ಕಾವೇರಿಯ ಕೂಗು ಕೃಷ್ಣೆಗೆ ಏಕಿಲ್ಲ

0
18
ಸಂಪಾದಕೀಯ

ಕಾವೇರಿಗೆ ಕೇಳಿ ಬರುವ ಕೂಗು ಕೃಷ್ಣೆಯ ವಿಚಾರದಲ್ಲಿ ಕೇಳಿ ಬರುತ್ತಿಲ್ಲ. ಇದಕ್ಕೆ ಕಾರಣ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉತ್ತರ ಕರ್ನಾಟಕದಿಂದ ಬರುವ ೧೧೦ ಶಾಸಕರ ಪಾತ್ರವೇನು ಎಂಬುದು ತಿಳಿದುಬಂದಿಲ್ಲ.

ಕಾವೇರಿಯಲ್ಲಿ ನೀರಿಲ್ಲ. ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ಕೂಗು ಈಗ ಸುಪ್ರೀಂ ಕೋರ್ಟ್ಗೆ ಕೇಳುವ ಹಾಗೆ ಎಲ್ಲ ಕಡೆ ಕೇಳಿ ಬರುತ್ತಿದೆ. ಸರ್ವಪಕ್ಷಗಳ ಸಭೆಯಲ್ಲಿ ಎಲ್ಲ ಶಾಸಕರು ಒಕ್ಕೊರಲ ಧ್ವನಿಯಿಂದ ಕಾವೇರಿ ಪರ ನಿಂತಿದ್ದಾರೆ. ಈ ಒಗ್ಗಟ್ಟು ಕೃಷ್ಣೆಯ ವಿಚಾರ ಬಂದಾಗ ಕಂಡು ಬರುವುದಿಲ್ಲ ಎಂಬುದು ಉತ್ತರ ಕರ್ನಾಟಕದ ರೈತರ ಅಳಲು.
ಕಾವೇರಿಯಲ್ಲಿ ನೀರಿನ ಅಭಾವ ಇದೆ. ಕೃಷ್ಣೆಯಲ್ಲಿ ನಮ್ಮ ಪಾಲಿನ ನೀರು ಹೆಚ್ಚಾಗಿಯೇ ಇದೆ. ಅದನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಒಟ್ಟು ೧೧೩೦ ಟಿಎಂಸಿ. ಅದರಲ್ಲಿ ೭೩೪ ಟಿಎಂಸಿಯಷ್ಟು ಬಳಸಿಕೊಂಡಿದ್ದೇವೆ. ಇನ್ನೂ ೧೭೩ ಟಿಎಂಸಿ ಬಳಸಿಕೊಳ್ಳಲು ಆಗಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಜನಪ್ರತಿನಿಧಿಗಳು ಹೇಳಬೇಕು ಎಂದು ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಉತ್ತರ ಕೊಡುವ ಯಾವ ನಾಯಕರೂ ಯಾವುದೇ ರಾಜಕೀಯ ಪಕ್ಷದಲ್ಲೂ ಕಂಡು ಬರುತ್ತಿಲ್ಲ. ನಮ್ಮದು ಪ್ರಜಾಪ್ರಭುತ್ವ. ಬಹುಮತದ ಮೇಲೆ ಎಲ್ಲ ತೀರ್ಮಾನಗಳಾಗುತ್ತವೆ. ಆದರೆ ಈ ಬಹುಮತ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಅನ್ವಯವಾಗುತ್ತಿಲ್ಲ.
ಒಟ್ಟು ೧೧೦ ಶಾಸಕರು ಈ ಭಾಗವನ್ನು ಪ್ರತಿನಿಧಿಸುತ್ತಾರೆ. ಅವರೆಲ್ಲರೂ ತಮ್ಮ ರಾಜಕೀಯ ಇಚ್ಛಾಶಕ್ತಿ ತೋರಿದ್ದರೆ ಕೃಷ್ಣಾ ಕಣಿವೆ ಸಮಸ್ಯೆಯೇ ಇರುತ್ತಿರಲಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ. ಚುನಾವಣೆ ಕಾಲದಲ್ಲಿ ವೀರಾವೇಶದ ಮಾತನಾಡುವ ಜನಪ್ರತಿನಿಧಿಗಳು ಬೆಂಗಳೂರಿಗೆ ಬಂದ ಕೂಡಲೇ ಉತ್ತರ ಕರ್ನಾಟಕವನ್ನು ಮರೆತು ಬಿಡುತ್ತಾರೆ. ಇಲ್ಲಿಯ ತಂಪಾದ ಹವೆ ಉತ್ತರ ಕರ್ನಾಟಕದ ಬಿಸಿ ವಾತಾವರಣವನ್ನು ಮರೆಯುವಂತೆ ಮಾಡಿಬಿಡುತ್ತದೆ. ಅಪರೂಪಕ್ಕೆ ಕೆಲವರು ತಮ್ಮ ಜನರನ್ನು ಆಗಾಗ್ಗೆ ನೋಡಲು ಹೋಗುತ್ತಾರೆ. ಬೀದರ್ ಜಿಲ್ಲೆಯ ಗಡಿ ಭಾಗದಲ್ಲಿರುವ ಜನ ಯಾವುದೇ ಸರ್ಕಾರದ ಎಲ್ಲ ಸಚಿವರನ್ನೂ ನೋಡೇ ಇಲ್ಲ. ಹೀಗಿರುವಾಗ ಸರ್ಕಾರ ಜನರ ಬಳಿಗೆ ಹೋಗುತ್ತದೆ ಎಂದು ಹೇಳುವುದು ಹೇಗೆ?
ನಾವು ಜನರಿಗೆ ಮತದಾನದ ಹಕ್ಕು ನೀಡಿದ್ದೇವೆ. ಅದೇರೀತಿ ಸ್ಪರ್ಧೆಯಲ್ಲಿ ಇರುವವರು ಯಾರೂ ಬೇಡ ಎಂದು `ನೋಟಾ’ ಹಕ್ಕು ಚಲಾಯಿಸಲು ಅವಕಾಶವಿದೆ. ಒಂದು ವೇಳೆ ಶೇಕಡ ೫೦ಕ್ಕಿಂತ ಹೆಚ್ಚು ಜನ ನೋಟಾ ನೀಡಿದರೆ ಎಲ್ಲ ಸ್ಪರ್ಧಿಗಳನ್ನು ಚುನಾವಣೆಯಿಂದ ದೂರ ಇಡಲು ಅವಕಾಶ ಎಲ್ಲಿದೆ? ಜನಪ್ರತಿನಿಧಿಗಳು ತಮ್ಮ ಆಸೆ ಅಕಾಂಕ್ಷೆಗಳನ್ನು ಪೂರೈಸದಿದ್ದಲ್ಲಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವ ಹಕ್ಕು ಜನಸಾಮಾನ್ಯರಿಗೆ ಎಲ್ಲಿದೆ? ಇದು ಈಗ ಉತ್ತರ ಕರ್ನಾಟಕದ ಜನರನ್ನು ಕಾಡುತ್ತಿರುವ ಪ್ರಶ್ನೆ.
ಡಬ್ಬಲ್ ಎಂಜಿನ್ ಸರ್ಕಾರ ಬಂದಿತು, ಹೋಯಿತು. ಈಗ ಒಂದೇ ಎಂಜಿನ್ ಉಳಿದುಕೊಂಡಿದೆ. ಉತ್ತರ ಕರ್ನಾಟಕದ ಜನ ಪೂರ್ಣ ಮನಸ್ಸಿನಿಂದ ಬೆಂಬಲ ನೀಡಿದ್ದರೂ ಅವರಿಗೆ ನ್ಯಾಯವಾಗಿ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಕರ್ನಾಟಕದ ಏಕೀಕರಣವಾದ ಮೇಲೆ ಉತ್ತರ ಕರ್ನಾಟಕದ ಜನರ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಭಾವಿಸಲಾಗಿತ್ತು. ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣವಾಯಿತು. ಆದರೂ ಅಧಿಕಾರ ವಿಕೇಂದ್ರೀಕರಣವಾಗಲಿಲ್ಲ. ಈಗಲೂ ವಿಧಾನಸೌಧ ಶಕ್ತಿ ಕೇಂದ್ರವಾಗಿ ಮುಂದುವರಿದಿದೆ. ಇದನ್ನು ಪ್ರಜಾಪ್ರಭುತ್ವದ ವೈಫಲ್ಯ ಎಂದು ಕರೆಯಬೇಕೋ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಎನ್ನಬೇಕೊ ತಿಳಿಯುತ್ತಿಲ್ಲ. ಜನಸಾಮಾನ್ಯರ ಕೈಯಲ್ಲಿರುವುದು ಮತದಾನದ ಶಕ್ತಿ. ಉಳಿದದ್ದು ಜನಪ್ರತಿನಿಧಿ ಕೈಯಲ್ಲಿದೆ. ಬಹುಸಂಖ್ಯಾತ ಶಾಸಕರು ಕಡಿಮೆ ಸಂಖ್ಯೆಯ ಶಾಸಕರ ಮಾತುಗಳಿಗೆ ತಲೆಬಾಗುತ್ತಾರೆ.
ಉತ್ತರ ಕರ್ನಾಟಕದಲ್ಲಿ ಕೃಷ್ಣೆ, ಭೀಮಾ, ಮಲಪ್ರಭ, ಘಟಪ್ರಭ, ತುಂಗಭದ್ರಾ, ಮಹಾದಾಯಿ, ಕಾರಂಜಾ ಪ್ರಮುಖ ನದಿಗಳಿವೆ. ಅಲ್ಲಿ ಹರಿಯುವ ನೀರನ್ನು ಸರಿಯಾಗಿ ಬಳಸಿಕೊಂಡಿದ್ದರೆ ಬರಗಾಲವೇ ಬರುತ್ತಿರಲಿಲ್ಲ. ಈಗ ಪ್ರತಿಯೊಬ್ಬರಿಗೆ ೫ ಕೆಜಿ ಅಕ್ಕಿ ಕೊಡಲು ಬೇರೆ ರಾಜ್ಯದವರನ್ನು ಕೇಳುವ ಪರಿಸ್ಥಿತಿ ಬಂದಿದೆ. ಕೃಷ್ಣಾ ನ್ಯಾಯಮಂಡಳಿ ತೀರ್ಪುಬಂದು ಹಲವು ವರ್ಷಗಳೇ ಆಗಿದ್ದರೂ ಇನ್ನೂ ಗೆಜೆಟ್ ನಲ್ಲಿ ಪ್ರಕಟಗೊಂಡಿಲ್ಲ. ಬೇಸಿಗೆ ಕಾಲ ಬಂತು ಎಂದರೆ ಮಹಾರಾಷ್ಟçದವರಿಗೆ ದುಡ್ಡು ಕೊಟ್ಟು ಕೃಷ್ಣ ಮತ್ತು ಭೀಮಾ ನೀರನ್ನು ಬಿಡಿಸಿಕೊಳ್ಳುತ್ತೇವೆ. ಇದು ನಮ್ಮ ದುರ್ದೈವ.

Previous articleಧ್ವನಿ ಎತ್ತುವವರ ವಿರುದ್ಧ ಧಮನ ಮಾಡುವ ಕೆಲಸ ನಡೆದಿದೆ
Next articleಭಗವಂತನ ನಾಮ ಶ್ರವಣ ಮಾಡುವ ಶ್ರಾವಣ