Home ನಮ್ಮ ಜಿಲ್ಲೆ ಮೈಸೂರು ಮೈಸೂರು ದಸರಾ: ಗಜಪಡೆಗೆ ವಿಶೇಷ ಪೂಜೆ

ಮೈಸೂರು ದಸರಾ: ಗಜಪಡೆಗೆ ವಿಶೇಷ ಪೂಜೆ

0

ಮೈಸೂರು ದಸರಾ ಮಹೋತ್ಸವದ ಗಜಪಡೆಗೆ ಗಣಪತಿ ಹಬ್ಬದ ಅಂಗವಾಗಿ ನಗರದ ಅರಮನೆ ಆವರಣದಲ್ಲಿ ತುಲಾ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ, ಮೋದಕ ಸೇರಿದಂತೆ ವಿವಿಧ ತಿನಿಸು ತಿನ್ನಿಸಿ ಉಪಚರಿಸಲಾಯಿತು. ಈ ಬಾರಿ 10 ದಿನಗಳ ಬದಲು 11 ದಿನಗಳ ಕಾಲ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರ ತನಕ ದಸರಾ ನಡೆಯಲಿದೆ.

ಗಣೇಶ ಚತುರ್ಥಿ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇವಾಲಯದ ಪಕ್ಕದ ಮೈದಾನದಲ್ಲಿ ಸಂಪ್ರದಾಯದಂತೆ ದಸರಾ ಗಜಪಡೆಗೆ ಅರ್ಚಕ ಎಸ್.ವಿ.ಪ್ರಹ್ಲಾದರಾವ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 11 ಗಂಟೆಗೆ ಶುಭ ತುಲಾ ಲಗ್ನದಲ್ಲಿ ಎಲ್ಲಾ ಆನೆಗಳನ್ನು ಸಾಲಾಗಿ ನಿಲ್ಲಿಸಿ, ಪಾದ ತೊಳೆದು, ಅರಿಶಿನ, ಕುಂಕುಮ, ಶ್ರೀಗಂಧ ಹಚ್ಚಲಾಯಿತು. ಬಳಿಕ ಎಲ್ಲಾ ಆನೆಗಳ ಸೊಂಡಿಲಿನ ಮೇಲೆ ಶ್ರೀಗಂಧದಲ್ಲಿ ಓಂಕಾರ ಬರೆದು ಪೂಜೆಗೆ ಅಣಿಗೊಳಿಸಲಾಯಿತು.

ನಂತರ ಎಲ್ಲಾ ಆನೆಗಳಿಗೆ ಪ್ರತ್ಯಕ್ಷ ಗಣಪತಿ ಪೂಜೆ, ಮಂತ್ರಪುಷ್ಪ ಅರ್ಚನೆ ಮಾಡಿ, ನವಧಾನ್ಯ ಪೂಜೆ ಮಾಡಲಾಯಿತು. ಪೂಜೆ ಮಾಡಿದ ಬಳಿಕ ಎಲ್ಲಾ ಆನೆಗಳಿಗೆ ನವಧಾನ್ಯ ತಿನ್ನಿಸಲಾಯಿತು. ನಂತರ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಆನೆಗಳಿಗೆ ಬಾಳೆಹಣ್ಣು, ಆಪಲ್, ಮೂಸಂಬಿ, ದ್ರಾಕ್ಷಿ, ಪೈನಾಪಲ್ ಸೇರಿದಂತೆ ವಿವಿಧ ಹಣ್ಣು, ಕಬ್ಬು, ಬೆಲ್ಲ ನೀಡಿದರು.

ಅಲ್ಲದೆ, ಗಣಪತಿಗೆ ಇಷ್ಟವಾದ ಮೋದಕ, ಕಡಬು, ಕರ್ಜಿಕಾಯಿ, ಚಕ್ಕುಲಿ, ನಿಪ್ಪಣ್ಣು, ಹೋಳಿಗೆ ಸೇರಿದಂತೆ 21 ಬಗೆಯ ತಿಂಡಿಯನ್ನು ಆನೆಗಳಿಗೆ ನೀಡಿ, ಮಂಗಳಾರತಿ ಬೆಳಗಿ ಪೂಜೆ ನೆರವೇರಿಸಲಾಯಿತು. ಅಂತಿಮವಾಗಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಎಲ್ಲಾ ಆನೆಗಳಿಗೂ ದೃಷ್ಟಿ ತೆಗೆದ ಬೂದುಕುಂಬಳ ಕಾಯಿ ಒಡೆದ ಬಳಿಕ ಪೂಜೆ ಪೂರ್ಣಗೊಂಡಿತು.

ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಎಡಿಸಿ ಡಾ.ಪಿ.ಶಿವರಾಜ್, ಮೈಸೂರು ವೃತ್ತದ ಸಿಎಫ್ ರವಿಶಂಕರ್, ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‍ಗಳಾದ ಪರಮೇಶ್, ಶಂಕರೇಗೌಡ, ಡಿಸಿಪಿಗಳಾದ ಬಿ.ಎನ್.ಬಿಂದುಮಣಿ, ಸುಂದರ್‍ರಾಜ್, ಎಸಿಎಫ್ ರವೀಂದ್ರ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಅರಮನೆ ಭದ್ರತಾ ಪಡೆ ಎಸಿಪಿ ಚಂದ್ರಶೇಖರ್ ಇನ್ನಿತರರು ಉಪಸ್ಥಿತರಿದ್ದರು.

ಈ ಕುರಿತು ಮಾತನಾಡಿದ ಅರ್ಚಕ ಎಸ್.ವಿ.ಪ್ರಹ್ಲಾದ್‍ರಾವ್, “ಗಣಪತಿ ಹಬ್ಬದ ಅಂಗವಾಗಿ ಪ್ರತ್ಯಕ್ಷ ಗಣಪತಿ ಎಂದು ಭಾವಿಸುವ ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಮಾಡಲಾಗಿದೆ. ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಕಳೆದ 28 ವರ್ಷದಿಂದಲೂ ಗಣೇಶ ಹಬ್ಬದ ದಿನ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ನವಧಾನ್ಯ ಪೂಜೆ ಮಾಡಿ, ಎಲ್ಲಾ ಆನೆಗಳಿಗೆ ಹಣ್ಣು, ತಿಂಡಿಗಳನ್ನು ನೀಡಲಾಗಿದೆ” ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version