Home ನಮ್ಮ ಜಿಲ್ಲೆ ಉತ್ತರ ಕನ್ನಡ ಕಾರ್ ದಹನ ಪ್ರಕರಣ: ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ

ಕಾರ್ ದಹನ ಪ್ರಕರಣ: ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ

0
6

ದಾಂಡೇಲಿ (ಉತ್ತರ ಕನ್ನಡ): ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ಜ.7ರಂದು ನಡೆದಿದ್ದ ಕಾರು ದಹನ ದುರಂತವು ಅಪಘಾತವಲ್ಲ, ಪೂರ್ವನಿಯೋಜಿತವಾಗಿ ನಡೆದ ಕೊಲೆ ಪ್ರಕರಣ ಎಂಬುದನ್ನು ಹೊನ್ನಾವರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಘಟನೆಯಲ್ಲಿ ಸಿದ್ದಾಪುರ ಮೂಲದ ಸಹೋದರರಾದ ಮಂಜುನಾಥ ಹಸ್ಲರ್ ಮತ್ತು ಚಂದ್ರಶೇಖರ್ ಹಸ್ಲರ್ ಅವರನ್ನು ಸಜೀವ ದಹನ ಮಾಡಲಾಗಿದೆ ಎಂಬ ಭಯಾನಕ ಸತ್ಯ ಬೆಳಕಿಗೆ ಬಂದಿದೆ.

ಈ ಸಂಬಂಧ ಸಿದ್ದಾಪುರ ತಾಲೂಕಿನ ಚಂದ್ರಘಟಕಿ ಗ್ರಾಮದ ಪ್ರಮೋದ್ ನಾಯ್ಕ ಎಂಬಾತನನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಕೊಲೆಯ ಸಂಪೂರ್ಣ ಸಂಚನ್ನು ಆತನೇ ಬಾಯ್ಬಿಟ್ಟಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ತಿಳಿಸಿದ್ದಾರೆ.

ಇದನ್ನೂ ಓದಿ:  ಜ.25ರಿಂದ ಉಳವಿ ಜಾತ್ರೆ ಆರಂಭ: ಫೆ.3 ಕ್ಕೆ ರಥೋತ್ಸವ

ಆರಂಭದಲ್ಲಿ ಅಪಘಾತ, ನಂತರ ಕೊಲೆ ಶಂಕೆ: ಜ.7ರಂದು ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ಕಾರಿನೊಂದಿಗೆ ಎರಡು ಮೃತದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಆರಂಭದಲ್ಲಿ ಇದನ್ನು ಆಕಸ್ಮಿಕ ಕಾರ್ ಅಪಘಾತವೆಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ ಮೃತರ ಸಹೋದರ ಉಮೇಶ್ ಹಸ್ಲರ್ ಅವರು, “ಇದು ಅಪಘಾತವಲ್ಲ, ಕೊಲೆ” ಎಂದು ದೂರು ನೀಡಿದ ಬಳಿಕ ಪ್ರಕರಣದ ದಿಕ್ಕೇ ಬದಲಾಗಿದೆ.

ಪ್ರಮುಖ ಸುಳಿವು – ಸುಟ್ಟ ಗಾಯಗಳು: ತನಿಖೆಯ ವೇಳೆ, ಘಟನೆಯ ಬಳಿಕ ಪ್ರಮೋದ್ ನಾಯ್ಕ ಊರಿಗೆ ಬಾರದೆ ತಲೆಮರೆಸಿಕೊಂಡಿದ್ದ. ಅಲ್ಲದೆ, ಉಮೇಶ್ ಹಸ್ಲರ್ ಹಾಗೂ ಅವರ ಸಹಚರರು ಕಾರು ಸುಟ್ಟ ಸ್ಥಳಕ್ಕೆ ಭೇಟಿ ನೀಡಿದಾಗ, ಪ್ರಮೋದ್ ನಾಯ್ಕನ ಕೈ ಮತ್ತು ಕಾಲುಗಳಲ್ಲಿ ಸುಟ್ಟ ಗಾಯಗಳು ಇದ್ದುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೇ ಪ್ರಕರಣದ ಪ್ರಮುಖ ತಿರುವಾಗಿತ್ತು.

ಇದನ್ನೂ ಓದಿ:  ಹುಬ್ಬಳ್ಳಿಯಲ್ಲಿ ಕಟೌಟ್ ಕುಸಿತ: ಮೂವರು ಗಂಭೀರ ಗಾಯ

ಮೃತರ ಗುರುತು ದೃಢ: ಕಾರಿನಲ್ಲಿ ಸುಟ್ಟು ಮೃತಪಟ್ಟವರು: ಮಂಜುನಾಥ ಹಸ್ಲರ್ (35) – ಸಿದ್ದಾಪುರ ತಾಲೂಕಿನ ಕುಡಗುಂದ ಸನಿಹದ ಅಳವಳ್ಳಿ ಮೂಲ, ಚಂದ್ರಶೇಖರ್ ಹಸ್ಲರ್ (30), ಎಂದು ಪೊಲೀಸರು ಅಧಿಕೃತವಾಗಿ ದೃಢಪಡಿಸಿದ್ದಾರೆ. ಕುಟುಂಬಸ್ಥರು ಮೊದಲಿನಿಂದಲೂ ಇದನ್ನು ಕೊಲೆ ಎಂದು ಆರೋಪಿಸುತ್ತಿದ್ದರು.

ಹಣದ ವ್ಯವಹಾರ, ಇನ್ಶುರೆನ್ಸ್ ಲಾಭವೇ ಕೊಲೆಗೆ ಕಾರಣ: ಎಸ್ಪಿ ದೀಪನ್ ವಿವರಿಸಿದಂತೆ, “ಪ್ರಮೋದ್ ನಾಯ್ಕ ಮತ್ತು ಮೃತ ಸಹೋದರರ ನಡುವೆ ಸುಮಾರು 5 ಲಕ್ಷ ರೂಪಾಯಿ ಹಣದ ವ್ಯವಹಾರ ನಡೆದಿತ್ತು. ಸಾಲವನ್ನು ಮರಳಿ ಕೊಡಲಾಗದ ಕಾರಣ, ಜೊತೆಗೆ ಇನ್ಶುರೆನ್ಸ್ ಹಣದ ಮೇಲೆ ಕಣ್ಣು ಇಟ್ಟು, ಈ ಭೀಕರ ಕೃತ್ಯ ನಡೆಸಲಾಗಿದೆ.”

ಇದನ್ನೂ ಓದಿ:  ಕಟೌಟ್ ಕುಸಿತ ಪ್ರಕರಣ: ಗಾಯಾಳು ಯೋಗಕ್ಷೇಮ ವಿಚಾರಿಸಿದ ಸಚಿವ ಜಮೀರ್

ಕೀಟನಾಶಕ ಮಿಶ್ರಿತ ಮದ್ಯ ನೀಡಿ ಕೊಲೆ: ಪ್ರಮೋದ್ ನಾಯ್ಕ, ತನ್ನೊಂದಿಗೆ ತಂದಿದ್ದ ಸಾರಾಯಿಯಲ್ಲಿ ಕೀಟನಾಶಕವನ್ನು ಮಿಶ್ರಣ ಮಾಡಿ, ಅದನ್ನು ಮಂಜುನಾಥ ಮತ್ತು ಚಂದ್ರಶೇಖರ್‌ಗೆ ಕುಡಿಯಲು ಕೊಟ್ಟಿದ್ದಾನೆ. ಕೀಟನಾಶಕ ಮಿಶ್ರಿತ ಮದ್ಯ ಸೇವಿಸಿ ಇಬ್ಬರೂ ಸಾವನ್ನಪ್ಪಿದ ನಂತರ, ಮೃತದೇಹಗಳನ್ನು ಕಾರಿನಲ್ಲಿ ಹಾಕಿ ಸೂಳೆಮುರ್ಕಿ ಕ್ರಾಸ್‌ಗೆ ತೆಗೆದುಕೊಂಡು ಹೋಗಿ, ಪೆಟ್ರೋಲ್ ಸುರಿದು, ಕಾರಿಗೆ ಬೆಂಕಿ ಹಚ್ಚಿ ಅಪಘಾತದಂತೆ ತೋರಿಸಲು ಯತ್ನಿಸಿದ್ದಾನೆ ಎಂದು ವಿಚಾರಣೆಯಲ್ಲಿ ಆತ ತಪ್ಪೊಪ್ಪಿಕೊಂಡಿದ್ದಾನೆ.

ಸ್ನೇಹಿತರ ಸಹಾಯ: ಈ ಕೃತ್ಯಕ್ಕೆ ತನ್ನ ಸ್ನೇಹಿತರ ಸಹಾಯವನ್ನೂ ಪಡೆದಿದ್ದೇನೆ ಎಂದು ಪ್ರಮೋದ್ ನಾಯ್ಕ ಹೇಳಿಕೆ ನೀಡಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಇನ್ನಿಬ್ಬರು ಆರೋಪಿಗಳು ಬಂಧನ: ಪ್ರಕರಣಕ್ಕೆ ಸಂಬಂಧಿಸಿ, ಸನ್ಯ ಅಲಿಯಾಸ್ ರತ್ನಾಕರ ನಾಯ್ಕ, ಹೇಮಂತ್ ಎಂಬ ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ:  ಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್’ಗೆ ಬೆಂಕಿ: 8 ಯುವಕರು ವಶಕ್ಕೆ, ರೀಲ್ಸ್ ಶಂಕೆ

ಪ್ರಸ್ತುತ ಪ್ರಮೋದ್ ನಾಯ್ಕ ಪೊಲೀಸರ ವಶದಲ್ಲಿದ್ದು, ಈ ಕೊಲೆ ಪ್ರಕರಣದ ಎಲ್ಲ ಆಯಾಮಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.