Home ನಮ್ಮ ಜಿಲ್ಲೆ ಮೈಸೂರು ಬಾನು ಮುಷ್ತಾಕ್ ದಸರಾ ಉದ್ಘಾಟನೆ: ರಾಗ ಬದಲಾಯಿಸಿದ ಯದುವೀರ್

ಬಾನು ಮುಷ್ತಾಕ್ ದಸರಾ ಉದ್ಘಾಟನೆ: ರಾಗ ಬದಲಾಯಿಸಿದ ಯದುವೀರ್

0

ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದರ ಬಗ್ಗೆ ಯಾವುದೇ ಅಭ್ಯಂತರ ಇಲ್ಲ ಎಂದು ಹೇಳಿದ್ದ ಸಂಸದ ಯದುವೀರ್ ಒಡೆಯರ್ ಇದೀಗ ರಾಗ ಬದಲಾಯಿಸಿದ್ದಾರೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸೇರಿದಂತೆ ಅನೇಕರು ಬಾನು ಮುಷ್ತಾಕ್ ಆಯ್ಕೆ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಯದುವೀರ್ ಅವರು, “ಬಾನು ಮುಷ್ತಾಕ್ ಕನ್ನಾಡಂಭೆ ಕುರಿತ ಹೇಳಿಕೆಗೆ ಮೊದಲು ಸ್ಪಷ್ಟನೆ ಕೊಡಬೇಕು. ಒಂದು ವೇಳೆ ಸ್ಪಷ್ಟೀಕರಣ ಕೊಡದಿದ್ದರೆ ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ನನ್ನ ವಿರೋಧ ಇದೆ” ಎಂದು ಹೇಳಿದ್ದಾರೆ.

“ಸರ್ಕಾರ ಆಯ್ಕೆ ಮಾಡಿದಾಗ ನಾನು ಸ್ವಾಗತಿಸಿದ್ದು ನಿಜ. ಆದರೆ ಬಾನು ಮುಷ್ತಾಕ್ ಭಾಷಣವನ್ನು ನಾನು ಹೇಳಿಕೆ ಕೊಟ್ಟ ನಂತರ ಕೇಳಿದೆ. ಆ ಭಾಷಣಕ್ಕೆ ಸ್ಪಷ್ಟೀಕರಣ ಕೊಡಲೇಬೇಕು. ಸ್ಪಷ್ಟೀಕರಣ ಕೊಡಲಿ ಅಥವಾ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಎರಡು ಮಾಡದಿದ್ದರೆ ನನ್ನ ವಿರೋಧ ಇದೆ” ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

“ಪಕ್ಷದ ನಿರ್ಧಾರವೇ ನಮ್ಮ ನಿರ್ಧಾರ. ಪಕ್ಷಕ್ಕೆ ವಿರುದ್ಧ ನಿಲುವು ನನ್ನದಲ್ಲ, ಭುವನೇಶ್ವರಿ ಕುರಿತ ಬಾನು ಮುಷ್ತಾಕ್ ಹೇಳಿಕೆಯಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಅದನ್ನು ಮುಷ್ತಾಕ್ ಅರ್ಥ ಮಾಡಿಕೊಳ್ಳಬೇಕು. ಅವರ ಧರ್ಮರ ಆಚರಣೆ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮ ಧರ್ಮದಲ್ಲಂತು ಮೂರ್ತಿ ಪೂಜೆ ಶ್ರೇಷ್ಠ ಅವರು ಚಾಮುಂಡಿ ಮಾತೇ ಗೌರವಿಸಿ ಬರಬೇಕು. ಭಕ್ತಿಯಿಂದ ದೇವರನ್ನು ಪೂಜಿಸಬೇಕು. ಇದಕ್ಕೂ ಮೊದಲು ಹಳೆಯ ಹೇಳಿಕೆಗೆ ಸ್ಪಷ್ಟೀಕರಣ ಕೊಡಬೇಕು” ಎಂದು ಒತ್ತಾಯಿಸಿದರು.

ಬಿಜೆಪಿ ದ್ವೇಷಿಸುವ ಕೆಟ್ಟ ನೀತಿ: “ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ವಿರೋಧಿಸುತ್ತಿರುವುದು ದ್ವೇಷಿಸುವ ಕೆಟ್ಟ ನೀತಿ” ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮೊದಲ ಭಾರಿಗೆ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿ, “ಬಿಜೆಪಿ ಪ್ರತಿಯೊಂದಕ್ಕೂ ವಿರೋಧಿಸುತ್ತಲೆ ಬಂದಿದೆ. ನಿಜಕ್ಕೂ ಬೇಸರದ ಸಂಗತಿಯಾಗಿದೆ. ಬಾನು ಅವರು ಅನೇಕ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಬೂಕರ್ ಪ್ರಶಸ್ತಿಯ ಮೂಲಕ ಕನ್ನಡ ನಾಡಿನ ಕಂಪನ್ನು ವಿಶ್ವದಲ್ಲೆಡೆ ಪಸರಿಸುವ ಕೆಲಸ ಮಾಡಿದ್ದಾರೆ. ಬಿಜೆಪಿ ನಾಯಕರು ಬಾನು ಆಯ್ಕೆಯನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುವ ಮೂಲಕ ಗೌರವ ನೀಡಬೇಕಾಗಿತ್ತು. ಮುಸ್ಲಿಮರ ಹೆಸರು ಕೇಳಿದರೆ ಕಾರಣವಿಲ್ಲದೆ ದ್ವೇಷಿಸುವ ಗುಣ ಅವರಲ್ಲಿದೆ. ಮನುವಾದಿಗಳ ವಿಷವನ್ನು ತುಂಬಿಕೊಂಡಿರುವುದರಿಂದ ಎಲ್ಲದಕ್ಕೂ ವಿರೋಧಿಸುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಧರ್ಮವನ್ನು ರಾಜಕೀಯದಲ್ಲಿ ಬೆರೆಸಬಾರದು. ಏಕೆಂದರೆ ಇದೊಂದು ನಾಡಹಬ್ಬ. ಅದನ್ನೇ ಮರೆತು ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಾರೆ. ನಾಡು ನುಡಿಗೆ ಕೊಡುಗೆ ನೀಡಿದವರನ್ನು ಅಮಾನಿಸುವ ಕೆಲಸವನ್ನು ಈಗಲಾದರೂ ನಿಲ್ಲಿಸಬೇಕು. ಐಕ್ಯತೆಯಿಂದ ಇರಬೇಕೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಬಿಜೆಪಿ ಮುಸ್ಲಿಂ ದ್ವೇಷದ ಮನಸ್ಥಿತಿಯನ್ನು ಬದಿಗಿಟ್ಟು ಸಂವಿಧಾನದ ಆಶಯವನ್ನು ಅರ್ಥ ಮಾಡಿಕೊಳ್ಳಲಿ” ಎಂದು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version