Home ನಮ್ಮ ಜಿಲ್ಲೆ ರಾಯಚೂರು ನಿರಂತರ ಮಳೆ: ಮುದಗಲ್ ಕೋಟೆ ಬಾಗಿಲು ಕುಸಿತ

ನಿರಂತರ ಮಳೆ: ಮುದಗಲ್ ಕೋಟೆ ಬಾಗಿಲು ಕುಸಿತ

0

ಮುದಗಲ್ (ರಾಯಚೂರು ಜಿಲ್ಲೆ): ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದ ಐತಿಹಾಸಿಕ ಕೋಟೆಯ ಬಾಗಿಲು ಮಳೆ ಪರಿಣಾಮವಾಗಿ ಕುಸಿದಿರುವ ಘಟನೆ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಕೋಟೆಯ ಮುಳ್ಳು ಅಗಸಿಯ ಬಾಗಿಲು ನೀರಿನ ಒತ್ತಡ ತಾಳಲಾರದೆ ಜಾರಿಬಿದ್ದು ಕುಸಿದಿದೆ.

ಸ್ಥಳೀಯರ ಪ್ರಕಾರ, ಹಲವು ಶತಮಾನಗಳ ಹಿಂದೆ ನಿರ್ಮಿಸಲಾದ ಈ ಕೋಟೆ ಇತಿಹಾಸದಲ್ಲಿ ಮಹತ್ವಪೂರ್ಣ ಸ್ಥಾನ ಹೊಂದಿದ್ದು, 14 ನೇ ಶತಮಾನದಲ್ಲಿ ಬಹಮನಿ ಸುಲ್ತಾನರಿಂದ ನಿರ್ಮಿಸಲ್ಪಟ್ಟವು. ಕಾಲಾನಂತರದಲ್ಲಿ, ಇದು ವಿಜಯನಗರ ಸಾಮ್ರಾಜ್ಯ ಮತ್ತು ನಂತರ ಬಿಜಾಪುರದ ಆದಿಲ್ ಶಾಹಿ ರಾಜವಂಶದ ಕೈಸೇರಿದ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾದ ಕಲ್ಲಿನ ಕೋಟೆಯಾಗಿ ಗುರುತಿಸಿಕೊಂಡಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಮುದಗಲ್ ಕೋಟೆ ಭೇಟಿ ನೀಡುತ್ತಾರೆ. ಆದರೆ ಸರಿಯಾದ ಸಂರಕ್ಷಣೆ ಕೊರತೆಯಿಂದ ಕೋಟೆಯ ಬಹುಭಾಗ ಹಾಳಾಗುತ್ತಿದೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಕೋಟೆಯ ಬಾಗಿಲು ಕುಸಿದ ಪರಿಣಾಮ ಸ್ಥಳೀಯರಿಗೆ ಆಘಾತ ಉಂಟಾಗಿದೆ. “ಕೋಟೆಯ ಅಸ್ತಿತ್ವವೇ ಅಪಾಯದಲ್ಲಿದೆ, ಸರ್ಕಾರ ತಕ್ಷಣ ಪುರಾತತ್ವ ಇಲಾಖೆಯ ಮೂಲಕ ದುರಸ್ತಿ ಕಾರ್ಯ ಕೈಗೊಳ್ಳಬೇಕು” ಎಂದು ಹಿರಿಯರು ಆಗ್ರಹಿಸಿದ್ದಾರೆ. ಮಳೆಯ ಕಾರಣದಿಂದ ಕೋಟೆಯ ಗೋಡೆಗಳಲ್ಲಿಯೂ ಬಿರುಕು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ. ಇದರಿಂದಾಗಿ ಪಟ್ಟಣದ ಜನರಲ್ಲಿ ಆತಂಕ ಮೂಡಿದೆ.

ಈ ಬಗ್ಗೆ ಪುರಾತತ್ವ ಇಲಾಖೆ ಹಾಗೂ ತಹಶೀಲ್ದಾರರಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮುದಗಲ್ ಕೋಟೆಯಂತಹ ಐತಿಹಾಸಿಕ ಸ್ಮಾರಕಗಳು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಸಂಕೇತವಾಗಿರುವುದರಿಂದ ತುರ್ತು ಸಂರಕ್ಷಣಾ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version