ಶಿವಮೊಗ್ಗ: ರೈಲು ಮಾರ್ಗದ ಸಮೀಕ್ಷೆಗಳು, ಹೊಸ ರೈಲು ಮಾರ್ಗಗಳು

0
56

ಶಿವಮೊಗ್ಗ ಕ್ಷೇತ್ರದ ರೈಲು ಯೋಜನೆಗಳ ಕುರಿತು ಹುಬ್ಬಳ್ಳಿಯ ರೈಲ್ವೆ ಜನರಲ್ ಮ್ಯಾನೇಜರ್ ಕಚೇರಿಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ವಿವಿಧ ರೈಲು ಯೋಜನೆಗಳ ಕುರಿತು ಮಾಹಿತಿಗಳನ್ನು ಪಡೆದರು.

ನೂತನ ರೈಲು ಮಾರ್ಗ ಹಾಗೂ ಸಿವಿಲ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆಯನ್ನು ನಡೆಸಿದರು. ಸಭೆಯಲ್ಲಿ ರೈಲ್ವೆ ಹಿರಿಯ ಅಧಿಕಾರಿಗಳಾದ ಮಾಕುಲ್ ಸರಣ್, ಶ್ರೀ ಗುಪ್ತ, ಪ್ರಶಾಂತ್, ಕುಲದೀಪ್ ಮುಂತಾದವರು ಉಪಸ್ಥಿತರಿದ್ದರು.

ನೈಋತ್ಯ ರೈಲ್ವೆ ಹುಬ್ಬಳ್ಳಿ ವಲಯದ ಜನರಲ್ ಮ್ಯಾನೇಜರ್ ಮುಕುಲ್ ಸರಣ್ ಮಾಥೂರ್ ಜೊತೆ ಚರ್ಚೆ ನಡೆಸಿದ ಸಂಸದರು, ಶಿವಮೊಗ್ಗ-ಮಂಗಳೂರು, ಶಿವಮೊಗ್ಗ-ಹುಬ್ಬಳ್ಳಿ ನೇರ ರೈಲು ಸಂಪರ್ಕ ಕಲ್ಪಿಸುವ ನೂತನ ಮಾರ್ಗದ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.

ಹೊಸ ರೈಲು ಮಾರ್ಗಗಳು

  • ಶಿವಮೊಗ್ಗ-ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ನೂತನ ರೈಲು ಮಾರ್ಗ. ಶಿವಮೊಗ್ಗ-ಶೃಂಗೇರಿ ಮಾರ್ಗವಾಗಿ ಚಿಕ್ಕಮಗಳೂರು ಮತ್ತು ಹಾಸನಕ್ಕೆ ಸಂಪರ್ಕ ಕಲ್ಪಿಸುವ ನೂತನ ಮಾರ್ಗದ ಸಮೀಕ್ಷೆ ಕಾರ್ಯ ಬೇಗ ಮುಗಿಸುವುದು.
  • ತಾಳಗುಪ್ಪ-ಸಿದ್ದಾಪುರ-ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ನೂತನ ರೈಲು ಮಾರ್ಗ. ಸಮೀಕ್ಷೆಯನ್ನು ಬೇಗ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮನವಿ.
  • ಭದ್ರಾವತಿ-ಚಿಕ್ಕಜಾಜೂರು ನೂತನ ರೈಲು ಮಾರ್ಗ ಸಮೀಕ್ಷೆಯನ್ನು ಪೂರ್ಣಗೊಳಿಸುವುದು. ಮಲೆನಾಡು, ಉತ್ತರ ಕರ್ನಾಟಕ ಸಂಪರ್ಕಿಸಲು ಈ ಯೋಜನೆ ಸಹಾಯಕವಾಗಿದೆ.

ಕಾಮಗಾರಿಗೆ ವೇಗ ನೀಡುವುದು

  • ಶಿವಮೊಗ್ಗ-ಬೀರೂರು ದ್ವಿಪಥ ಹಳಿಗಳ ಜೋಡಣೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವುದು.
  • ಶಿವಮೊಗ್ಗ ಹೊರವಲುದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕುಡಿಯುವ ನೀರು, ರೈಲುಗಳ ಸ್ವಚ್ಛತೆಗೆ ನೀರಿನ ವ್ಯವಸ್ಥೆ ಕಲ್ಪಿಸುವುದು.
  • ಶಿವಮೊಗ್ಗ ರೈಲು ನಿಲ್ದಾಣದ ಫ್ಲಾಟ್‌ ಫಾರಂ ನಂಬರ್ 4 ಗೂಡ್ಸ್ ಶೆಡ್ ಅನ್ನು ಕೋಟೆಗಂಗೂರಿಗೆ ಸ್ಥಳಾಂತರ ಮಾಡಿ, ನಿಲ್ದಾಣದ ಫ್ಲಾಟ್ ಫಾರಂ 4-5 ಪ್ರಯಾಣಿಕರ ರೈಲಿಗೆ ಮುಕ್ತಗೊಳಿಸಿ, ಹೊಸ ರೈಲುಗಳನ್ನು ಆರಂಭಿಸುವುದು.

ಮೈಸೂರು, ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡಲು ನೈಋತ್ಯ ರೈಲ್ವೆ ಶಿವಮೊಗ್ಗ ನಗರದ ಹೊರವಲಯದ ಕೋಟೆಗಂಗೂರು ಎಂಬಲ್ಲಿ ಡಿಪೋ ನಿರ್ಮಾಣ ಮಾಡುತ್ತಿದೆ. ಇಲ್ಲಿ ರೈಲುಗಳ ನಿರ್ವಹಣೆ ಮಾಡಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ ಯೋಜನೆ ಇದಾಗಿದ್ದು, ರೈಲ್ವೆ ಕೋಚಿಂಗ್ ಡಿಪೋವನ್ನು 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 2026ರ ಫೆಬ್ರುವರಿಯಲ್ಲಿ ಲೋಕಾರ್ಪಣೆಯಾಗುವ ನಿರೀಕ್ಷೆಯಿದೆ.

ಸಾಮಾನ್ಯ ರೈಲುಗಳ ಜೊತೆ ವಂದೇ ಭಾರತ್ ರೈಲುಗಳನ್ನು ಸಹ ಇಲ್ಲಿ ನಿರ್ವಹಣೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ರೈಲ್ವೆ ನಿಲ್ದಾಣ, ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣವಾದ ಬಳಿಕ ಶಿವಮೊಗ್ಗಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸಲಿವೆ ಎಂದು ಅಂದಾಜಿಸಲಾಗಿದೆ.

Previous articleಆನ್‌ಲೈನ್ ಬೆಟ್ಟಿಂಗ್ ಹಗರಣ: ಯುವರಾಜ್ ಸಿಂಗ್ ಸೇರಿ ಹಲವರಿಗೆ ಇ.ಡಿ ವಿಚಾರಣೆ ಬಿಸಿ!
Next articleಬೆಳಗಾವಿ: ಗೋಮಾಂಸ ಸಾಗಾಟ ಆರೋಪ – ಲಾರಿಗೆ ಬೆಂಕಿ

LEAVE A REPLY

Please enter your comment!
Please enter your name here