Home ನಮ್ಮ ಜಿಲ್ಲೆ ಮೈಸೂರು ಮೈಸೂರು: ಇಲವಾಲದ ಆರ್‌ಎಂಪಿ ಕ್ಯಾಂಪಸ್‍ನಲ್ಲಿ ಹುಲಿ ಪ್ರತ್ಯಕ್ಷ

ಮೈಸೂರು: ಇಲವಾಲದ ಆರ್‌ಎಂಪಿ ಕ್ಯಾಂಪಸ್‍ನಲ್ಲಿ ಹುಲಿ ಪ್ರತ್ಯಕ್ಷ

0

ಮೈಸೂರು ನಗರದ ಹೊರ ವಲಯದ ಇಲವಾಲ ಬಳಿಯ ಆರ್‌ಎಂಪಿ ಆವರಣದಲ್ಲಿ ಹುಲಿಯೊಂದು ಗಸ್ತು ತಿರುಗುತ್ತಿದ್ದ ಭದ್ರತಾ ಸಿಬ್ಬಂದಿ ಕಣ್ಣಿಗೆ ಬಿದ್ದಿದೆ. ಇದು ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮಾತ್ರವಲ್ಲದೇ, ಈ ಭಾಗದ ಗ್ರಾಮಸ್ಥರಿಗೆ ಆತಂಕ ತಂದಿದೆ.

ಆರ್‌ಎಂಪಿ ಕ್ಯಾಂಪಸ್ ಏರಿ ಮೇಲೆ ದೊಡ್ಡ ಹುಲಿಯೊಂದು ಕುಳಿತಿದ್ದುದನ್ನು ಭದ್ರತಾ ಸಿಬ್ಬಂದಿ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ಈ ಮಾಹಿತಿ ತಿಳಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆಗೆ ಮುಂದಾದರು.

ಇಲವಾಲದ ಕಿರು ಅರಣ್ಯದಲ್ಲಿ ಕಳೆದ ಒಂದು ವಾರದಿಂದ 2 ಮರಿಗಳೊಂದಿಗೆ ಬೀಡು ಬಿಟ್ಟಿದ್ದ ತಾಯಿ ಹುಲಿ ಆರ್‌ಎಂಪಿ ಕ್ಯಾಂಪಸ್‍ಗೆ ಸ್ಥಳಾಂತರಗೊಂಡಿರುವ ಶಂಕೆಯೂ ವ್ಯಕ್ತವಾಗಿದೆ. ಆದರೆ, ಕ್ಯಾಂಪಸ್‍ನಲ್ಲಿ ದೊಡ್ಡ ಹುಲಿ ಮಾತ್ರ ಕಂಡು ಬಂದಿದ್ದು, ಮರಿಗಳ ಬಗ್ಗೆ ಸುಳಿವು ಸಿಕ್ಕಿಲ್ಲ. ಇದರಿಂದ ಆರ್‌ಎಂಪಿ ಕ್ಯಾಂಪಸ್‍ನಲ್ಲಿರುವುದು ಬೇರೆ ಹುಲಿಯೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಇಲವಾಲದ ಅರಣ್ಯದಲ್ಲಿದ್ದ ಹುಲಿಯೇ ಸ್ಥಳ ಬದಲಿಸಿದ್ದರೆ, ಅವುಗಳ ಮರಿಗಳು ಎಲ್ಲಿ ಹೋದವು? ಎಂಬ ಅನುಮಾನ ಮೂಡಿದೆ.

ಹುಲಿ ಪ್ರತ್ಯಕ್ಷವಾಗಿರುವ ಆರ್‌ಎಂಪಿ ಕ್ಯಾಂಪಸ್ ಹುಣಸೂರು ಅರಣ್ಯ ವಲಯ ವ್ಯಾಪ್ತಿಗೆ ಸೇರಲಿದ್ದು, ಈ ಹಿನ್ನೆಲೆಯಲ್ಲಿ ಹುಣಸೂರು ಡಿಸಿಎಫ್ ಫಯಾಜ್ ಹಾಗೂ ಸಿಬ್ಬಂದಿಗಳ ತಂಡ ಆರ್‌ಎಂಪಿ ಕ್ಯಾಂಪಸ್‍ಗೆ ಭೇಟಿ ನೀಡಿ ಪರಿಶೀಲಿಸಿದೆ. ಅಲ್ಲದೆ, ಸಿಬ್ಬಂದಿಗಳಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದು, ಹುಲಿಗಳ ಬಗ್ಗೆ ಹಾಗೂ ಅವುಗಳ ಸ್ವಭಾವದ ಮನವರಿಕೆ ಮಾಡಿಕೊಟ್ಟು, ಗಾಬರಿಯಾದಂತೆ ಸಲಹೆ ನೀಡಿದ್ದಾರೆ.

ಕ್ಯಾಂಪಸ್‍ನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದ್ದು, ಹುಲಿ ಸೆರೆಗಾಗಿ ಬೋನ್ ಇಡಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಹುಣಸೂರು ವಲಯದ ಅರಣ್ಯ ಸಿಬ್ಬಂದಿ ಬೀಡು ಬಿಟ್ಟಿದ್ದು, ಹುಲಿ ಚಲನವಲನ ಗಮನಿಸಲು ಕ್ಯಾಮರಾ ಟ್ರ್ಯಾಪ್ ಅಳವಡಿಸಲು ಉದ್ದೇಶಿಸಲಾಗಿದೆ.

ಇನ್ನು, ಹುಲಿ ಇಲವಾಲದ ಅರಣ್ಯ ಪ್ರದೇಶದಲ್ಲಿ ಆ.13ರಂದು ಸಂಜೆ ಅಲೋಕ ಬಳಿ ಬೈಪಾಸ್ ರಸ್ತೆ ದಾಟುತ್ತಿದ್ದ ದೃಶ್ಯವನ್ನು ಸ್ಥಳೀಯರು ಗಮನಿಸಿದ್ದರು. ಮರು ದಿನವೇ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿ, ಕ್ಯಾಮರಾ ಟ್ರ್ಯಾಪ್ ಅಳವಡಿಸಿತ್ತು. ಕ್ಯಾಮರಾ ಟ್ರ್ಯಾಪ್‍ನಲ್ಲಿ ಎರಡು ಮರಿಗಳೊಂದಿಗೆ ತಾಯಿ ಹುಲಿಯ ಚಲನವಲನದ ದೃಶ್ಯ ಸೆರೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಹುಲಿ ಇರುವಿಕೆ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version