ಬೆಂಗಳೂರಿನ ಹೆಗ್ಗುರುತು ಮತ್ತು ಲಕ್ಷಾಂತರ ಪ್ರಯಾಣಿಕರ ಜೀವನಾಡಿಯಾಗಿರುವ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಶೀಘ್ರದಲ್ಲೇ ತನ್ನ ಹಳೆಯ ಚಹರೆಯನ್ನು ಕಳಚಿಕೊಂಡು, ಅತ್ಯಾಧುನಿಕ ಸ್ಮಾರ್ಟ್ ಟರ್ಮಿನಲ್ ಆಗಿ ಬದಲಾಗಲಿದೆ.
ಸುಮಾರು 5 ದಶಕಗಳ ಇತಿಹಾಸವಿರುವ ಈ ಬಸ್ ನಿಲ್ದಾಣವನ್ನು ಬರೋಬ್ಬರಿ 1,500 ಕೋಟಿ ರೂಪಾಯಿ ವೆಚ್ಚದಲ್ಲಿ ಮರುನಿರ್ಮಾಣ ಮಾಡಲು ಕೆಎಸ್‌ಆರ್‌ಟಿಸಿ (KSRTC) ಮಹತ್ವದ ಯೋಜನೆ ರೂಪಿಸಿದೆ.
32 ಎಕರೆಯಲ್ಲಿ ತಲೆ ಎತ್ತಲಿದೆ ‘ವಾಣಿಜ್ಯ ಹಬ್’: ಪ್ರಸ್ತುತ ಇರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣದ ಕಟ್ಟಡಗಳನ್ನು ಸಂಪೂರ್ಣವಾಗಿ ಕೆಡವಿ, ಲಭ್ಯವಿರುವ 32 ಎಕರೆ ವಿಶಾಲ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ.
ಇದು ಕೇವಲ ಬಸ್ ನಿಲ್ದಾಣವಾಗಿ ಉಳಿಯದೆ, ಬೃಹತ್ ವಾಣಿಜ್ಯ ಸಂಕೀರ್ಣಗಳು, ಶಾಪಿಂಗ್ ಮಾಲ್‌ಗಳು ಮತ್ತು ಮನರಂಜನಾ ತಾಣಗಳನ್ನು ಒಳಗೊಂಡ ‘ಕಮರ್ಷಿಯಲ್ ಹಬ್’ ಆಗಿ ರೂಪುಗೊಳ್ಳಲಿದೆ. ಈ ಬೃಹತ್ ಯೋಜನೆಗಾಗಿ ಗುರಗಾಂವ್ ಮೂಲದ ‘ರಿಸರ್ಜೆಂಟ್ ಇಂಡಿಯಾ ಲಿಮಿಟೆಡ್’ ಎಂಬ ಸಂಸ್ಥೆಯನ್ನು ಸಲಹೆಗಾರರನ್ನಾಗಿ ನೇಮಿಸಲಾಗಿದ್ದು, ಜನವರಿ ಅಂತ್ಯದೊಳಗೆ ವಿಸ್ತೃತ ವರದಿ ಸಲ್ಲಿಸುವ ನಿರೀಕ್ಷೆಯಿದೆ.
ಎಲ್ಲಾ ಸಾರಿಗೆಗಳಿಗೂ ಒಂದೇ ಕೊಂಡಿ!: ಈ ಯೋಜನೆಯ ಅತ್ಯಂತ ಆಕರ್ಷಕ ಸಂಗತಿಯೆಂದರೆ ‘ಸಾರಿಗೆ ಏಕೀಕರಣ’. ಹೊಸ ವಿನ್ಯಾಸದ ಪ್ರಕಾರ, ಮೆಜೆಸ್ಟಿಕ್ ಬಸ್ ನಿಲ್ದಾಣವು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ ಮತ್ತು ಪ್ರಸ್ತಾಪಿತ ಉಪನಗರ ರೈಲು ನಿಲ್ದಾಣಗಳೊಂದಿಗೆ ನೇರ ಸಂಪರ್ಕ ಹೊಂದಲಿದೆ.
ಪ್ರಯಾಣಿಕರು ಬಸ್ ಇಳಿದು ರೈಲು ಅಥವಾ ಮೆಟ್ರೋ ಹತ್ತಲು ರಸ್ತೆ ದಾಟುವ ಅಥವಾ ಗೊಂದಲಕ್ಕೀಡಾಗುವ ಅಗತ್ಯವಿರುವುದಿಲ್ಲ. ಸ್ಕೈವಾಕ್ ಅಥವಾ ಸುರಂಗ ಮಾರ್ಗಗಳ ಮೂಲಕ ಸುಲಭವಾಗಿ ಎಲ್ಲಾ ಸಾರಿಗೆ ವ್ಯವಸ್ಥೆಗಳನ್ನು ತಲುಪುವಂತೆ ವಿನ್ಯಾಸ ರೂಪಿಸಲಾಗುತ್ತಿದೆ.
ಸರಕಾರಕ್ಕಿಲ್ಲ ಆರ್ಥಿಕ ಹೊರೆ: ವಿಶೇಷವೆಂದರೆ, ಈ ಯೋಜನೆಗೆ ಕೆಎಸ್‌ಆರ್‌ಟಿಸಿ ಅಥವಾ ರಾಜ್ಯ ಸರ್ಕಾರ ಹಣ ಹೂಡಿಕೆ ಮಾಡುತ್ತಿಲ್ಲ. ಬದಲಾಗಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ.
ಖಾಸಗಿ ಕಂಪನಿಗಳೇ ಬಂಡವಾಳ ಹೂಡಿ, ನಿಲ್ದಾಣವನ್ನು ಅಭಿವೃದ್ಧಿಪಡಿಸಿ, ವಾಣಿಜ್ಯ ಮಳಿಗೆಗಳಿಂದ ಬರುವ ಆದಾಯದಲ್ಲಿ ಪಾಲು ಪಡೆಯಲಿವೆ. ಇದರಿಂದ ನಿಗಮಕ್ಕೆ ಆರ್ಥಿಕ ಹೊರೆಯಾಗದಂತೆ ಹೈಟೆಕ್ ನಿಲ್ದಾಣ ಸಿದ್ಧವಾಗಲಿದೆ.
ಇತಿಹಾಸ ಮತ್ತು ಭವಿಷ್ಯ: 1969ರಲ್ಲಿ ಧರ್ಮಾಂಬುಧಿ ಕೆರೆಯ ಅಂಗಳದಲ್ಲಿ ನಿರ್ಮಾಣವಾಗಿದ್ದ ಈ ನಿಲ್ದಾಣ, ಇಂದು ಪ್ರತಿನಿತ್ಯ ಸುಮಾರು 80 ಸಾವಿರ ಕೆಎಸ್‌ಆರ್‌ಟಿಸಿ ಪ್ರಯಾಣಿಕರು ಹಾಗೂ 5 ಲಕ್ಷಕ್ಕೂ ಹೆಚ್ಚು ಬಿಎಂಟಿಸಿ ಪ್ರಯಾಣಿಕರನ್ನು ನಿಭಾಯಿಸುತ್ತಿದೆ.
ಹೆಚ್ಚುತ್ತಿರುವ ಜನಸಂದಣಿಗೆ ಈಗಿನ ವ್ಯವಸ್ಥೆ ಸಾಲುತ್ತಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹಂತ-ಹಂತವಾಗಿ ಕಾಮಗಾರಿ ನಡೆಸಿ, ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದ ಸಾರಿಗೆ ಕೇಂದ್ರವನ್ನು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.
