ಉತ್ತರ ಕನ್ನಡ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಹೋರಾಟ ಯಶಸ್ವಿ ಆಗಿದೆ. ಮೆಡಿಕಲ್ ಕಾಲೇಜಿನ ಜೊತೆಗೆ ಒಂದು ಸುಸಜ್ಜಿತ ಆಸ್ಪತ್ರೆಯೂ ಬಂದು ಇಲ್ಲಿನ ಜನರಿಗೆ ಉತ್ತಮ ವೈದ್ಯಕೀಯ ಸೇವೆಗಳು ಸಿಗುತ್ತವೆ ಎಂಬ ಕನಸು ಇತ್ತು. ಮೆಡಿಕಲ್ ಕಾಲೆಜು ಬಂದು 10 ವರ್ಷಗಳಾಗುತ್ತಾ ಬಂದರೂ ಸಹ ಇನ್ನೂ ಸುಸಜ್ಜಿತ ಆಸ್ಪತ್ರೆಯ ಕನಸು ಅಪೂರ್ಣವಾಗಿದ್ದು, ಯಾವಾಗ ಪೂರ್ಣಗೊಳ್ಳುವದು ಎಂದು ಕಾಯುವಂತಾಗಿದೆ.
ಇತ್ತೀಚೆಗೆ 450 ಹಾಸಿಗೆಗಳ ಆಸ್ಪತ್ರೆ ಕಾರ್ಯಾರಂಭ ಮಾಡಿದ್ದು, ಇನ್ನೂ ಔಪಚಾರಿಕವಾಗಿ ಉದ್ಘಾಟನೆ ಆಗಬೇಕಾಗಿದೆ. ಈ ಆಸ್ಪತ್ರೆಯಲ್ಲಿ ಐ ಸಿ.ಯು. ಗಳು, ಆಪರೇಶನ್ ಥೇಟರ್‌ಗಳು ಹಾಗೂ ತುರ್ತು ಚಿಕಿತ್ಸೆ ನೀಡುವ ಮೆಡಿಕಲ್, ಸರ್ಜಿಕಲ್, ಪ್ರಸೂತಿ-ಸ್ತ್ರೀರೋಗ (ಹೆರಿಗೆ ಕೊಠಡಿ ಸಹಿತ), ಚಿಕ್ಕಮಕ್ಕಳ ವಿಭಾಗ ಹಾಗೂ ಇವುಗಳ ಜೊತೆಗೆ ಟ್ರಾಮಾ ಸೆಂಟರ್ ಹಾಗೂ ಕ್ಯಾನ್ಸರ್ ಚಿಕಿತ್ಸಾ ಘಟಕ ಇರುವದು ಸಮಾಧಾನಕರ ಸಂಗತಿ.
ಆದರೆ ಎನ್. ಎಮ್.ಸಿ. ನಿಯಮಗಳ ಪ್ರಕಾರ 700 ಹಾಸಿಗೆಗಳ ಅಗತ್ಯತೆ ಇದೆ. ಜೊತೆಗೆ ಓ.ಪಿ.ಡಿ. ಬ್ಲಾಕ್, ರೇಡಿಯಾಲಜಿ ವಿಭಾಗ, ಎಮ್.ಆರ್.ಆಯ್, ಯಂತ್ರ, ಕಣ್ಣಿನ ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ಚರ್ಮರೋಗ ವಿಭಾಗ, ಮನೋರೋಗ ವಿಭಾಗಗಳು, ಡಯಾಲಿಸಿಸ್ ನಂತಹ ವಿಭಾಗಗಳು ಹಳೆಯ (ಜಿಲ್ಲಾ ಆಸ್ಪತ್ರೆಯ) ಕಟ್ಟಡದಲ್ಲಿಯೇ ಇರಬೇಕಾಗಿದೆ.
ಹಾಗಾದರೆ ಸೂಪರ ಸ್ಪೆಶಾಲಿಟಿ ಆಸ್ಪತ್ರೆ ಯಾವಾಗ?: ಈಗ ಜೈಲು ಕಟ್ಟಡ ಇರುವ ಸ್ಥಳದಲ್ಲಿ ಅಥವಾ ಐ.ಬಿ. ಕಟ್ಟಡ ಇರುವ ಸ್ಥಳದಲ್ಲಿ ಅಥವಾ ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡ ಇರುವ ಸ್ಥಳದಲ್ಲಿ 550 ಹಾಸಿಗೆಗಳ ಇನ್ನೊಂದು ಹೊಸ ಆಸ್ಪತ್ರೆಯ ಕಟ್ಟಡವನ್ನು ನಿರ್ಮಿಸಲೇಬೇಕು. ಆಗ ಮೆಡಿಕಲ್ ಕಾಲೇಜಿಗೆ ಇನ್ನೂ ಅಗತ್ಯವಿರುವ 250 ಹಾಸಿಗೆಗಳನ್ನು ಮೀಸಲಿರಿಸಿ, ಉಳಿಕೆಯ 300 ಹಾಸಿಗೆಗಳ ಮೂಲಕ ಸೂಪರ ಸ್ಪೆಶಾಲಿಟಿ ವಿಭಾಗಗಳನ್ನು ಸ್ಥಾಪಿಸಬಹುದಾಗಿದೆ.
ಸೂಪರ ಸ್ಪೆಶಾಲಿಟಿಗಳನ್ನು ಸ್ಥಾಪಿಸಲು ಏನೇನು ಬೇಕು?: ಈಗಾಗಲೇ ಇರುವ 450 ಹಾಸಿಗೆಗಳ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಮತ್ತು ಟ್ರಾಮಾ ಸೆಂಟರ್ ಇವೆ. ಮುಂಬರುವ 550 ಹಾಸಿಗೆಗಳ ಹೊಸ ಕಟ್ಟಡದಲ್ಲಿ ಕಾರ್ಡಿಯಾಲಜಿ, ಯುರಾಲಜಿ, ನೆಪ್ರಾಲಜಿ, ಪಿಡಿಯಾಟ್ರಿಕ್ಸ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ, ಆಂಕಾಲಜಿ, ಸರ್ಜಿಕಲ್ ಆಂಕಾಲಜಿ , ಪ್ಲಾಸ್ಟಿಕ್ ಸರ್ಜರಿ, ನ್ಯೂರೋಸರ್ಜರಿ, ಎಂಡೋಕ್ರ್ಯೆನಾಲಜಿ, ವಾಸ್ಕ್ಯುಲರ ಸರ್ಜರಿ, ನ್ಯುರಾಲಜಿ ಇತ್ಯಾದಿ ಸೂಪರಸ್ಪೆಶಾಲಿಟಿ ವಿಭಾಗಗಳನ್ನು ಸ್ಥಾಪಿಸಬೇಕು. ಈ ವಿಭಾಗಗಳಿಗೆ ಪ್ರಮುಖವಾಗಿ ಅಗತ್ಯವಿರುವ ಹೆಚ್ಚುವರಿ ಆಪರೇಶನ್ ಥೇಟರ್, ಕ್ಯಾತಲ್ಯಾಬ್, ಆಧುನಿಕ ಯಂತ್ರೋಪಕರಣಗಳ ಖರೀದಿ ಆಗಬೇಕಾದರೆ ಒಂದು ವಿವರವಾದ ಪ್ರಸ್ತಾವನೆಯನ್ನು ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿ, ಇದಕ್ಕೆ ಅಗತ್ಯವಿರುವ 200 ಕೋಟಿಗಳ ಅನುದಾನ ಬಿಡುಗಡೆ ಆಗಬೇಕು.
ಆದ್ದರಿಂದ ಈಗಾಗಲೇ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿರುವ ಸೂಪರ್ ಸ್ಪೆಶಾಲಿಟಿಗಳ ಸ್ಥಾಪನೆಯ ಯೊಜನೆಗೆ ಅನುಮೋದನೆ ನೀಡಿ, 2025-26 ರ ಸಾಲಿನ ಬಜೆಟ್ ನಲ್ಲಿ ಘೋಷಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದೆ.