ರೈತರಿಗೆ ಬಂಪರ್ ಆಫರ್: ಡಿಕೆಶಿಯಿಂದ ಎಕರೆಗೆ 2.80 ಕೋಟಿ ಪರಿಹಾರ ಘೋಷಣೆ!

0
12

ಬಿಡದಿ ಸಮಗ್ರ ಉಪನಗರ ಯೋಜನೆ ಅಡಿಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿಹಿ ಸುದ್ದಿ ನೀಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗಿರುವ ಈ ಯೋಜನೆಯಿಂದ ಭೂಮಿ ಕಳೆದುಕೊಳ್ಳುವವರಿಗೆ ಎಕರೆಗೆ ಬರೋಬ್ಬರಿ ರೂ.2.80 ಕೋಟಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಆರಂಭದಲ್ಲಿ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ, ಶಿವಕುಮಾರ್ ಈ ನಿರ್ಧಾರದಿಂದ ಬಹುತೇಕ ರೈತರಲ್ಲಿ ಸಂತಸ ಮೂಡಿದೆ.

ಈ ಹಿಂದೆ, ರೈತರು ತಮ್ಮ ಭೂಮಿಯನ್ನು ಕಳೆದುಕೊಳ್ಳಲು ಹಿಂದೇಟು ಹಾಕಿದ್ದರು. ಆದರೆ, ಸರ್ಕಾರವು ಎಕರೆಗೆ ರೂ. 1.50 ಕೋಟಿಯಿಂದ ರೂ. 2.80 ಕೋಟಿವರೆಗೆ ಪರಿಹಾರ ನೀಡಲು ನಿರ್ಧರಿಸಿದೆ. ಅಲ್ಲದೆ, ಪರಿಹಾರ ಬೇಡ ಎನ್ನುವ ರೈತರಿಗೆ, ಅಭಿವೃದ್ಧಿಪಡಿಸಿದ ಜಮೀನನ್ನು 50:50 ಅನುಪಾತದಲ್ಲಿ ನೀಡುವ ಆಯ್ಕೆಯನ್ನೂ ನೀಡಲಾಗಿದೆ. ಇದರಿಂದ ರೈತರಿಗೆ ಯಾವುದೇ ರೀತಿಯಲ್ಲಿ ನಷ್ಟವಾಗುವುದಿಲ್ಲ ಎಂದು ಡಿಕೆಶಿ ಭರವಸೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಡಿಕೆಶಿ, ಎಚ್.ಡಿ. ಕುಮಾರಸ್ವಾಮಿ ಕೇವಲ ಎಕರೆಗೆ 8ಸಾವಿರ ಅಡಿ ಜಮೀನು ನೀಡಬೇಕು ಎಂದಿದ್ದರು. ಆದರೆ, ನಮ್ಮ ಸರ್ಕಾರವು 50% ಭೂಮಿ ನೀಡಲು ನಿರ್ಧರಿಸಿದೆ. ಇದರಿಂದ ರೈತರು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯಲಿದ್ದಾರೆ ಎಂದರು.

ಈ ಯೋಜನೆಯು ಕೇವಲ ಪರಿಹಾರಕ್ಕೆ ಸೀಮಿತವಾಗಿಲ್ಲ. ಯಾವ ಹಳ್ಳಿಯನ್ನೂ ಸ್ಥಳಾಂತರಿಸದೆ, ಪ್ರತಿಯೊಂದು ಹಳ್ಳಿಗೂ ರಿಂಗ್ ರೋಡ್ ನಿರ್ಮಿಸಿ, ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ಬಿಡದಿಯಲ್ಲಿ ಸುಸಜ್ಜಿತವಾದ ‘ಎಐ ಸಿಟಿ’ ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಇದು ಕೇವಲ ಬೆಂಗಳೂರಿನ ಬೆಳವಣಿಗೆಗೆ ಮಾತ್ರವಲ್ಲದೆ, ಇಡೀ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಈ ಯೋಜನೆಯ ಮೂಲ ರೂವಾರಿ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಎಂದು ಡಿಕೆಶಿ ನೆನಪಿಸಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಸಹಕರಿಸಿದ ಗೌಡರು, ಈಗ ಯಾಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಬಿಜೆಪಿ ಸರ್ಕಾರ 900 ಎಕರೆ ಜಮೀನನ್ನು ಕೆಐಎಡಿಬಿಗೆ ನೀಡಿದಾಗಲೂ, ಅಂದು ಅಧಿಕಾರದಲ್ಲಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಅಶೋಕ್ ಏಕೆ ರೈತರ ಭೂಮಿ ಉಳಿಸಲಿಲ್ಲ ಎಂದು ಡಿಕೆಶಿ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು.

ಅಧಿಕಾರವಿದ್ದಾಗ ಸುಮ್ಮನಿದ್ದು, ಈಗ ರಾಜಕಾರಣ ಮಾಡಲು ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಡದಿ ಸಮಗ್ರ ಉಪನಗರ ಯೋಜನೆಯು ರೈತರಿಗೆ ಉತ್ತಮ ಪರಿಹಾರ ಮತ್ತು ಅಭಿವೃದ್ಧಿಯ ಭರವಸೆ ನೀಡುತ್ತಿದೆ. ಅಲ್ಲದೆ, ‘ಎಐ ಸಿಟಿ’ ನಿರ್ಮಾಣದಿಂದ ರಾಜ್ಯದ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಗೆ ಹೊಸ ದಿಕ್ಕು ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Previous articleರಹಸ್ಯ ದಾಖಲೆಗಳ ಸಂಗ್ರಹ: ಭಾರತ ಮೂಲದ ಅಮೆರಿಕನ್ ವಿಶ್ಲೇಷಕ ಆಶ್ಲೇ ಟೆಲ್ಲಿಸ್ ಬಂಧನ
Next articleಸ್ವದೇಶಿ Mappls ಆ್ಯಪ್: ಬೆಂಗಳೂರು ದೇಶದಲ್ಲೇ ಮೊಟ್ಟಮೊದಲ ನೈಜಸಮಯದ ಸಿಗ್ನಲ್ ಕೌಂಟ್‌ಡೌನ್‌ ನಗರ

LEAVE A REPLY

Please enter your comment!
Please enter your name here