ಕೂಡ ಸಭಾಪತಿಯೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ಇಬ್ಬರೂ ಚರ್ಚೆ ನಡೆಸಿಕೊಂಡಲ್ಲಿ ವಿರಸ ಮೂಡುವುದಕ್ಕೆ ಅವಕಾಶವೇ ಇರುವುದಿಲ್ಲ. ಇಬ್ಬರೂ ಹುದ್ದೆಗಳು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ್ದಲ್ಲ. ಇಬ್ಬರೂ ಪಕ್ಷಾತೀತವಾಗಿ ಕೆಲಸ ಮಾಡಬೇಕಿರುವುದರಿಂದ ಹಾಗೂ ಸದನವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದ ಅಗತ್ಯವಾಗಿರುವುದರಿಂದ ಇಬ್ಬರಲ್ಲೂ ಸಾಮರಸ್ಯ ಮೂಡುವುದು ಅಗತ್ಯ. ಸಾಮಾನ್ಯವಾಗಿ ಮೇಲ್ಮನೆ ಕಲಾಪಗಳು ರಾಜ್ಯಸಭೆ ರೀತಿಯಲ್ಲಿ ನಡೆಯುತ್ತದೆ. ಆದರೆ ರಾಜ್ಯಸಭೆಯ ರಚನೆಯಲ್ಲಿ ಕೆಲವು ಅಧಿಕಾರಗಳನ್ನು ಸಂವಿಧಾನದಲ್ಲೇ ನೀಡಲಾಗಿದೆ. ಅಲ್ಲದೆ ಅಲ್ಲಿಯ ಅಧ್ಯಕ್ಷರು ಉಪರಾಷ್ಟ್ರಪತಿ. ಹೀಗಾಗಿ ಅವರಿಗೆ ಹೆಚ್ಚಿನ ಅಧಿಕಾರ ಇದ್ದೇ ಇರುತ್ತದೆ.

ರಾಜ್ಯದಲ್ಲಿ ಈ ರೀತಿ ಮೇಲ್ಮನೆಗೆ ಅಧಿಕಾರ ನೀಡಿಲ್ಲ. ಎರಡು ಸದನಗಳು ಒಮ್ಮತದಿಂದ ಕೆಲಸ ಮಾಡಬೇಕು ಎಂದರೆ ಎರಡೂ ಸದನ ನಡೆಸುವ ಅಧ್ಯಕ್ಷರು ಉತ್ತಮ ಸಹಕಾರ ಹೊಂದಿರಬೇಕು. ಎರಡೂ ಸದನಗಳಿಗೆ ಪ್ರತ್ಯೇಕ ಸಚಿವಾಲಯ ಇದ್ದೇ ಇದೆ. ಆದರೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದ ವಿಧೇಯಕಗಳು ಮೇಲ್ಮನೆಗೆ ಬರಬೇಕು. ಹಣಕಾಸು ವಿಧೇಯಕಗಳು ಮಾತ್ರ ವಿಧಾನಸಭೆಯಲ್ಲಿ ಮಂಡನೆಯಾಗಲೇಬೇಕು. ಪಕ್ಷ ರಾಜಕಾರಣಕ್ಕೂ ಸಮಾಜ ಹಿತ ಕಾಪಾಡುವುದಕ್ಕೂ ಅಂತರ ಇರುವುದರಿಂದಲೇ ಎರಡು ಸದನಗಳನ್ನು ರಚಿಸಲಾಗಿದೆ. ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಎರಡು ಸದನಗಳ ಪೀಠಾಧಿಕಾರಿಗಳ ಕರ್ತವ್ಯ. ಹಿಂದೆ ಹಲವು ಬಾರಿ ಭಿನ್ನಾಭಿಪ್ರಾಯಗಳು ಮೂಡಿದಾಗ ಅದನ್ನು ಬಹಿರಂಗಗೊಳ್ಳದಂತೆ ಶಮನಗೊಳಿಸುವ ಕೆಲಸ ನಡೆಯುತ್ತಿತ್ತು.

ಮೇಲ್ಮನೆ ಸಭಾಪತಿ ಪತ್ರದ ಮೂಲಕ ಅಸಮಾಧಾನ ಹೊರಹಾಕುವ ಪರಿಸ್ಥಿತಿ ಬರಬಾರದಿತ್ತು. ಎರಡೂ ಸದನಗಳು ಸೇರಿ ತೀರ್ಮಾನ ಕೈಗೊಳ್ಳುವಾಗ ಪರಸ್ಪರ ಹೊಂದಾಣಿಕೆ ಅಗತ್ಯ. ಇದಕ್ಕಾಗಿ ವಿಶೇಷ ಬೋರ್ಡ್ ರಚನೆಯಾಗಿರುತ್ತದೆ. ಇದರಲ್ಲಿ ಎರಡೂ ಸದನದ ಅಧ್ಯಕ್ಷರಲ್ಲದೆ ಹಣಕಾಸು ಸಚಿವರು, ಸಂಸದೀಯ ವ್ಯವಹಾರಗಳ ಸಚಿವರು ಇರುತ್ತಾರೆ. ಬಹುತೇಕ ಸಮಯದಲ್ಲಿ ಸಭಾಪತಿ ಏಕಾಂಗಿಯಾಗಿ ಉಳಿದುಬಿಡುವ ಸಂದರ್ಭಗಳು ಬರುತ್ತವೆ. ಸಾರ್ವಜನಿಕ ಹಿತ ಕಾಯುವುದು ಎಲ್ಲರ ಕರ್ತವ್ಯವಾಗಿರುವುದರಿಂದ ಅನ್ಯೋನ್ಯತೆ ಕಷ್ಟವಾಗುವುದಿಲ್ಲ. ರಾಜಕೀಯ ಚಟುವಟಿಕೆಗಳು ಹೊರಗೆ ನಡೆದರೂ ಅದು ಸದನದಲ್ಲಿ ಪ್ರತಿಧ್ವನಿಗೊಳ್ಳುವಂತಿಲ್ಲ.

ಈಗಲೂ ನ್ಯಾಯಾಲಯಗಳು ಎರಡು ಸದನಗಳ ಅಧ್ಯಕ್ಷರ ನಡವಳಿಕೆಯನ್ನು ಪ್ರಶ್ನಿಸುವುದಿಲ್ಲ. ಅವರ ತೀರ್ಮಾನಗಳು ಪ್ರಶ್ನಾತೀತ. ಆದರೆ ಅದು ಸಂವಿಧಾನಬದ್ಧವಾಗಿರಬೇಕು. ಅದಕ್ಕೆ ಮೇಲ್ಮನೆ ಸಭಾಪತಿಯ ಮಾರ್ಗದರ್ಶನ ಸೂಕ್ತ ಎನ್ನುವುದರಲ್ಲಿ ಸಂದೇಹವಿಲ್ಲ. ಸಂಸದೀಯ ನಡವಳಿಕೆಯಲ್ಲಿ ಸತ್ಸಂಪ್ರದಾಯಗಳನ್ನು ಮುಂದುವರಿಸುವುದು ಬಹಳ ಮುಖ್ಯ. ಮೇಲ್ಮನೆಯ ನಡವಳಿಕೆಯಲ್ಲಿ ಯಾವುದೇ ಅನುಮಾನ ಬಂದರೂ ಅವರು ಅನುಸರಿಸುವುದು ರಾಜ್ಯಸಭೆಯನ್ನೇ. ಹೀಗಾಗಿ ಸಂಸದೀಯ ನಡವಳಿಕೆಗೆ ಹಿರಿಯರ ಮಾರ್ಗದರ್ಶನ ಬಹಳ ಮುಖ್ಯ. ಹೊಸ ಹೊಸ ನಿಯಮಗಳಲ್ಲಿ ರಚಿಸುವುದು ಕಷ್ಟ.

Previous articleಬಾಳೆಹಣ್ಣಿಗೆ 35 ಲಕ್ಷ ಖರ್ಚು: ಬಿಸಿಸಿಐಗೆ ಕೋರ್ಟ್‌ ನೋಟಿಸ್
Next articleಪರಿಸರವಾದಿಗಳಿಗೆ ಜಯ: ಕಂಟೋನ್ಮೆಂಟ್ ಜೀವವೈವಿಧ್ಯ ತಾಣವಾಗಿ ಘೋಷಣೆ

LEAVE A REPLY

Please enter your comment!
Please enter your name here