Home ನಮ್ಮ ಜಿಲ್ಲೆ ದಾವಣಗೆರೆ Vande Bharat Train: ದಾವಣಗೆರೆಗೆ 2ನೇ ವಂದೇ ಭಾರತ್ ರೈಲು, ವೇಳಾಪಟ್ಟಿ

Vande Bharat Train: ದಾವಣಗೆರೆಗೆ 2ನೇ ವಂದೇ ಭಾರತ್ ರೈಲು, ವೇಳಾಪಟ್ಟಿ

0

ದಾವಣಗೆರೆ: ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಭಾನುವಾರ ಚಾಲನೆ ನೀಡಿದರು. ರೈಲು ದಾವಣಗೆರೆಗೆ ಬಂದಾಗ ಅದಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಈ ಮೂಲಕ ಬೆಣ್ಣೆ ನಗರಿ ಖ್ಯಾತಿಯ ದಾವಣಗೆರೆಗೆ 2ನೇ ವಂದೇ ಭಾರತ್ ರೈಲು ಸಿಕ್ಕಿದೆ.

ಬೆಂಗಳೂರು ನಗರದಿಂದ ಆಗಮಿಸಿದ ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ದಾವಣಗೆರೆಯಲ್ಲಿ ಸ್ವಾಗತಿಸಲಾಯಿತು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲು ಸ್ವಾಗತಿಸಿ, ಬಳಿಕ ಬೆಳಗಾವಿಗೆ ಹೊರಟ ರೈಲಿಗೆ ಹಸಿರು ನಿಶಾನೆ ತೋರಿಸಲಾಯಿತು. ಕೆಎಸ್ಆರ್‌ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲು ಸಹ ದಾವಣಗೆರೆ ಮೂಲಕ ಸಂಚಾರವನ್ನು ನಡೆಸುತ್ತದೆ. ಈ ಮೂಲಕ ನಗರಕ್ಕೆ 2 ವಂದೇ ಭಾರತ್ ರೈಲು ಸೇವೆ ಸಿಕ್ಕಿದೆ.

ರೈಲಿನ ವೇಳಾಪಟ್ಟಿ: ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, “ಬೆಂಗಳೂರು-ದಾವಣಗೆರೆ-ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ” ಎಂದು ಹೇಳಿದರು.

“ಹೆಚ್ಚಿನ ವೇಗದ ರೈಲು ಸೇವೆಯಿಂದ ಶಿಕ್ಷಣಕ್ಕಾಗಿ ಇಲ್ಲಿಗೆ ಮತ್ತು ಇಲ್ಲಿಂದ ಬೇರೆ ಕಡೆ ಹೋಗಲು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗೆ ಬೇರೆ ಕಡೆ ಹೋಗಲು, ಆಗಮಿಸಲು ಜನರಿಗೆ ಅನುಕೂಲವಾಗಲಿದೆ. ವ್ಯಾಪಾರ ವಹಿವಾಟು ಸಹ ಗರಿಗೆದರಲಿದೆ” ಎಂದರು.

“ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಆದಷ್ಟು ಬೇಗ ನಿರ್ಮಾಣವಾದಲ್ಲಿ ಇನ್ನೂ ಹೆಚ್ಚು ಅನುಕೂಲವಾಗಲಿದೆ. ರೈಲ್ವೆ ನಿಲ್ದಾಣದಲ್ಲಿ ಗುಣಮಟ್ಟದ ಆಹಾರ ಪ್ರಯಾಣಿಕರಿಗೆ ಸಿಗಬೇಕೆಂದು ಮತ್ತು ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಸಚಿವರೊಂದಿಗೆ ಚರ್ಚಿಸಲಾಗಿದ್ದು ಅಗತ್ಯವಿರುವ ಕಡೆ ರೈಲು ಸೇವೆಯನ್ನು ವಿಸ್ತರಿಸಲೂ ಸಹ ಮನವಿ ಮಾಡಲಾಗಿದೆ” ಎಂದು ಸಂಸದರು ತಿಳಿಸಿದರು.

ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲು ಪ್ರತಿದಿನ ಬೆಂಗಳೂರಿನಿಂದ ಮಧ್ಯಾಹ್ನ 2.20ಕ್ಕೆ ಹೊರಟು ಸಂಜೆ 5.48ಕ್ಕೆ ದಾವಣಗೆರೆಗೆ ಆಗಮಿಸಲಿದೆ. ರಾತ್ರಿ 10.40ಕ್ಕೆ ಬೆಳಗಾವಿಗೆ ತಲುಪಲಿದೆ. ಬೆಳಗಾವಿಯಿಂದ ಪ್ರತಿದಿನ ಬೆಳಗ್ಗೆ 5.20ಕ್ಕೆ ಹೊರಡುವ ರೈಲು ದಾವಣಗೆರೆಗೆ ಬೆಳಗ್ಗೆ 9.25ಕ್ಕೆ ತಲುಪಲಿದೆ. ಮಧ್ಯಾಹ್ನ 1.50ಕ್ಕೆ ಬೆಂಗಳೂರಿಗೆ ತಲುಪಲಿದೆ.

ಬೆಳಗಾವಿ-ಕೆಎಸ್ಆರ್‌ ಬೆಂಗಳೂರು ನಿಲ್ದಾಣದ ನಡುವೆ ರೈಲು ಸಂಖ್ಯೆ 26751 ಮತ್ತು ಕೆಎಸ್ಆರ್‌ ಬೆಂಗಳೂರು ಬೆಳಗಾವಿ ನಡುವೆ ರೈಲು ಸಂಖ್ಯೆ 26752 ಸಂಚಾರವನ್ನು ನಡೆಸಲಿದೆ. ಬುಧವಾರ ಹೊರತುಪಡಿಸಿ ವಾರದ 6 ದಿನ ರೈಲು ಓಡಲಿದೆ. ಬೆಂಗಳೂರು ನಗರದಿಂದ ದಾವಣಗೆರೆಗೆ ಸಂಚಾರ ನಡೆಸುವ ಜನರಿಗೆ, ದಾವಣಗೆರೆಯಿಂದ ಬೆಂಗಳೂರು ನಗರಕ್ಕೆ ತೆರಳುವ ಜನರಿಗೆ. ಮಧ್ಯ ಕರ್ನಾಟಕದಿಂದ ಉತ್ತರ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ಜನರಿಗೆ ಈ ರೈಲು ಸಹಾಯಕವಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್ (ಕೆಎಸ್ಆರ್‌ ಬೆಂಗಳೂರು) ನಿಲ್ದಾಣದಿಂದ ಹೊರಡುವ ರೈಲು ಯಶವಂತಪುರ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡದಲ್ಲಿ ನಿಲುಗಡೆ ಹೊಂದಿದೆ. ಬೆಂಗಳೂರು-ದಾವಣಗೆರೆ ನಡುವೆ ಈ ರೈಲಿನಲ್ಲಿ ಚೇರ್‌ಕಾರ್ ದರ ರೂ. 676 ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್ ದರ 1,379 ರೂ. ಆಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version