Home ನಮ್ಮ ಜಿಲ್ಲೆ ಚಾಮರಾಜನಗರ ಗೋಬಿ ಮಂಚೂರಿ ತಿಂದು ಬಾಲಕನ ಹೈಡ್ರಾಮಾ, ಪೊಲೀಸರು ಸುಸ್ತು!

ಗೋಬಿ ಮಂಚೂರಿ ತಿಂದು ಬಾಲಕನ ಹೈಡ್ರಾಮಾ, ಪೊಲೀಸರು ಸುಸ್ತು!

0

ಗೋಬಿ ಮಂಚೂರಿ ತಿಂದು ಬಾಲಕ ಹೈಡ್ರಾಮಾ ಮಾಡಿ ಸಿಕ್ಕಿಬಿದ್ದ. ಆದರೆ ಮಗನ ಮಾತು ನಂಬಿ ಪೊಲೀಸ್ ಠಾಣೆಗೆ ದೂರು ನೀಡಿದ ಬಾಲಕನ ತಂದೆ ಮತ್ತು ಪೊಲೀಸರು ಸುಸ್ತಾಗಿದ್ದಾರೆ.

ತಾನು ಗೋಬಿ, ಐಸ್‍ಕ್ರೀಂ ತಿನ್ನುತ್ತಿದ್ದುದರ ಫೋಟೋವನ್ನು ನೆರೆಹೊರೆಯವರು ತನ್ನ ಮನೆಗೆ ಕಳುಹಿಸಿದ್ದರಿಂದ ಭಯಭೀತನಾದ ಬಾಲಕನೊಬ್ಬ, ತನ್ನನ್ನು ಕೆಲವರು ಅಪಹರಿಸಿ ನಂತರ ಬಿಟ್ಟುಹೋದರು. ಈ ವೇಳೆ ಅವರು ನೀಡಿದ್ದ ಹಣದಿಂದ ಗೋಬಿ, ಐಸ್‍ಕ್ರೀಂ ತಿಂದೆ ಎಂದು ಕಥೆ ಕಟ್ಟಿ ಎಲ್ಲರನ್ನೂ ಆತಂಕಕ್ಕೆ ದೂಡಿದ ಘಟನೆ ನಡೆದಿದೆ.

ಬಾಲಕನ ಮಾತನ್ನು ನಂಬಿದ ಪೋಷಕರು ನೀಡಿದ ದೂರಿನ ಮೇರೆಗೆ ಇಲ್ಲಿನ ಠಾಣಾ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ಪ್ರಶ್ನಿಸಿದಾಗ ಆತ ತಾನು ಹೇಳಿದ್ದು ಸುಳ್ಳೆಂದು ಬಾಯ್ಬಿಟ್ಟ. ಇದರಿಂದ ಎಲ್ಲರೂ ಕೊಂಚ ನಿರಾಳವಾಗುವಂತಾಯಿತು.

ಘಟನೆಯ ವಿವರ: ಚಾಮರಾಜನಗರದ ನಗರದ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ಬಾಲಕನೊಬ್ಬನೇ ತನಗೆ ಮನೆಯವರು ಗೋಬಿ, ಐಸ್‍ಕ್ರೀಂ ತಿನ್ನಬಾರದೆಂದು ಹೇಳಿದ್ದ ಹಿನ್ನೆಲೆಯಲ್ಲಿ ಎಲ್ಲಿ ಸಿಕ್ಕಿ ಬೀಳುವೆನೋ ಎಂಬ ಹೆದರಿಕೆಯಿಂದ, ಕೆಲವರು ತನ್ನನ್ನು ಕಾರಿನಲ್ಲಿ ಅಪಹರಿಸಿ ದೂರದ ಸ್ಥಳಕ್ಕೆ ಕೊಂಡೊಯ್ದು ಬಿಟ್ಟರು.

ಈ ವೇಳೆ ಅವರು ನೀಡಿದ 50 ರೂ., ಹಣದಿಂದ ಗೋಬಿ, ಐಸ್‍ಕ್ರೀಂ ತಿನ್ನುತ್ತಿದ್ದೆ ಎಂದು ಕಥೆ ಕಟ್ಟಿದ್ದಾನೆ. ಮಗನ ಮಾತನ್ನು ನಂಬಿದ ಪೋಷಕರು ಆತಂಕದಿಂದ ಠಾಣೆಗೆ ದೂರು ನೀಡಿದ್ದರು. ಇದರ ಮೇರೆಗೆ ಕಾರ್ಯ ಪ್ರವೃತ್ತರಾದ ಇಲ್ಲಿನ ಪೊಲೀಸರು ಯಾವುದಾದರೂ ಸಿಸಿಟಿವಿ ದೃಶ್ಯಾವಳಿಯಲ್ಲಿ ಅಪಹರಣಕಾರರ ದೃಶ್ಯಗಳು ಸೆರೆಯಾಗಿವೆಯೇ? ಎಂಬುದನ್ನು ಕೂಲಂಕಶವಾಗಿ ಪರಿಶೀಲಿಸಿದರು.

ಆಗ ಅಂತಹ ಯಾವುದೇ ದೃಶ್ಯ ಇಲ್ಲದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಪ್ರಶ್ನಿಸಿದಾಗ ಬಾಲಕ ವಾಸ್ತವ ಸಂಗತಿ ಬಾಯ್ಬಿಟ್ಟಿದ್ದಾನೆ. ಆದರೆ ಬಾಲಕನ ಅಪಹರಣ ಪ್ರಕರಣ ಕೆಲವು ಕಾಲ ಆತಂಕಕ್ಕೆ ಕಾರಣವಾಗಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version