Home ನಮ್ಮ ಜಿಲ್ಲೆ ರಾಮನಗರ ರಾಮನಗರ: ಲೋಕ ಅದಾಲತ್‌ನಲ್ಲಿ ಒಂದಾದ ಜೋಡಿ

ರಾಮನಗರ: ಲೋಕ ಅದಾಲತ್‌ನಲ್ಲಿ ಒಂದಾದ ಜೋಡಿ

0

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ರಾಮನಗರ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1,80,045 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದ, ಕೋರ್ಟ್ ಮೆಟ್ಟಿಲೇರಿದ್ದ ಜೋಡಿಯೊಂದು ಒಂದಾದ ಘಟನೆಗೆ ಲೋಕ ಅದಾಲತ್ ಸಾಕ್ಷಿಯಾಯಿತು.

“ಕಾಯಂ ಲೋಕ ಅದಾಲತ್ ವಿಶೇಷ ನ್ಯಾಯಾಲಯವಾಗಿದ್ದು, ಪ್ರಕರಣಗಳ ರಾಜಿ ಸಂಧಾನ ಮೊದಲ ಆದ್ಯತೆಯಾಗಿದೆ. ಕ್ಲಿಷ್ಟಕರ ಪ್ರಕರಣಗಳನ್ನು ಇಲ್ಲಿ ತೀರ್ಮಾನಿಸಬಹುದಾಗಿದ್ದು, ಕಳೆದ ಹಲವು ವರ್ಷಗಳ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದ ಹಲವು ಪ್ರಕರಣಗಳು ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿದಿದೆ. ಈಲ್ಲೆಯ ಒಟ್ಟು 1,80,045 ಪ್ರಕರಣಗಳನ್ನು ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ.ರೇಣುಕ” ತಿಳಿಸಿದರು.

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಖುದ್ದಾಗಿ ಭಾಗವಹಿಸಿ ಪ್ರಕರಣಗಳ ವಿಲೇವಾರಿ ನಡೆಸಿ, ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಕಾನೂನು ಸಮರ ನಡೆಸುತ್ತಿರುವ ಬಡ ಮತ್ತು ಸಾಮಾನ್ಯ ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಆರಂಭವಾದ ಲೋಕ್ ಅದಾಲತ್ ಸಾಕಷ್ಟು ಯಶ ಕಂಡಿದೆ. ಜಿಲ್ಲೆಯಾದ್ಯಂತ ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ನ್ಯಾಯಾಲಯಗಳಲ್ಲಿ ವಿಚಾರಣೆಗಿದ್ದ ಪ್ರಕರಣಗಳ ಪೈಕಿ ಒಟ್ಟು ಜಿಲ್ಲೆಯಾದ್ಯಂತ 58,502 ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ 12,071 ಪ್ರಕರಣಗಳನ್ನು, ಅದೇ ರೀತಿ ಒಟ್ಟು 1,76,602 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ತೆಗೆದುಕೊಂಡಿದ್ದು, ಅದರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ 3,620 ಪ್ರಕರಣಗಳನ್ನು ಹಾಗೂ 1,76,425 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಒಟ್ಟಾರೆಯಾಗಿ 1,80,045 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ” ಎಂದರು.

ಲೋಕ ಅದಾಲತ್ ನಲ್ಲಿ ಒಂದಾದ ಜೋಡಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದ, ಕೋರ್ಟ್ ಮೆಟ್ಟಿಲೇರಿದ್ದ ಜೋಡಿಯೊಂದು ಒಂದಾದ ಘಟನೆಗೆ ಲೋಕ ಅದಾಲತ್ ಸಾಕ್ಷಿಯಾಯಿತು. ಕಳೆದ 5 ವರ್ಷದ ಹಿಂದೆ ಮದುವೆ ನಾಗವೇಣಿ ಹಾಗೂ ಸುನೀಲ್ ಕುಮಾರ್ ಎಂಬ ದಂಪತಿಗಳು ಹೊಂದಾಣಿಕೆ ಜೀವನ ಸಾಗಿಸದೆ ಭಿನ್ನಾಭಿಪ್ರಾಯದಿಂದ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಈ ಜೋಡಿಗೆ ಪರಸ್ಪರ ಮನಸ್ತಾಪ ಮರೆತು ಜೀವನ ನಡೆಸುವಂತೆ ನ್ಯಾಯಾಧೀಶರಾದ ಬಿ.ವಿ.ರೇಣುಕ ಅವರು ತಿಳಿಹೇಳಿದರು. ಪರಸ್ಪರ ಭಿನ್ನಾಭಿಪ್ರಾಯ ಮರೆತು ಒಂದಾಗಿ ಬಾಳುವೆ ಮಾಡುವುದಾಗಿ ಒಪ್ಪಿಕೊಂಡ ಜೋಡಿ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಒಂದಾದರು. ನ್ಯಾಯಾಧೀಶರು ಹಾಗೂ ವಕೀಲರ ಸಮ್ಮುಖದಲ್ಲಿ ದಂಪತಿಗಳು ಹೂವಿನ ಮಾಲೆ ಬದಲಿಸಿಕೊಂಡರು.

ಕಕ್ಷಿದಾರರು ಬಹಳ ವರ್ಷ ಅಲೆದಾಡುವ ಬದಲು ಲೋಕ್ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ತಮ್ಮ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ಹಣ ಮತ್ತು ಸಮಯ ಎರಡೂ ಉಳಿಯುವಾಗುತ್ತದೆ ಎಂಬ ಉದ್ದೇಶದಿಂದ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ. ಉಭಯ ಕಕ್ಷಿದಾರರ ಒಪ್ಪಿಗೆ ಇದ್ದಲ್ಲಿ ಮಾತ್ರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಲೋಕ್ ಅದಾಲತ್‍ನಲ್ಲಿ ತೀರ್ಮಾನವಾದಲ್ಲಿ ಪ್ರಕರಣಗಳು ಶೀಘ್ರ ಇತ್ಯರ್ಥವಾಗುತ್ತವೆ.

ನ್ಯಾಯಾಲಯದ ಶುಲ್ಕ, ವಕೀಲರ ಶುಲ್ಕ ಇರುವುದಿಲ್ಲ. ಇಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳನ್ನ ಇಲ್ಲಿ ಬಗೆಹರಿಸಬಹುದಾಗಿದೆ. ಕಕ್ಷಿದಾರರು ಈ ಅದಾಲತ್ ಪ್ರಯೋಜನ ಪಡೆದುಕೊಳ್ಳಬೇಕಿದೆ. ಸಾರ್ವಜನಿಕರು-ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿಕೊಳ್ಳುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಲೋಕ್ ಅದಾಲತ್ ಕಾರ್ಯಕ್ರಮವನ್ನ ರಾಮನಗರ, ಚನ್ನಪಟ್ಟಣ, ಮಾಗಡಿ ಕನಕಪುರ ನ್ಯಾಯಾಲಯ ಸೇರಿದಂತೆ ಒಟ್ಟು 19 ಪೀಠದಲ್ಲಿ ಹಮ್ಮಿಕೊಳ್ಳಲಾಗಿತ್ತು. ವ್ಯಾಜ್ಯಪೂರ್ವ ಹಾಗೂ ಬಾಕಿಯಿರುವಂತಹ ಪ್ರಕರಣಗಳಲ್ಲಿ ಇತ್ಯರ್ಥವಾಗುವಂತಹ ಪ್ರಕರಣಗಳನ್ನ ಕೈಗೆತ್ತಿಕೊಂಡು ವಿಲೇವಾರಿ ಮಾಡಲಾಗಿದೆ. ಸಾರ್ವಜನಿಕರು ಈ ಲೋಕ್ ಅದಾಲತ್ ಪ್ರಯೋಜನ ಪಡೆದುಕೊಳ್ಳಬೇಕೆಂದು ಇದೇ ವೇಳೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕ ಅವರು ಕರೆ ನೀಡಿದರು. ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಹಾಗೂ ನ್ಯಾಯಾಧೀಶೆ ಪಿ.ಆರ್.ಸವಿತ ಅವರು ಉಪಸ್ಥಿತರಿದ್ದರು.

ಇತ್ಯರ್ಥಗೊಂಡ ಪ್ರಕರಣಗಳು

  • ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು ಒಟ್ಟು 17, ನೆಗೋಷಿಯಲ್ ಇನ್ಸ್ಟ್ರುಮೆಂಟ್ ಕಾಯಿದೆ ಯ 137 ಪ್ರಕರಣಗಳು, ಸಾಲ ವಸೂಲಾತಿಯ 8 ಪ್ರಕರಣಗಳು, ಮೋಟಾರು ವಾಹನ ಅಪಘಾತದ 86 ಪ್ರಕರಣಗಳು, ಕಾರ್ಮಿಕ ವಿವಾದದ 34 ಪ್ರಕರಣಗಳು, ಗಣಿ ಮತ್ತು ಭೂವಿಜ್ಞಾನದ 5 ಪ್ರಕರಣಗಳು, ಎಲೆಕ್ಟ್ರಿಕ್ಸಿಟಿ ಕಾಯಿದೆಯ 26 ಪ್ರಕರಣಗಳು, 2ವೈವಾಹಿಕ ಪ್ರಕರಣಗಳು, ಒಂದು ಭೂಸ್ವಾಧೀನ ಪ್ರಕರಣ, ಆಸ್ತಿ ವಿಭಾಗದ 61 ಪ್ರಕರಣಗಳು.
  • ನಿರ್ದಿಷ್ಟ (ಸ್ಪೆಸಿಫಿಕ್ ಪರ್ಫಾರ್ಮೆನ್ಸ್) 36 ಪ್ರಕರಣಗಳು, ಇತರೆ ಜಾರಿ ಪ್ರಕರಣಗಳು 40, ಅಚಿತಿಮ ಡಿಕ್ರಿ ಕಾರ್ಯಾಚರಣೆಯ ಮೂರು ಪ್ರಕರಣಗಳು, ಎಲ್‍ಎಸಿ ಜಾರಿಯ ಐದು ಪ್ರಕರಣಗಳು,ಎಂವಿಸಿ ಎಕ್ಸಿಕ್ಯೂಷನ್ ನ 11 ಪ್ರಕರಣಗಳು, ಹಕ್ಕು ಘೋಷಣೆ ಶಾಶ್ವತ ನಿಭರ್ಂಧಕಾಜ್ಞೆ ಹಾಗೂ ಇತರೆ 49 ಪ್ರಕರಣಗಳು, ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ 43 ಪ್ರಕರಣಗಳು, ಲಘು ವ್ಯಾಜ್ಯದ 2,939 ಪ್ರಕರಣಗಳು, 99 ಇತರೆ ಕ್ರಿಮಿನಲ್ ಪ್ರಕರಣಗಳು, 9 ಬ್ಯಾಂಕ್ ಸ್ಯೂಟ್ಸ್, 125 ಸಿಆರ್ ಪಿಸಿಯ 9 ಪ್ರಕರಣಗಳು, 1 ಡಿವಿ ಆಕ್ಟ್, ಪ್ರಿಲಿಟಿಗೇಷನ್ 1,76,425 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.

NO COMMENTS

LEAVE A REPLY

Please enter your comment!
Please enter your name here

Exit mobile version