Home ನಮ್ಮ ಜಿಲ್ಲೆ Namma Metro: ಪ್ರಯಾಣಿಕರಿಗೆ ಗುಡ್‌ನ್ಯೂಸ್: ‌ಆ. 10 ರಂದು ಹಳದಿ ಮಾರ್ಗ ಉದ್ಘಾಟಿಸಲಿದ್ದಾರೆ ಮೋದಿ

Namma Metro: ಪ್ರಯಾಣಿಕರಿಗೆ ಗುಡ್‌ನ್ಯೂಸ್: ‌ಆ. 10 ರಂದು ಹಳದಿ ಮಾರ್ಗ ಉದ್ಘಾಟಿಸಲಿದ್ದಾರೆ ಮೋದಿ

0

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಸಿಹಿ ಸುದ್ದಿ ದೊರೆತಿದೆ. ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್‌ 10 ರಂದು ಉದ್ಘಾಟನೆ ಮಾಡಲಿದ್ದಾರೆ. ಇದರೊಂದಿಗೆ ನಮ್ಮ ಮೆಟ್ರೋ ಹಂತ-3 ವಿಸ್ತರಣೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್, “ನಮ್ಮ ಮೆಟ್ರೊ ಹಳದಿ ಮಾರ್ಗವು 16 ನಿಲ್ದಾಣಗಳನ್ನು ಒಳಗೊಂಡಿದ್ದು, 5,056.99 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇದೇ ವೇಳೆ 15,611 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬೆಂಗಳೂರು ಹಂತ-3 ರ 44.65 ಕಿ.ಮೀ. ಉದ್ದದ ರೈಲು ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ” ಎಂದವರು ಮಾಹಿತಿ ನೀಡಿದ್ದಾರೆ.

16 ನಿಲ್ದಾಣಗಳ ನಮ್ಮ ಮೆಟ್ರೊ ಹಳದಿ ಮಾರ್ಗದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರತಿದಿನ ಈ ಮಾರ್ಗದಲ್ಲಿ ಸುಮಾರು ಮೂರು ಲಕ್ಷ ಜನ ಪ್ರಯಾಣಿಕರು ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಬೆಂಗಳೂರಿನ ಪ್ರಮುಖ ವಸತಿ ಮತ್ತು ಕೈಗಾರಿಕಾ ಕಾರಿಡಾರ್‌ಗಳು ಮತ್ತು ಎಲೆಕ್ಟ್ರಾನಿಕ್ ಸಿಟಿಯ ಮಧ್ಯೆ ಇದು ಪ್ರಮುಖ ಸಂಪರ್ಕ ಕಲ್ಪಿಸುತ್ತದೆ.

ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ರೈಲುಗಳು 20 ರಿಂದ 30 ನಿಮಿಷಗಳ ಅಂತರದಲ್ಲಿ ಸಂಚರಿಸುವ ಸಾಧ್ಯತೆ ಇದೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ ಸುಮಾರು 19.5 ಕಿ.ಮೀ ಹಳದಿ ಮಾರ್ಗ ಸಂಚಾರಕ್ಕೆ ಸಿದ್ಧವಾಗಿದೆ.

ನಮ್ಮ ಮೆಟ್ರೋ ಹಂತ 3 ಅನ್ನು ಆರೆಂಜ್ ಲೈನ್ ಎಂದೂ ಹೇಳಲಾಗುತ್ತದೆ. 44.65 ಕಿ.ಮೀ. ಉದ್ದದ ರೈಲು ಮಾರ್ಗ ಇದಾಗಿದ್ದು, 2029 ರ ಅಂತ್ಯದ ವೇಳೆಗೆ ಯೋಜನೆ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದಲ್ಲಿ ಪ್ರತಿದಿನ ಸುಮಾರು 8 ಲಕ್ಷ ಜನರು ಸಂಚಾರವನ್ನು ನಡೆಸುತ್ತಾರೆ. ಹಳದಿ ಮಾರ್ಗದಲ್ಲಿ ಸಂಚಾರ ಆರಂಭವಾದರೆ ಪ್ರತಿದಿನ 3 ಲಕ್ಷ ಜನರು ಸಂಚಾರವನ್ನು ನಡೆಸಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ. ಈ ಮಾರ್ಗ ಟೆಕ್ಕಿಗಳಿಗೆ ಅನುಕೂಲವಾಗಿದ್ದು, ಅವರು ಖಾಸಗಿ ವಾಹನ ಬಿಟ್ಟು ಮೆಟ್ರೋ ಹತ್ತಿದರೆ ಎಲೆಕ್ಟ್ರಾನಿಕ್ ಸಿಟಿ ಕಡೆ ಸಂಚಾದ ದಟ್ಟಣೆಯೂ ಕಡಿಮೆಯಾಗಲಿದೆ.

ಬಿಎಂಆರ್‌ಸಿಎಲ್ ಹಳದಿ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಓಡಿಸಲು ನಿರ್ಧರಿಸಿದೆ. ಆದ್ದರಿಂದ ಸಿಗ್ನಲ್ ವ್ಯವಸ್ಥೆ, ಹಳಿಗಳನ್ನು ಪರಿಶೀಲಿಸಿ ಇಂಡಿಪೆಂಡೆಂಟ್‌ ಸೇಫ್ಟಿ ಅಸೆಸ್ಸರ್‌ (ಐಎಸ್‌ಎ) ಪ್ರಮಾಣ ಪತ್ರ ಪಡೆಯಬೇಕಿತ್ತು. ಇನ್ನು ಈ ಮಾರ್ಗದ ಕುರಿತಂತೆ ಸುರಕ್ಷತಾ ತಪಾಸಣೆ ವರದಿಯನ್ನು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಾದ ಎ.ಎಂ. ಚೌಧರಿ ಸಲ್ಲಿಸಿದ್ದಾರೆ. ವರದಿಯಲ್ಲಿ ಸಣ್ಣಪುಟ್ಟ ಷರತ್ತುಗಳನ್ನು ವಿಧಿಸಲಾಗಿದ್ದು, ಕೆಲ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುವುದಾಗಿ ಬಿಎಂಆರ್‌ಸಿಎಲ್‌ ಹೇಳಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version