ಮೈಸೂರು: ತೆಲುಗು ನಟ ರಾಮಚರಣ್ ಇಂದು ಮೈಸೂರಿನಲ್ಲಿ ನಡೆಯುತ್ತಿರುವ ಸಿನಿಮಾದ “ಪೆದ್ದಿ” ಚಿತ್ರದ ಚಿತ್ರೀಕರಣದ ಮಧ್ಯೆ ಭಾನುವಾರ) ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಮೈಸೂರಿನ ಖಾಸಗಿ ನಿವಾಸದಲ್ಲಿ ಭೇಟಿ ಮಾಡಿ ಗೌರವ ಸಲ್ಲಿಸಿದರು.
ಚಿತ್ರೀಕರಣಕ್ಕಾಗಿ ತಂಡ ಕಳೆದ ಕೆಲ ದಿನಗಳಿಂದ ಮೈಸೂರಿನಲ್ಲಿ ತಂಗಿದ್ದು, ನಗರದಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ. ಈ ವೇಳೆಯಲ್ಲಿ ರಾಮಚರಣ್ ಅವರು ವಿಶೇಷವಾಗಿ ಸಮಯ ತೆಗೆದುಕೊಂಡು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಭೇಟಿಯ ಸಂದರ್ಭದಲ್ಲಿ ಇಬ್ಬರು ಪರಸ್ಪರ ಆತ್ಮೀಯ ಮಾತುಕತೆ ನಡೆಸಿದ್ದು, ಕರ್ನಾಟಕದ ಕಲಾ–ಸಂಸ್ಕೃತಿ, ಚಿತ್ರರಂಗದ ಅಭಿವೃದ್ಧಿ ಹಾಗೂ ಮೈಸೂರಿನ ವೈಭವದ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರು ರಾಮಚರಣ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ, ಕರ್ನಾಟಕದಲ್ಲಿ ತೆಲುಗು ಹಾಗೂ ಇತರೆ ಭಾರತೀಯ ಚಿತ್ರಗಳ ಚಿತ್ರೀಕರಣಕ್ಕೆ ಸದಾ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ರಾಮಚರಣ್ ಅವರು ಮೈಸೂರಿನ ಸೌಂದರ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೈಸೂರು ಅಭಿಮಾನಿ ನಗರ ಎಂದೂ ಕೊಂಡಾಡಿದ್ದಾರೆ.
ಕನ್ನಡದ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್, ಜಗಪತಿ ಬಾಬು ಮತ್ತು ದಿವೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಉಪ್ಪೇನ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನ ಇದ್ದು ರಾಮ್ ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.
ರಾಮಚರಣ್ – ಮೈಸೂರಿನ ಸಂಬಂಧ ಹೊಸದಲ್ಲ. ಮುಂಚೆಯೂ ಅವರು ಇಲ್ಲಿಯ ಅರಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದು, ಇಲ್ಲಿನ ಅಭಿಮಾನಿಗಳಿಗೆ ಅವರು ಹತ್ತಿರವಾದ ವ್ಯಕ್ತಿಯಾಗಿದ್ದಾರೆ. “ಪೆದ್ದಿ” ಚಿತ್ರದ ಕುರಿತ ನಿರೀಕ್ಷೆ ಈಗಾಗಲೇ ಹೆಚ್ಚು. ಮೈಸೂರಿನಲ್ಲಿನ ಚಿತ್ರೀಕರಣದ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಸಿಎಂ ನಿವಾಸದ ಬಳಿ ಜಮಾಯಿಸಿದ ಅಭಿಮಾನಿಗಳು :ಸ್ಥಳೀಯ ಅಭಿಮಾನಿಗಳು ರಾಮಚರಣ್ ಅವರ ಭೇಟಿ ವಿಚಾರ ತಿಳಿದು ಅವರ ದರ್ಶನಕ್ಕಾಗಿ ಸಿಎಂ ನಿವಾಸದ ಬಳಿ ಜಮಾಯಿಸಿದ ಘಟನೆ ಕೂಡಾ ಗಮನ ಸೆಳೆದಿದೆ. ಭದ್ರತಾ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ, ಅಭಿಮಾನಿಗಳ ಉತ್ಸಾಹ ಕಡಿಮೆಯಾಗಲಿಲ್ಲ. “ಪೆದ್ದಿ” ಚಿತ್ರವು ತೆಲುಗು ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಆಗಿದ್ದು, ಅದರಲ್ಲಿ ರಾಮಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಮೈಸೂರಿನ ಅನೇಕ ಸುಂದರ ಸ್ಥಳಗಳನ್ನು ಒಳಗೊಂಡು ಚಿತ್ರೀಕರಣ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
