ರಾಯಚೂರು: ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕೆ.ಇರಬಗೇರಾ ಗ್ರಾಮದಲ್ಲಿ ರವಿವಾರ ಸಂಜೆ ಹೃದಯ ಕಲಕುವ ಘಟನೆಯೊಂದು ನಡೆದಿದೆ. ಒಂದೇ ಕುಟುಂಬಕ್ಕೆ ಸೇರಿದ ಮೂವರು ಯುವತಿಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ದುರಂತಮಯವಾಗಿ ಒಬ್ಬಳು ಯುವತಿ ಸಾವನ್ನಪ್ಪಿದ್ದಾಳೆ. ಉಳಿದ ಇಬ್ಬರು ಯುವತಿಯರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ರೇಣುಕಾ (18) ಎಂಬ ಯುವತಿ ವಿಷ ಸೇವಿಸಿ ಬಾವಿಗೆ ಹಾರಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇನ್ನು ಸುನಿತಾ ಮತ್ತು ತಿಮ್ಮವ್ವ ಎಂಬ ಯುವತಿಯರು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಿಮ್ಮವ್ವಳ ಸ್ಥಿತಿ ಶೋಚನೀಯವಾಗಿದ್ದು, ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಈ ಘಟನೆಗೆ ಪ್ರೇಮ ವಿಚಾರವೇ ಕಾರಣ ಎನ್ನಲಾಗಿದೆ. ಮೃತಪಟ್ಟ ರೇಣುಕಾಳಿಗೆ ಈಗಾಗಲೇ ನಿಶ್ಚಿತಾರ್ಥವಾಗಿದ್ದು, ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಲು ಸಾಧ್ಯವಾಗದ ಕಾರಣ ಮನನೊಂದು ಈ ಕೃತ್ಯಕ್ಕೆ ಮುಂದಾಗಿದ್ದಾಳೆ. ರೇಣುಕಾಳ ಇದೇ ಪರಿಸ್ಥಿತಿ ತಮಗೂ ಬರಬಹುದು ಎಂದು ಭಾವಿಸಿ, ಆತಂಕಗೊಂಡ ಉಳಿದ ಇಬ್ಬರು ಯುವತಿಯರು ಸಹ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.