ದಾಂಡೇಲಿ: ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಪರದಾಟ

0
35

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಸಭೆಯಲ್ಲಿ ಸಾರ್ವಜನಿಕರು ತಮ್ಮ ತುರ್ತು ಕೆಲಸಗಳಿಗೆ ಹೋದರೆ ಟೇಬಲ್‌ನಿಂದ ಟೇಬಲ್‌ಗೆ ಅಲೆದಾಡಿ ಕೆಲಸವಾಗದೇ ಸುಸ್ತಾಗಿ ಮನೆಗೆ ಸೇರುವಂತಹ ಪರಿಸ್ಥಿತಿ ಇದೆ. ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಜನರ ಕೆಲಸಗಳಿಗೆ ಆದ್ಯತೆ ನೀಡಬೇಕಾದ ನಗರಸಭಾ ಸದಸ್ಯರನ್ನೊಳಗೊಂಡ ಸಿಬ್ಬಂಧಿಗಳು, ಮುಖಂಡರು ಭೂಹಗರಣದಲ್ಲೆ ಕಾಲಹರಣ ಮಾಡುತ್ತಿದ್ದಾರೆ.

ಜಿಲ್ಲೆಯ ಅತಿ ದೊಡ್ಡ ಭೂಗಳ್ಳರ ಕೇಂದ್ರವಾಗಿರುವ ದಾಂಡೇಲಿ ನಗರದ ಬೆಲೆ ಬಾಳುವ ವಾಣಿಜ್ಯ ನಿವೇಶನಗಳೆಲ್ಲ ಸಿರಿವಂತರು, ಜನಪ್ರತಿನಿಧಿ, ಮುಖಂಡರು, ಪತ್ರಕರ್ತರು ಎಲ್ಲರೂ ಸೇರಿ ಆಶ್ರಯ ಯೋಜನೆಯ ಕಡು ಬಡವರಾಗಿ ಕಬಳಿಸಿ ದಾಖಲೆ ಸೃಷ್ಠಿಸಿದ್ದು ಜಿಲ್ಲೆಯ ಇತಿಹಾಸ ಪುಟದಲ್ಲಿ ದಾಖಲಾಗಲಿದೆ. ಈಗಾಗಲೇ ರಾಜ್ಯ ಉಚ್ಛ ನ್ಯಾಯಾಲಯ ಛೀಮಾರಿ ಹಾಕಿದೆ. ಲೋಕಾಯುಕ್ತ 1600 ಆಶ್ರಯ ನಿವೇಶನಗಳ ಅಕ್ರಮ ದ ಕುರಿತು ತನಿಖೆ ಆರಂಭಿಸಿದೆ.

ತನಿಖೆಗೆ ಏನೆಲ್ಲ ಅಡ್ಡಗಾಲು ಹಾಕಬೇಕು ಎನ್ನುವ ಎಲ್ಲ ಪ್ರಯತ್ನಗಳನ್ನು ಶಾಮೀಲಾದ ನಗರಸಭಾ ಅಧಿಕಾರಿ, ಸಿಬ್ಬಂಧಿ, ಜನಪ್ರತಿಗಳೊಟ್ಟಿಗೆ ಪತ್ರಕರ್ತರು ಮಿಲಾಪಿ ಕುಸ್ತಿಯಲ್ಲಿ ತೊಡಗಿದ್ದಾರೆ. ಕೆಲವರಿಗೆ ಪೊರ್ಜರಿ, ಚೀಟಿಂಗ್ ಕೇಸ್ ಬಗ್ಗೆ ಪರಿಶೀಲಿಸಲು ಪೋಲಿಸರ ಹತ್ತಿರ ಜಿಲ್ಲಾಧಿಕಾರಿಗಳಿಂದ ಶಿಫಾರಸ್ಸಾಗಿರುವದು ನಡುಕ ಹುಟ್ಟಿಸಿದೆ.

ಈ ಎಲ್ಲ ಹಗರಣಗಳಿಂದ ನಗರಸಭೆ ಆಡಳಿತ ವ್ಯವಸ್ಥೆಯೇ ಗಲೀಜಾಗಿದೆ. ಸಾರ್ವಜನಿಕರ ಯಾವುದೇ ಕೆಲಸಗಳು ಸರಳವಾಗಿ ಆಗುತ್ತಿಲ್ಲ. ಚಿಕ್ಕಪುಟ್ಟ ಕೆಲಸಗಳಿಗೆ ತಿಂಗಳುಗಟ್ಟಲೇ ಓಡಾಡಿಸಲಾಗುತ್ತದೆ. ಪ್ರತಿ ಕೆಲಸಕ್ಕೂ ದರ ಪಟ್ಟಿಯಂತೆ ಇಲ್ಲಿ ಭ್ರಷ್ಠಾಚಾರ ತಾಂಡವವಾಡುತ್ತಿದೆ. ನಗರಸಭೆಯಿಂದ ಈ ಹಿಂದೆ ಇದ್ದಂತ ಅನುಭವಸ್ಥ, ನುರಿತ ಖಾಯಂ ನೌಕರರಿಲ್ಲ. ಬಹುತೇಕರು ನಿವೃತ್ತರಾಗಿದ್ದರೆ, ಹಲವರು ಮೃತಪಟ್ಟಿದ್ದಾರೆ.

ಈಗ ಅನುಕಂಪದ ಆಧಾರದಲ್ಲಿ ಕೆಲಸಕ್ಕೆ ಸೇರಿಕೊಂಡವರು ಮತ್ತು ದಿನಗೂಲಿ ಸೇವಕರದೇ ದರ್ಬಾರು. ಇವರನ್ನು ನಿಯಂತ್ರಿಸಿ ಸಾರ್ವಜನಿಕರ ಕೆಲಸ ಸುಲಭವಾಗಿ ಆಗುವಂತೆ ನೋಡಿಕೊಳ್ಳಬೇಕಾದ ಅಧಿಕಾರಿಗಳ ಕುರ್ಚಿ ಖಾಲಿಯಾಗಿರುತ್ತದೆ. ಜನಪ್ರತಿನಿಧಿಗಳು ದಲ್ಲಾಳಿಗಳಂತೆ ವರ್ತಿಸುತ್ತಿರುವುದರಿಂದ ಆಡಳಿತ ಯಂತ್ರ ನಿಯಂತ್ರಿಸುವ ಕೆಲಸ ಇಲ್ಲಿ ಆಗುತ್ತಿಲ್ಲ.

ಈ ಕುರಿತು ಕಾರವಾರದ ನಗರಾಭಿವೃದ್ಧಿ ಕೋಶದ ಗಮನ ಸೆಳೆದರೂ ಪ್ರಯೋಜನವಿಲ್ಲ. ದಾಂಡೇಲಿ ಎಂದರೆ ಭೂ ಹಗರಣ ಮತ್ತು ದುರಾಡಳಿತಕ್ಕೆ ಮತ್ತೊಂದು ಹೆಸರು ಎಂಬಂತೆ ಇಲ್ಲಿಯ ಅಧಿಕಾರಿಗಳು ಬೆಚ್ಚಿ ಬೀಳುತ್ತಾರೆ. ಸರಿಪಡಿಸಲು ಹೋಗುವವರಿಗೆ ವಿಪರೀತ ಒತ್ತಡ ಬರುತ್ತದೆಯಂತೆ. ವರ್ಗಾವಣೆ, ಶಿಸ್ತುಕ್ರಮದ ಬೆದರಿಕೆಗಳು. ಹಲ್ಲು ಕಿತ್ತ ಹಾವಿನಂತಿರುವ ಪೌರಾಯುಕ್ತರು, ಹೇಳಿದ್ದನ್ನಷ್ಟೆ ಮಾಡುವ ಸಿಬ್ಬಂಧಿಗಳು ಸೇರಿ ಕಾಲಹರಣ ಮಾಡುವವರಿಗಷ್ಟೇ ದಾಂಡೇಲಿ ನಗರಸಭೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಬಿಗಿ ಆಡಳಿತ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಧಿಕಾರಿಗಳು ಈ ನಗರ ಸಭೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನು ಕಚೇರಿ ವೇಳೆಯಲ್ಲಿ ಬರುವ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತೆ ಮಾಡಲು ಅಗತ್ಯ ಕ್ರಮ ಜರುಗಿಸಬೇಕಿದೆ. ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದರೆ ಅವರ ಗಮನಕ್ಕೆ ಬರದಂತೆ ಹೊರಗಿನಿಂದಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವುಗಳನ್ನು ನಿಯಂತ್ರಿಸಿ ವಿಲೇವಾರಿಮಾಡಲಾಗುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.

Previous articleಗಾಜಾದಲ್ಲಿ ಶಾಂತಿ: ಮೋದಿ, ಟ್ರಂಪ್ ಮತ್ತು ಹೊಸ ಭರವಸೆ!
Next articleರಾಗಿ ಬೆಳೆಗೆ ಸೈನಿಕ ಹುಳು ಕಾಟ ತಪ್ಪಿಸಲು ಔಷಧ ಸಿಂಪಡಣೆ

LEAVE A REPLY

Please enter your comment!
Please enter your name here