ಬೆಳಗಾವಿ: ಯಕ್ಸಂಬಾ ಘಟ್ಟ ಪ್ರದೇಶದಲ್ಲಿ ಸುರಿಯತ್ತಿರುವ ಮಳೆಯಿಂದಾಗಿ ಮಹಾರಾಷ್ಟ್ರದ ವಿವಿಧ ಜಲಾಶಯಗಳು ಭರ್ತಿ ಹಂತಕ್ಕೆ ಬಂದಿದ್ದು ಜಲಾಶಯಗಳಿಂದ ನದಿಗಳಿಗೆ ಹೆಚ್ಚುವರಿ ನೀರು ಹರಿ ಬಿಡಲಾಗುತ್ತಿದೆ. ಇದರಿಂದಾಗಿ ರಾಜ್ಯದ ಗಡಿ ಭಾಗದಲ್ಲಿ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ.
ಕೃಷ್ಣಾ, ದೂಧಗಂಗಾ ನದಿ ಸೇರಿದಂತೆ ಉಪ ನದಿಗಳ ನೀರಿನ ಮಟ್ಟ ಗುರುವಾರ ಮತ್ತೆ ಎರಡು ಅಡಿಯಷ್ಟು ಏರಿಕೆಯಾಗಿದ್ದರಿಂದ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಕೃಷ್ಣಾ ನದಿ ತೀರದ ನರಸಿಂಹವಾಡಿ ಮತ್ತು ಕಲ್ಲೋಳ ಗ್ರಾಮದ ದತ್ತ ದೇವಸ್ಥಾನಗಳು ಮುಳುಗಡೆಯ ಹಂತ ತಲುಪಿವೆ.
ಸುಳಕೂಡ ಬ್ಯಾರೇಜ್ ಮುಖಾಂತರ 15,136 ಮತ್ತು ರಾಜಾಪುರ ಬ್ಯಾರೇಜ್ ಮುಖಾಂತರ 72,833 ಕ್ಯೂಸೆಕ್ ಹೀಗೆ ಒಟ್ಟು 87,969 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದ್ದು ನಿನ್ನೆಗಿಂತ 6,333 ಕ್ಯೂಸೆಕ್ ನೀರು ಹೆಚ್ಚಿಗೆ ಹರಿದು ಬರುತ್ತಿದೆ. ನದಿಗಳ ನೀರಿನಮಟ್ಟ ಇಂದು ಮತ್ತೆ ಏರಿಕೆಯಾಗಿದ್ದು ತಗ್ಗು ಪ್ರದೇಶದಲ್ಲಿ ನೀರು ನುಗ್ಗುತ್ತಿದೆ.
ವೇದಗಂಗಾ ನದಿಯ ಭೋಜವಾಡಿ – ಶಿವಾಪುರವಾಡಿ, ಬಾರವಾಡ – ಕುನ್ನೂರ, ದೂಧಗಂಗಾ ನದಿಯ ಕಾರದಗಾ – ಭೋಜ, ಮಲಿಕವಾಡ – ದತವಾಡ, ಕೃಷ್ಣಾ ನದಿಯ ಕಲ್ಲೋಳ – ಯಡೂರ, ಮಾಂಜರಿ – ಸವದತ್ತಿ ಬ್ಯಾರೇಜ್ ಹೀಗೆ ಒಟ್ಟು 6 ಬ್ಯಾರೇಜ್ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಜತ್ರಾಟ – ಭಿವಸಿ, ಅಕ್ಕೋಳ – ಸಿದ್ನಾಳ ಬ್ಯಾರೇಜ್‌ಗಳು ಜಲಾವೃತ ಹಂತ ತಲುಪಿವೆ.
ಯಕ್ಸಂಬಾ – ದಾನವಾಡ, ಬೇಡಕಿಹಾಳ – ಬೋರಗಾಂವ, ಸದಲಗಾ – ಬೋರಗಾಂವ, ಸದಲಗಾ – ದತ್ತವಾಡ ಮತ್ತು ಯಮಗರ್ಣಿ – ಸೌಂದಲಗಾ ಸೇತುವೆಯ ಮುಖಾಂತರ ಸಂಚಾರ ಸುಗಮವಾಗಿದೆ. ಆದರೆ, ಇನ್ನೊಂದಡೆ ಮಹಾರಾಷ್ಟ್ರದ ಗಡಿಭಾಗದ ವಿವಿಧಡೆ ಕಲಸಕ್ಕೆ ಹೋಗುವ ಕಾರ್ಮಿಕರಿಗೆ ಸುತ್ತುಬಳಸಿ ಪ್ರಯಾಣ ಮಾಡುವ ಪ್ರಸಂಗ ಬಂದೊದಗಿದೆ.