ರಾಯಚೂರು: ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪ ಅವರಿಂದ ಮೂರನೇ ದಿನವಾದ ಶನಿವಾರವೂ ಅನಿರೀಕ್ಷಿತ ಭೇಟಿಯ ಮಿಂಚಿನ ಕಾರ್ಯಾಚರಣೆ ಮುಂದುವರೆಸಿದರು. ನಗರದ ಹೊರ ವಲಯದ ಮಂತ್ರಾಲಯ ರಸ್ತೆಗೆ ಹೊರಟು ಮಿಟ್ಟಿ ಮಲ್ಕಾಪುರದ
ಶ್ರೀ ವೆಂಕಟೇಶ್ವರ ಮಿನಿರಲ್ಸ್ ಸ್ಟೋನ್ ಕ್ರಷರ್ (ಎಂ ಸ್ಯಾಂಡ್ ) ಪ್ರವೇಶ ಮಾಡಿದರು. ಮೊದಲಿಗೆ ವೆಂಕಟೇಶ್ವರ ಮಿನಿರಲ್ಸ್ ಸ್ಟೋನ್ ಕ್ರಷರ್ ಪ್ರದೇಶದಲ್ಲಿ ಸಂಚರಿಸಿ ಗಣಿಗಾರಿಕೆ ನಂತರ ಹಾಗೆಯೇ ಬಿಟ್ಟ ಕಂದಕದ ವೀಕ್ಷಣೆ ನಡೆಸಿದರು.
ಗಣಿಗಾರಿಕೆ ಪ್ರದೇಶದಲ್ಲಿ ಸಮತಟ್ಟು ಯಾಕೆ ಮಾಡಿಲ್ಲ? ಗಿಡ ಯಾಕೆ ನೆಟ್ಟಿಲ್ಲ? ಇದನ್ನು ನೀವು ನೋಡಿಲ್ವಾ? ಎಂದು ಪ್ರಶ್ನಿಸಿದ ಅವರು ಲೀಸ್ ಪಡೆದ ಕಂಪನಿಯವರು ಕಾನೂನು ಉಲ್ಲಂಘನೆ ಮಾಡಿದಾರೆ ಅಂತ ಗೊತ್ತಾದಾಗಲೂ ನೀವು ನಿದ್ದೆ ಮಾಡತಿದೀರಾ ಎಂದು ಗಣಿ ಇಲಾಖೆಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಬಳಿಕ ಲೋಕಾಯುಕ್ತರು, ಓಂ ಶಕ್ತಿ ಕಂಪನಿಯ ಮತ್ತೊಂದು ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ತೆರಳಿ ಗಣಿಪೀಡಿತ ಪ್ರದೇಶದಲ್ಲಿ ಅಂದಾಜು 100 ಅಡಿ ಆಳವಾಗಿ ಕೊರೆದ ಕಂದಕದ ವೀಕ್ಷಣೆ ನಡೆಸಿದರು. ಅನಧೀಕೃತ ಗಣಿಗಾರಿಕೆಗೆ ಅವಕಾಶ ನೀಡಬಾರದು. ಬಫರ್ ಝೋನ್ ಉಲ್ಲಂಘಿಸಿ ಗಣಿಗಾರಿಕೆ ನಡೆಸಿದ ಬಗ್ಗೆ ಕಂಪನಿಯವರಿಗೆ ನೊಟೀಸ್ ಜಾರಿ ಮಾಡಬೇಕು.
ಕಾನೂನು ಉಲ್ಲಂಘಿಸಿ ಗಣಿಗಾರಿಕೆ ನಡೆಸಿದಔರಿಗೆ ದಂಡ ವಿಧಿಸಬೇಕು ಎಂದು ಗಣಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಉಪ ಲೋಕಾಯುಕ್ತರು, ಜಿಲ್ಲೆಯಲ್ಲಿ ಎಷ್ಟು ಕ್ವಾರಿಗಳಿವೆ ಎಂದು ಕೇಳಿದರು. ರಾಯಚೂರ ಜಿಲ್ಲೆಯಲ್ಲಿ 133 ಕ್ವಾರಿಗಳಿವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು. ಜಿಲ್ಲೆಯ ಯಾವುದೇ ಕಡೆಗಳಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಯಬಾರದುವೆಂದು ಎಚ್ಚರಿಕೆ ನೀಡಿದರು.