ತಲಕಾಡು: ರೈತರ ಬದುಕಿಗೆ ಆಸರೆಯಾದ ಮಾಧವಮಂತ್ರಿ ಅಣೆಕಟ್ಟು

0
50

ಟಿ.ಎಂ. ವೆಂಕಟೇಶಮೂರ್ತಿ

ತಲಕಾಡು ಪ್ರಸಿದ್ಧ ಪ್ರವಾಸಿ ತಾಣ, ಇಲ್ಲಿನ ಅಣೆಕಟ್ಟೆ ಕುರಿತು ಹಲವರಿಗೆ ತಿಳಿದಿಲ್ಲ. ಸುಮಾರು 600 ವರ್ಷ ಇತಿಹಾಸ ಹೊಂದಿರುವ ಇಲ್ಲಿನ ಮಾಧವಮಂತ್ರಿ ಅಣೆಕಟ್ಟೆ ಈಗಲೂ ಈ ಭಾಗದ ರೈತರ ಜೀವನಾಡಿಯಂತೆ ಕೆಲಸ ಮಾಡುತ್ತಿದೆ. ಜೊತೆಗೆ, ತಲಕಾಡಿಗೆ ಆಗಮಿಸುವ ಅನೇಕ ಪ್ರವಾಸಿಗರಿಗೆ ಮೆಚ್ಚಿನ ತಾಣವಾಗಿರುವ ಮೂಲಕವೂ ಗಮನ ಸೆಳೆಯುತ್ತಿದೆ.

ಸುಮಾರು 72 ಕೋಟಿ ರೂ., ವೆಚ್ಚದಲ್ಲಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕನಸಿನಂತೆ ಮರು ನಿರ್ಮಾಣಗೊಂಡು ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆಗೊಂಡ ಬಳಿಕ ಮಾಧವ ಮಂತ್ರಿ ಅಣೆಕಟ್ಟೆಯ ಅನುಕೂಲ ಇನ್ನಷ್ಟು ಹೆಚ್ಚಾಗಿದೆ. ನೂತನ ಅಣೆಕಟ್ಟೆಯು 520 ಮೀಟರ್ ಉದ್ದ, ಎತ್ತರ 8.5 ಮೀಟರ್ ಹಾಗೂ ಮೇಲಭಾಗ 1.28 ಮೀಟರ್ ಅಗಲ ಇದೆ.

ಇನ್ನು, ಹಳೆಯ ಮಾಧವ ಮಂತ್ರಿ ಆಣೆಕಟ್ಟೆಯು ಸಂಪೂರ್ಣವಾಗಿ ಗಾರೆ ಮತ್ತು ಕಲ್ಲು ಬಂಡೆಗಳಿಂದ ನಿರ್ಮಾಣಗೊಂಡಿರುವುದು ವಿಶೇಷ. ಮಾಧವ ಮಂತ್ರಿ ನಾಲೆ ವ್ಯಾಪ್ತಿಯು 29 ಕಿಲೋಮೀಟರ್ ಇದ್ದು 170 ಕ್ಯುಸೆಕ್‌ ನೀರನ್ನು ಕಾಲುವೆಯಲ್ಲಿ ಹರಿಸಲಾಗುತ್ತಿದೆ. ಈ ಭಾಗದ ರೈತರು ಮುಖ್ಯ ಬೆಳೆ ಭತ್ತ ಬೆಳೆಯಲು ವರದಾನವಾದಂತಾಗಿದೆ.

ಅಣೆಕಟ್ಟೆಯಿಂದ ತಲಕಾಡು ಹೋಬಳಿಯ ಕಾಳಿಹುಂಡಿ ವಿಜಾಪುರ, ಕಾಳಬಸವನ ಹುಂಡಿ, ಕುಕ್ಕೂರು, ಹೊಳೆಸಾಲು, ಕಾವೇರಿಪುರ, ಒಡೆಯಂಡಹಳ್ಳಿ, ತಲಕಾಡು ಹಾಗೂ ಮಳವಳ್ಳಿ ತಾಲೂಕಿನ ಬೆಳಕವಾಡಿ ಹಂದಿ ಹಳ್ಳ ಗ್ರಾಮದ ಭಾಗದ ರೈತರಿಗೆ ನೀರು ಪೂರೈಸಲಾಗುತ್ತಿದೆ.
ಮೂಲ ಅಣೆಕಟ್ಟೆ 600 ವರ್ಷಗಳ ಇತಿಹಾಸವುಳ್ಳದ್ದಾಗಿದ್ದು, 1346ನೇ ಇಸ್ವಿಯಲ್ಲಿ ವಿಜಯನಗರ ಸಾಮ್ರಾಜ್ಯದ ಮಂತ್ರಿಯಾಗಿದ್ದ ಮಾಧವರಾಯ ಕಾವೇರಿ ನದಿಗೆ ಅಡ್ಡಲಾಗಿ ಕಲ್ಲು ಬಂಡೆಗಳಿಂದ ನಿರ್ಮಿಸಿದರೆನ್ನಲಾಗಿದೆ.

ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಹಿನ್ನೀರಿನಲ್ಲಿ ಗ್ರಾಮದ ಜನರು ಜೀವನೋಪಾಯಕ್ಕೆ ಮೀನು ಬೇಟೆಗೆ ಅವಕಾಶ ಕಲ್ಪಿಸಿಕೊಡುವ ಉದ್ದೇಶ ಅವರದ್ದಾಗಿತ್ತು. ಇದರ ಜೊತೆಗೆ ವ್ಯವಸಾಯದಿಂದ 5848 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ.

ಈ ರೀತಿ ಮಾಧವ ಮಂತ್ರಿಯಿಂದ ತಲಕಾಡು ಹೋಬಳಿ ಭಾಗದ ರೈತರು ಉತ್ತಮ ಜೀವನ ಕಟ್ಟಿಕೊಳ್ಳಲು ಅಣೆಕಟ್ಟೆಯಿಂದ ಸಾಧ್ಯವಾಗಿದೆ. ಈ ನಡುವೆ 2013 ರಿಂದ 2016ರ ವರೆಗೆ ಅನೇಕ ಬಾರಿ ಕಾವೇರಿ ನದಿ ಪ್ರವಾಹ ಒತ್ತಡಕ್ಕೆ ಸಿಲುಕಿದ ಕಲ್ಲಿನ ಅಣೆಕಟ್ಟೆಯ ಮಧ್ಯಭಾಗದ ಒಡೆದು ಹೋಗಿತ್ತು. ಹೀಗಾಗಿ 2016ರಲ್ಲಿ ಡಾ.ಎಚ್.ಸಿ.ಮಹದೇವಪ್ಪ ಆಸಕ್ತಿ ತೋರಿದ ಕಾರಣ ನೂತನವಾಗಿ ನಿರ್ಮಾಣಗೊಂಡು ಇನ್ನಷ್ಟು ಉಪಯೋಗಕ್ಕೆ ಬಂದಿದೆ.

“ಅಂದಿನ ಮಾಧವ ಮಂತ್ರಿ ಈಗಿನ ಸಚಿವ ಮಹದೇವಪ್ಪರ ಅವಿರತ ಶ್ರಮದ ಫಲವೇ ನೂತನ ಮಾಧವ ಮಂತ್ರಿ ಅಣೆಕಟ್ಟೆ ನಿರ್ಮಾಣವಾಗಿದೆ. ಇಲ್ಲದಿದ್ದರೆ ತಲಕಾಡು ಭಾಗದ ರೈತರು, ಅವರ ಕುಟುಂಬಗಳು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು” ಎಂದು ಹಳೆ ತಲಕಾಡಿನ ರೈತ ಟೀ ಅಂಗಡಿ ಸೋಮಣ್ಣ ಹೇಳಿದ್ದಾರೆ.

“ನೂತನ ಅಣೆಕಟ್ಟೆ ನಿರ್ಮಾಣಕ್ಕೆ ಡಾ.ಎಚ್.ಸಿ. ಮಹದೇವಪ್ಪ ಅವರ ಆಸಕ್ತಿ ಕಾರಣವಾಗಿದೆ. ಇದರಿಂದ 1346 ರೈತರಿಗೆ ಅನುಕೂಲವಾದಂತಾಗಿದೆ” ಎಂದು ತಲಕಾಡು ನಿವಾಸಿ ವೆಂಕಟೇಶ್ ಹೇಳಿದ್ದಾರೆ.

Previous articleರಾಮನಗರ: ಡಿಕೆ ಶಿವಕುಮಾರ್, ರೈತರ ನಡುವೆ ಮಾತಿನ ಚಕಮಕಿ!
Next articleದೇಶದ ನಂ.2 ಶ್ರೀಮಂತ ಸಚಿವ ಡಿಕೆಶಿ, ನಂ.5 ಬೈರತಿ ಸುರೇಶ್‌!

LEAVE A REPLY

Please enter your comment!
Please enter your name here