ಬಾಗಲಕೋಟೆ: ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಮಳೆ ಅಬ್ಬರ ತಗ್ಗಿದೆ. ಆದರೆ ಮಹಾರಾಷ್ಟ್ರದ ನೀರಿನಿಂದಾಗಿ ಈ ಭಾಗದಲ್ಲಿ ಆತಂಕ ಉಂಟಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನ ಎಲ್ಲ 22 ಗೇಟ್‌ಗಳನ್ನು ಬಂದ್ ಮಾಡಿ ಒಟ್ಟು 524.2 ರಷ್ಟು ನೀರು ಶೇಖರಣೆಯಾಗಿತ್ತು. ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರವಿವಾರ ಮತ್ತು ಸೋಮವಾರ 82 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿವಿನ ಪ್ರಮಾಣವಿರುವ ಕಾರಣ ಬಂದಷ್ಟೇ ನೀರನ್ನು 10 ಗೇಟ್‌ಗಳ ಮೂಲಕ ಹೊರಕ್ಕೆ ಹಾಕಲಾಗುತ್ತಿದೆ.
ವಿಜಯಪುರ ಹೆದ್ದಾರಿ ಸಂಚಾರ ಮತ್ತೆ ಬಂದ್: ಭೀಮಾನದಿ, ಸೀನಾ ಪ್ರವಾಹದಿಂದಾಗಿ ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಮತ್ತೆ ಬಂದ್ ಆಗಿದೆ.
ಉಜಣಿ, ಪಂಢರಪುರ, ವೀರ, ಸೀನಾ ಕೋಲೆಗಾವ, ಚಾಂದನಿ ಅಣೆಕಟ್ಟುಗಳಿಂದ ಭೀಮಾ ಹಾಗೂ ಸೀನಾ ನದಿಯ ಪ್ರವಾಹ ತಾಸು ತಾಸಿಗೆ ಹೆಚ್ಚಾಗುತ್ತಿದ್ದು, ಸೊಲ್ಲಾಪುರ ಜಿಲ್ಲೆಯ ವಡಕಬಳಿ ಹತ್ತಿರದ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರ ಪರಿಣಾಮವಾಗಿ ಸೋಮವಾರ ಬೆಳಿಗ್ಗೆಯಿಂದ ಮತ್ತೆ ಹೆದ್ದಾರಿ ಬಂದ್ ಮಾಡಲಾಗಿದೆ.
ಕಳೆದ ದಿನಾಂಕ 24 ರಂದು ಮೊದಲ ಬಾರಿಗೆ ಹೆದ್ದಾರಿ ಬಂದ್ ಆಗಿತ್ತು. ನಾಲ್ಕು ದಿನಗಳ ನಂತರ ದಿನಾಂಕ 27 ರಂದು ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ ಸೋಮವಾರ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಹೆದ್ದಾರಿ ಬಂದ್ ಮಾಡಲಾಗಿದೆ.
6 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು: ಉಜಣಿ ಜಲಾಶಯ, ಸೀನಾ-ಕೋಲೆಗಾಂವ, ಚಾಂದನಿ, ಪಂಢರಪುರ ಸೇರಿದಂತೆ ಭೀಮಾ ಹಾಗೂ ಉಪನದಿಗಳಿಗೆ ಕಟ್ಟಲಾಗಿರುವ ಅಣೆಕಟ್ಟೆಗಳಿಂದ ಭೀಮಾ ನದಿಗೆ 6 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿಬಿಡಲಾಗುತ್ತಿದೆ.
ಸೀನಾದಿಂದ 2.6 ಲಕ್ಷ ಕ್ಯೂಸೆಕ್, ಉಜಣಿಯಿಂದ 1.60 ಲಕ್ಷ ಕ್ಯೂಸೆಕ್, ನೀರಾ ನರಸಿಂಗಪುರ ಸಂಗಮದಿಂದ 1.18 ಲಕ್ಷ ಕ್ಯೂಸೆಕ್, ಪಂಢರಪುರದಿಂದ 80 ಸಾವಿರ ಕ್ಯೂ. ನೀರು ಹರಿಬಿಡಲಾಗುತ್ತಿದ್ದು ಚಾಂದನಿ, ಕೋಲೆಗಾಂವ ಸೀನಾ, ವೀರ ಜಲಾಶಯಗಳಿಂದಲೂ ಭಾರೀ ಪ್ರಮಾಣದ ನೀರು ಬಿಡಲಾಗುತ್ತಿದೆ.
ಕರ್ನಾಟಕ ಮಹಾರಾಷ್ಟ್ರ ಸಮಾನಾಂತರ ಗಡಿಯ 8 ಬ್ಯಾರೇಜ್‌ಗಳ ಆಸುಪಾಸಿನ ಹಳ್ಳಿಗಳು ಮತ್ತೆ ಆತಂಕದಲ್ಲಿ ಸಿಲುಕಿವೆ. ಸೊನ್ನ ಬ್ಯಾರೇಜ್‌ನ ಎಲ್ಲ ಗೇಟ್‌ಗಳನ್ನು ತೆಗೆದು ಭಾರೀ ಪ್ರಮಾಣದ ನೀರು ಬಿಡುತ್ತಿರುವುದರಿಂದಾಗಿ ಅಫ್ಜಲ್‌ಪುರ, ಯಾದಗಿರಿಗೂ ಪ್ರವಾಹದ ಭೀತಿ ಹೆಚ್ಚಾಗಿದೆ. ಸನ್ನತಿ ಬ್ಯಾರೇಜ್ ಮುಳುಗಿದೆ.
ದಕ್ಷಿಣ ಸೋಲಾಪುರದ ಪ್ರವಾಹ ಪೀಡಿತ ಗ್ರಾಮಸ್ಥರು ಮನೆ ದುರಸ್ತಿಗಾಗಿ ಹಿಂತಿರುಗಲು ತಯಾರಿ ನಡೆಸುತ್ತಿರುವಾಗಲೇ, ಮತ್ತೆ ಪ್ರವಾಹ ತುತ್ತಾಗಿ ಗಂಜಿ (ಕಾಳಜಿ) ಕೇಂದ್ರಕ್ಕೆ ಹೋಗುವಂತೆ ಅಧಿಕಾರಿಗಳು ಸೂಚಿಸಿದರು.
ಭಾನುವಾರ ರಾತ್ರಿ ಸೀನಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಸೋಮವಾರ ಬೆಳಗ್ಗೆ ಸೋಲಾಪುರ-ವಿಜಯಪುರ ರಸ್ತೆ ಸಂಪರ್ಕ ಬಂದ್ ಮಾಡಲಾಯಿತು. ಧಾರಾಕಾರ ಮಳೆಯಿಂದಾಗಿ ಮಣ್ಣಿನ ಮನೆಗಳಿಗೆ ಹಾನಿಯಾಗಿದೆ.
ಭೀಮಾ ನದಿ ಪಾತ್ರಕ್ಕೆ ಅಪಾರ ಪ್ರಮಾಣದ ನೀರು ಬಂದಿದ್ದರಿಂದ ಇಂಡಿ ತಾಲೂಕಿನ 8 ಗ್ರಾಮಗಳು ಮತ್ತು ಆಲಮೇಲ ತಾಲೂಕಿನ 6 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಒಟ್ಟು 17 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. 185 ಕುಟುಂಬಗಳ 860 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ವಸತಿ, ಉಪಹಾರ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.