Home ನಮ್ಮ ಜಿಲ್ಲೆ ಮೈಸೂರು ದಸರಾ 2025: ಗಜಪಯಣ ಆರಂಭ, ಮೈಸೂರಿಗೆ ಹೊರಟ ಆನೆಗಳು

ಮೈಸೂರು ದಸರಾ 2025: ಗಜಪಯಣ ಆರಂಭ, ಮೈಸೂರಿಗೆ ಹೊರಟ ಆನೆಗಳು

0

ಮೈಸೂರು: “ಸಫಾರಿಯಲ್ಲಿ ವನ್ಯಜೀವಿಗಳನ್ನು, ದಸರಾ ಜಂಬೂಸವಾರಿಯಲ್ಲಿ ಅಲಂಕೃತ ಆನೆಗಳನ್ನು ನೋಡಿ ಆನಂದಿಸುವ ನಾವು ಅವುಗಳ ಸಂರಕ್ಷಣೆಗೂ ಮುಂದಾಗಬೇಕು” ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅಭಿಪ್ರಾಯಪಟ್ಟರು.

ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಸೋಮವಾರ ದಸರಾ ಮಹೋತ್ಸವ 2025ರಲ್ಲಿ ಪಾಲ್ಗೊಳ್ಳುವ 14 ಆನೆಗಳ ಪೈಕಿ 9 ಆನೆಗಳ ಮೊದಲ ತಂಡಕ್ಕೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ, ಕಬ್ಬು, ಅಕ್ಕಿ, ಬೆಲ್ಲ ತಿನ್ನಿಸಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಸಚಿವರು, “ಪ್ರಕೃತಿ ಪರಿಸರದ ಸಮತೋಲನಕ್ಕೆ ವನ್ಯಜೀವಿಗಳು ಅತ್ಯವಶ್ಯಕವಾಗಿದ್ದು, ಅವುಗಳ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು. ತಂತಿ ಬೇಲಿಗಳಿಗೆ ಅಕ್ರಮವಾಗಿ ಪ್ರವಹಿಸಿದ ವಿದ್ಯುತ್ ಸ್ಪರ್ಶದಿಂದ ಆನೆಗಳು ಮೃತಪಡುತ್ತಿದ್ದರೆ, ಉರುಳಿಗೆ ಚಿರತೆಗಳು ಸಿಲುಕಿ ನರಳಾಡಿ ಸಾಯುತ್ತಿವೆ” ಎಂದರು.

“ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ವಿಷ ಪ್ರಾಶನದಿಂದ ಹುಲಿಗಳು ಮೃತಪಟ್ಟಿವೆ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ವನ್ಯಜೀವಿಗಳ ಜಾಗವನ್ನು ಆಕ್ರಮಿಸಿರುವ ನಾವು ಅವುಗಳನ್ನು ನಿರ್ದಯವಾಗಿ ಕೊಲ್ಲದೆ, ಅವುಗಳ ಸಂರಕ್ಷಣೆಗೆ ಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದರು.

“ಹೊರ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ದನಕರುಗಳನ್ನು ತಂದು ನಮ್ಮ ರಾಜ್ಯದ ಅರಣ್ಯ ಪ್ರದೇಶದಲ್ಲಿ ಮೇಯಿಸುತ್ತಿರುವುದರಿಂದ ವನ್ಯಜೀವಿಗಳಿಗೆ ಕಾಡಿನಲ್ಲಿ ಆಹಾರ ಲಭಿಸದಂತಾಗಿದೆ. ಹೀಗಾಗಿ ಹೊರರಾಜ್ಯದಿಂದ ತಂದು ದನಕರು ಮೇಯಿಸುವುದನ್ನು ಮಾತ್ರವೇ ನಿಷೇಧಿಸಲಾಗಿದೆ” ಎಂದು ಸಚಿವರು ಸ್ಪಷ್ಟಪಡಿಸಿದರು.

“ಆನೆ ಸೇರಿದಂತೆ ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಸೌರ ತಂತಿಬೇಲಿ, ಟೆಂಟಕಲ್ ಫೆನ್ಸಿಂಗ್, ಆನೆ ಕಂದಕಗಳ ಸಮರ್ಪಕ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಅರಣ್ಯ ಸಚಿವನಾಗುವ ಮೊದಲು ಅಂದರೆ 2023ರ ಜೂನ್ ವರೆಗೆ ರಾಜ್ಯದಲ್ಲಿ 312.918 ಕಿ.ಮೀ ಮಾತ್ರ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಸಚಿವನಾದ ಬಳಿಕ ಕಳೆದ 2 ವರ್ಷದಲ್ಲಿ 115.085 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಇನ್ನೂ 193 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಅನುಮೋದನೆ ನೀಡಲಾಗಿದೆ” ಎಂದರು.

“ಪ್ರಕೃತಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಅರಣ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಆದಿವಾಸಿಗಳಿಗೆ, ಅರಣ್ಯವಾಸಿಗಳ ಸಮಸ್ಯೆಗೆ ಸ್ಪಂದಿಸಲಾಗುವುದು. ಜಂಟಿ ಸಮೀಕ್ಷೆ ನಡೆಸಿ 2015ಕ್ಕೆ ಮೊದಲು ಪಟ್ಟಾ ಜಮೀನೂ ಸೇರಿ 3 ಎಕರೆಗಿಂತ ಕಡಿಮೆ ಅರಣ್ಯ ಭೂಮಿಯಲ್ಲಿ ಉಳಿಮೆ ಮಾಡುತ್ತಿರುವ ಹಾಗೂ ಮನೆ ನಿರ್ಮಿಸಿಕೊಂಡಿರುವವರಿಗೆ ತೊಂದರೆ ನೀಡದಂತೆ ಸೂಚಿಸಲಾಗಿದೆ. ನವರಾತ್ರಿ ಮತ್ತು ದಸರಾ ಮಹೋತ್ಸವ ಕೆಡುಕಿನ ಮೇಲೆ ಒಳಿತಿನ ದಿಗ್ವಿಜಯದ ವಿಜಯೋತ್ಸವವಾಗಿದ್ದು, ನಾವು ಎಲ್ಲ ದುಶ್ಚಟ, ದುರ್ಗಣಗಳ ವಿರುದ್ಧ ವಿಜಯೋತ್ಸವ ಆಚರಿಸೋಣ. ನಾಡದೇವಿ ಚಾಮುಂಡೇಶ್ವರಿ ಎಲ್ಲರಿಗೂ ಶುಭ ತರಲಿ” ಎಂದು ಹೇಳಿದರು.

ಅರ್ಜುನ ಪ್ರಶಸ್ತಿ ಪ್ರದಾನ: ಆನೆ ಸೆರೆ ಕಾರ್ಯಾಚರಣೆ, ಆನೆಗಳನ್ನು ಪಳಗಿಸುವುದು ಮತ್ತು ಯಶಸ್ವಿಯಾಗಿ ವನ್ಯಜೀವಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಉತ್ತಮ ಕಾರ್ಯ ಮಾಡಿದ ಮಾವುತರು, ಕಾವಾಡಿ ಹಾಗೂ ಅರಣ್ಯ ಸಿಬ್ಬಂದಿಗೆ ಇನ್ನು ಮುಂದೆ ಅರ್ಜುನ ಆನೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

ಸಚಿವ ಈಶ್ವರ ಖಂಡ್ರೆ ಮೊದಲ ಸಾಲಿನ ಪ್ರಶಸ್ತಿಯನ್ನು ಭೀಮ ಆನೆಯ ಮಾವುತ ಹಾಗೂ ಕಾಪಾಡಿಗಳಾದ ಗುಂಡ ಮತ್ತು ನಂಜುಂಡಸ್ವಾಮಿಯವರಿಗೆ ಪ್ರದಾನ ಮಾಡಿದರು. ಈ ಪ್ರಶಸ್ತಿ ತಲಾ 10,000 ರೂ. ಗೌರವಧನ ಹಾಗೂ ಪ್ರಶಂಸಾ ಪತ್ರ ಒಳಗೊಂಡಿರುತ್ತದೆ. ಸಮಿತಿ ಒಂದನ್ನು ರಚಿಸಿ ಅರ್ಹ ಸಾಧಕರನ್ನು ಈ ಪ್ರಶಸ್ತಿಗೆ ಪ್ರತಿವರ್ಷ ಆಯ್ಕೆ ಮಾಡಲಾಗುತ್ತದೆ, ಗಜ ಪಯಣದ ದಿನ ಪ್ರಶಸ್ತಿ ಪ್ರದಾನ ನೆರವೇರಲಿದೆ. 2025ನೇ ಸಾಲಿನ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಕಿರುಪರಿಚಯದ ಕೈಪಿಡಿ ಮತ್ತು ಪೋಸ್ಟರ್ ಬಿಡುಗಡೆ ಮಾಡಲಾಯಿತು.

NO COMMENTS

LEAVE A REPLY

Please enter your comment!
Please enter your name here

Exit mobile version