ಕರಾವಳಿ ಜಿಲ್ಲೆಗಳಿಗೆ ಬೇಕಿದೆ ಸಾಮಾಜಿಕ ನೆಮ್ಮದಿ ಬದುಕು

0
36

ಕರಾವಳಿ ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯದ ಬೆಳವಣಿಗೆ ಕುಂಠಿತಗೊಂಡಿದೆ. ಇದಕ್ಕೆ ಉತ್ತಮ ಸಾಮಾಜಿಕ ವಾತಾವರಣದ ಕೊರತೆಯೇ ಕಾರಣ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗ ಅಗತ್ಯ ಇರುವುದು ಸಾಮಾಜಿಕ ನೆಮ್ಮದಿ. ಅಂದರೆ ಜನಸಾಮಾನ್ಯರು ಸುರಕ್ಷಿತವಾಗಿ ತನ್ನ ದೈನಂದಿನ ಚಟುವಟಿಕೆ ಕೈಗೊಳ್ಳಲು ಬೇಕಾದ ವಾತಾವರಣ. ಇದನ್ನು ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರ ನೀಡಲು ಬರುವುದಿಲ್ಲ. ಅಲ್ಲಿಯ ಜನ ಮನಃಪೂರ್ವಕವಾಗಿ ನಿರ್ಮಿಸಿಕೊಳ್ಳಬೇಕು. ಇದಕ್ಕೆ ಹಣಕಾಸು ಬೇಕಿಲ್ಲ. ಮಾನಸಿಕ ಸಮನ್ವಯತೆ. ಇದರಲ್ಲಿ ಮೇಲು-ಕೀಳು ಎಂಬುದಿಲ್ಲ. ಅವರು ತಪ್ಪು, ಇವರು ತಪ್ಪು ಎಂದು ಹೇಳುವುದಲ್ಲ. ಎಲ್ಲರೂ ಸೇರಿ ಹಿಂದಿನ ಕಹಿನೆನಪುಗಳನ್ನು ಮರೆತು ಹೊಸ ಬದುಕನ್ನು ಕಟ್ಟಿಕೊಳ್ಳುವುದು. ಅದರಲ್ಲೂ ಯುವ ಜನಾಂಗಗಳ ನಡುವೆ ಮಾನಸಿಕ ಗೋಡೆ ನಿರ್ಮಿಸುವುದನ್ನು ಮೊದಲು ಕೈಬಿಡಬೇಕು.
ಎರಡೂ ಜಿಲ್ಲೆಯ ಜನ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೊದಲಿನಿಂದಲೂ ಮುಂದುವರಿದವರು. ದೇಶ ವಿದೇಶಗಳಲ್ಲಿ ಸ್ವತಂತ್ರ ಜೀವನ ನಡೆಸುವಷ್ಟು ಬುದ್ಧಿಮತ್ತೆಯನ್ನು ಪಡೆದವರು. ಹಿಂದೆ ಸಹಬಾಳ್ವೆ ಇತ್ತು. ಅದರಿಂದ ಅಭಿವೃದ್ಧಿಯ ಮಾರ್ಗ ಸ್ಪಷ್ಟವಾಗಿತ್ತು. ಶಿಕ್ಷಣ ಮತ್ತು ಆರೋಗ್ಯ ವಿಷಯದಲ್ಲಿ ಎಲ್ಲ ಜಿಲ್ಲೆಗಳಿಗಿಂತ ಮುಂಚೂಣಿಯಲ್ಲಿತ್ತು. ಬೇರೆ ಜಿಲ್ಲೆಯವರು ತಮ್ಮ ಮಕ್ಕಳನ್ನು ಓದು ಮತ್ತು ಆರೋಗ್ಯಕ್ಕಾಗಿ ಕರಾವಳಿಗೆ ಕಳುಹಿಸಿಕೊಡುತ್ತಿದ್ದರು. ಈಗ ಬೇರೆ ಜಿಲ್ಲೆಯವರು ಕರಾವಳಿಗೆ ಬರುವುದಕ್ಕೆ ಒಮ್ಮೆ ಆಲೋಚಿಸಬೇಕಾದ ಸಂದರ್ಭ ಒದಗಿಬಂದಿದೆ. ಇದಕ್ಕೆ ಯಾರು ಕಾರಣ ಎನ್ನುವುದಕ್ಕಿಂತ, ಇದನ್ನು ಸರಿಪಡಿಸುವವರು ಯಾರು ಎಂಬುದು ಮುಖ್ಯ. ಈ ಭೀತಿಯ ವಾತಾವರಣ ಹೋಗಬೇಕು ಎಂದರೆ ಎರಡೂ ಜಿಲ್ಲೆಗಳ ಜನರೇ ಸಂಕಲ್ಪ ಮಾಡಬೇಕು. ಹಿಂದಿನ ಸವಿ ಬದುಕನ್ನು ಮತ್ತೆ ತರುತ್ತೇವೆ ಎಂದು ಸಂಕಲ್ಪ ಮಾಡಬೇಕು. ಉಡುಪಿಯಿಂದ ಬಂದ ಪ್ರೊ. ಯು.ಆರ್. ರಾವ್ ಅಂತಾರಾಷ್ಟ್ರೀಯ ಖ್ಯಾತಿಗಳಿಸಿದ ಬಾಹ್ಯಾಕಾಶ ವಿಜ್ಞಾನಿ. ಅವರ ಹೆಸರಿನಲ್ಲೇ ಉಡುಪಿ ಇದೆ. ಅದೇರೀತಿ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಅನೇಕ ದಿಗ್ಗಜರು ಅಲ್ಲಿಂದ ಬಂದವರು. ಈಗಲೂ ಶಿಕ್ಷಣಕ್ಕೆ ಮಣಿಪಾಲ್ ಪ್ರಮುಖ ಕೇಂದ್ರವಾಗಿದೆ. ಇಂಥ ಹೆಸರು ಮಾಡಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮೊದಲ ಪಂಕ್ತಿಯಲ್ಲಿದ್ದ ಕರಾವಳಿ ಈಗ
ರ‍್ಯಾಕಿಂಗ್‌ನಲ್ಲಿ ಕೆಳಗೆ ಇಳಿಯಲು ಯಾವ ಸರ್ಕಾರವೂ ಕಾರಣವಲ್ಲ. ಅಲ್ಲಿಯ ಜನ ತಮ್ಮ ಬದುಕಿನ ಆದ್ಯತೆಯನ್ನು ಬದಲಿಸಿಕೊಳ್ಳಬೇಕು ಎಂಬುದೇ ಪ್ರಮುಖವಾಗುತ್ತದೆ. ಮುಂದಿನ ಜನಾಂಗ ವಿಶ್ಚಪ್ರಜೆಯಾಗಬೇಕು ಎಂದರೆ ಎಲ್ಲ ಸಂಕುಚಿತ ಮನೋಭಾವಗಳನ್ನು ದೂರವಿಡಬೇಕು. ಅಲ್ಲದೆ ಸತ್ಯ ಮತ್ತು ಪ್ರಾಮಾಣಿಕತೆಗೆ ಒಳದಾರಿಗಳಿಲ್ಲ ಎಂಬುದು ಮೊದಲು ಮನಗಾಣಬೇಕು. ಜಗತ್ತಿನ ಯಾವುದೇ ಮೂಲೆಯಲ್ಲಿ ಬೇಕಾದರೂ ಎಲ್ಲ ಅಗತ್ಯ ಸವಲತ್ತುಗಳನ್ನು ಕಲ್ಪಿಸಬಹುದು. ಇಂಟರ್‌ನೆಟ್ ಮತ್ತು ಕಂಪ್ಯೂಟರ್ ಜಾಲದ ಮೂಲಕ ಎಲ್ಲಿ ಬೇಕಾದರೂ ಸಂಪರ್ಕ ಕೇಂದ್ರವನ್ನು ನಿರ್ಮಿಸಬಹುದು. ಜಗತ್ತಿನ ಎಲ್ಲ ಜ್ಞಾನವನ್ನು ಕರಾವಳಿಯ ಹೊಸ ಜನಾಂಗಕ್ಕೆ ಅಂಗೈನಲ್ಲಿ ಸಿಗುವಂತೆ ಮಾಡಬಹುದು. ಆದರೆ ಎಲ್ಲರೂ ಸರ್ವಜನಾಂಗದ ತೋಟದಲ್ಲಿರುವಂತೆ ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಮಾಡುವುದು ಕಷ್ಟದ ಕೆಲಸ. ಈಗ ಸಾಮಾಜಿಕ ವಾತಾವರಣ ಎಲ್ಲ ಕಡೆ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿದೆ. ಐಟಿ ಬಿಟಿ ದಿಗ್ಗಜರು ಮತ್ತು ಉದ್ಯಮಿಗಳು ಎಲ್ಲೇ ಬಂಡವಾಳ ಹೂಡಬೇಕಾದರೆ ಅಲ್ಲಿಯ ಸಾಮಾಜಿಕ ವಾತಾವರಣವನ್ನು ನೋಡುತ್ತಾರೆ. ಇದರ ಪುನರ್ ಸೃಷ್ಟಿ ಕರಾವಳಿ ಪ್ರದೇಶದಲ್ಲಿ ಆಗಬೇಕಿದೆ.ಕರಾವಳಿ ಜಿಲ್ಲೆಗಳು ಹಿಂದೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿತ್ತು. ಈಗ ಅದು ಕೆಳಹಂತಕ್ಕೆ ಇಳಿದಿದೆ. ಮೂಲಭೂತ ಸವಲತ್ತು ಹಾಗೇ ಮುಂದುವರಿದಿದೆ. ಆರೋಗ್ಯ ಕ್ಷೇತ್ರದಲ್ಲೂ ಉಡುಪಿ ಎರಡನೇ ಸ್ಥಾನದಲ್ಲಿತ್ತು. ಈಗ ರಾಜ್ಯದಲ್ಲಿ ೧೯ನೇ ಸ್ಥಾನಕ್ಕೆ ಇಳಿದಿದೆ. ಸಾಮಾಜಿಕ ವಾತಾವರಣವೂ ಪ್ರಮುಖ ಪಾತ್ರವಹಿಸಿದೆ ಎಂಬುದನ್ನು ಅಲ್ಲಗಳೆಯಲು ಬರುವುದಿಲ್ಲ.

Previous articleಗಾಯತ್ರಿ ಸೊಸೈಟಿಗೆ ಆಯ್ಕೆ
Next articleಮನೋಬಲಗಳು ಜೀವನದಲ್ಲಿ ತುಂಬಾ ಮುಖ್ಯ