Home ನಮ್ಮ ಜಿಲ್ಲೆ ಬೆಂಗಳೂರು ವಿಷ್ಣುವರ್ಧನ್ ಸ್ಮಾರಕ ವಿವಾದಕ್ಕೆ ಹೊಸ ತಿರುವು: ಅಭಿಮಾನ್ ಸ್ಟುಡಿಯೋ ಜಪ್ತಿ

ವಿಷ್ಣುವರ್ಧನ್ ಸ್ಮಾರಕ ವಿವಾದಕ್ಕೆ ಹೊಸ ತಿರುವು: ಅಭಿಮಾನ್ ಸ್ಟುಡಿಯೋ ಜಪ್ತಿ

0

ವಿಷ್ಣುವರ್ಧನ್ ಸ್ಮಾರಕವನ್ನು ನೆಲಸಮಗೊಳಿಸಲಾಗಿದ್ದ ವಿವಾದಾತ್ಮಕ ಬೆಂಗಳೂರು ನಗರದಲ್ಲಿರುವ ಅಭಿಮಾನ್ ಸ್ಟುಡಿಯೋದ ಸಂಪೂರ್ಣ ಪ್ರದೇಶವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. 20 ಎಕರೆ ಜಾಗ ಮುಟ್ಟುಗೋಲಿಗೆ ಸರ್ಕಾರದಿಂದ ಮಹತ್ವದ ಆದೇಶವಾಗಿದ್ದು, ವಿಷ್ಣು ಅಭಿಮಾನಿಗಳಲ್ಲಿ ಮತ್ತೆ ಸ್ಮಾರಕ ಮರುನಿರ್ಮಾಣದ ಕನಸು ಚಿಗುರಿದೆ.

ಅರಣ್ಯ ಇಲಾಖೆಯ ಅಧಿಕಾರಿ ರವೀಂದ್ರ ಕುಮಾರ್ ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್‌ಗೆ ಪತ್ರ ಬರೆದಿದ್ದು ಅಭಿಮಾನ್ ಸ್ಟುಡಿಯೋ ಇರುವ ಪ್ರದೇಶ ತುರಹಳ್ಳಿ ಮೀಸಲು ಅರಣ್ಯಕ್ಕೆ ಸೇರಿರುವ ಜಾಗವಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸ್ಟುಡಿಯೋಗೆ ಮಂಜೂರಾದ ಆದೇಶವನ್ನು ರದ್ದುಪಡಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕೆಂದು ಸೂಚಿಸಿದ್ದಾರೆ.

ಸ್ಟುಡಿಯೋ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಮಂಜೂರಾತಿ ನೀಡುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಅರಣ್ಯ ಭೂಮಿಯನ್ನು ಹಿಂಪಡೆಯಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. 2009ರ ಡಿಸೆಂಬರ್ 30ರಂದು ವಿಷ್ಣುವರ್ಧನ್ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರದ ಬಳಿಕ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ವಿಷ್ಣು ಸ್ಮಾರಕವನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಆಗಸ್ಟ್ 8ರಂದು ರಾತ್ರೋರಾತ್ರಿ ನೆಲಸಮಗೊಳಿಸಿದ್ದರಿಂದ ಭುಗಿಲೆದಿದ್ದ ವಿವಾದ ಇದೀಗ ಸರ್ಕಾರ ಇಡೀ ಸ್ಟುಡಿಯೋವನ್ನೇ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗುವುದರೊಂದಿಗೆ ಮಹತ್ವದ ತಿರುವು ಪಡೆದುಕೊಂಡಿದೆ.

ಅಭಿಮಾನ್ ಸ್ಟುಡಿಯೋ ವಿವಾದ: 1970ರ ಆದೇಶ ರದ್ದತಿಗೆ ಸೂಚನೆ ನೀಡಲಾಗಿದೆ. ಆಗಸ್ಟ್ 22ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್‌ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್‌ಗೆ ಬರೆದಿರುವ ಪತ್ರದಲ್ಲಿ ಬಾಲಕೃಷ್ಣ ಅವರಿಗೆ 1970ರಲ್ಲಿ ಸ್ಟುಡಿಯೋ ನಿರ್ಮಾಣದ ಉದ್ದೇಶಕ್ಕೆ 20 ಎಕರೆ ಭೂಮಿ ಮಂಜೂರು ಮಾಡಿದ್ದಾಗ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ 1970ರ ಆದೇಶ ರದ್ದುಪಡಿಸಿ ಆ ಭೂಮಿಯನ್ನು ಅರಣ್ಯ ಇಲಾಖೆಗೆ ಇಂಡೀಕರಣ ಮಾಡಲು ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸೂಚಿಸಲಾಗಿದೆ.

  • 1970ರಲ್ಲಿ ನಟ ಬಾಲಕೃಷ್ಣ ಅವರಿಗೆ ಸರ್ಕಾರದಿಂದ 20 ಎಕರೆ ಮಂಜೂರು
  • ಇದು ತುರಹಳ್ಳಿ ಮೀಸಲು ಅರಣ್ಯಕ್ಕೆ ಸೇರಿದ ಪ್ರದೇಶವಾಗಿತ್ತು
  • ಸ್ಟುಡಿಯೋ ನಿರ್ಮಾಣ ಬಿಟ್ಟು ಅನ್ಯ ಚಟುವಟಿಕೆಗೆ ಬಳಸದಂತೆ ಷರತ್ತು
  • 2003ರಲ್ಲಿ ಬಾಲಣ್ಣ ಅವರ ಮಕ್ಕಳಿಂದ 20ರಲ್ಲಿ 10 ಎಕರೆ ಪರಭಾರೆ
  • 2015ರಲ್ಲಿ ಬಾಲಣ್ಣ ಕುಟುಂಬಕ್ಕೆ ನಿಯಮ ಉಲ್ಲಂಘನೆಗಾಗಿ ನೋಟಿಸ್‌
  • 2021ರಲ್ಲಿ ಮತ್ತೆ ಎಕರೆಗೆ 14 ಕೋಟಿ ರೂ.ನಂತೆ ಮಾರಲು ಒಪ್ಪಂದ
  • 2025ರ ಆಗಸ್ಟ್ 22ರಂದು ಮಂಜೂರಾದ ಭೂಮಿ ಹಿಂಪಡೆಯಲು ಆದೇಶ

ಈ ವಿವಾದ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, “ನಾವು ನಿಯಮ, ಕಾಯ್ದೆ, ಕಾನೂನುಗಳ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ. ವಿಷ್ಣು ಸಮಾಧಿ ಜಾಗದ ವಿವಾದದ ಬಗ್ಗೆ ಪರಿಶೀಲನೆ ಮಾಡುತ್ತೇನೆ. ವಿಷ್ಣುವರ್ಧನ್ ಓರ್ವ ಮೇರು ನಟ. ಅವರ ಸಮಾಧಿಯನ್ನು ಎಲ್ಲಿ ಹಾಗೂ ಯಾವ ರೀತಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ಮಾಡುತ್ತಾರೆ” ಎಂದು ಹೇಳಿದ್ದಾರೆ.

ಸರ್ಕಾರದ ಈ ದಿಢೀರ್ ನಿರ್ಧಾರ ಮೇರು ನಟ ಬಾಲಕೃಷ್ಣ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದ್ದರೆ ವಿಷ್ಣು ಅಭಿಮಾನಿಗಳಲ್ಲಿ ಮತ್ತದೇ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಕನಸನ್ನು ಚಿಗುರಿಸಿದೆ. ಸರ್ಕಾರದ ನಿರ್ಧಾರವನ್ನು ವಿಷ್ಣುವರ್ಧನ್ ಅಳಿಯ ಅನಿರುದ್ಧ ಅವರಾದಿಯಾಗಿ ಚಿತ್ರರಂಗದ ಹಲವು ಗಣ್ಯರು ಸ್ವಾಗತಿಸಿದ್ದಾರೆ.

ವಿವಾದದ ಸುತ್ತ ಆಗಿದ್ದೇನು?: 1969ರಲ್ಲಿ ಹಿರಿಯ ಕಲಾವಿದ ಬಾಲಕೃಷ್ಣ ಅವರ ಕೋರಿಕೆಯ ಮೇರೆಗೆ ಮರು ವರ್ಷ 1970ರ ಸೆಪ್ಟೆಂಬರ್ 21ರಂದು ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮದ ತುರಹಳ್ಳಿ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ ಸರ್ವೇ ನಂಬರ್ 26ರಲ್ಲಿ 20 ಎಕರೆ ಪ್ರದೇಶವನ್ನು ಅಭಿಮಾನ್ ಸ್ಟುಡಿಯೋ ಸ್ಥಾಪಿಸಲು ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು.

ಸ್ಟುಡಿಯೋ ನಿರ್ಮಿಸುವ ಸಲುವಾಗಿ ಈ ಭೂಮಿಯನ್ನು ಕಂದಾಯ ಇಲಾಖೆಗೆ ಒಪ್ಪಿಸಲಾಗಿತ್ತು. ಸ್ಟುಡಿಯೋ ಅಭಿವೃದ್ಧಿ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು, ಸರ್ಕಾರದ ಪೂರ್ವಾನುಮತಿ ಇಲ್ಲದೆ ಮಾರಾಟ/ ಪರಭಾರೆ ಮಾಡದಿಡಲು ಷರತ್ತು ವಿಧಿಸಲಾಗಿತ್ತು.

ಈ ಮಧ್ಯೆ 16.7.2003ರಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳು ಸ್ಟುಡಿಯೋ ಅಭಿವೃದ್ಧಿಗಾಗಿ ಹಣ ಬೇಕೆಂಬ ಬಾಲಕೃಷ್ಣ ಮಕ್ಕಳಾದ ಶ್ರೀನಿವಾಸ್ ಮತ್ತು ಗಣೇಶ್ ಅವರ ಕೋರಿಕೆಯ ಮೇರೆಗೆ 20 ಎಕರೆಯಲ್ಲಿ 10 ಎಕರೆ ಭೂಮಿ ಮಾರಾಟ ಮಾಡಲು ಅನುಮತಿ ನೀಡಿದ್ದರೆನ್ನಲಾಗಿದೆ. ಈ ಬಗ್ಗೆ 2015ರಲ್ಲಿ ಪರಭಾರೆಯ ಕ್ರಮ ಭೂಮಿ ಮಂಜೂರಾತಿಯ ಆದೇಶದ ಷರತ್ತಿನ ಉಲ್ಲಂಘನೆಯೆಂದು ಬಾಲಕೃಷ್ಣ ಕುಟುಂಬಕ್ಕೆ ಆಗಿನ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳು ನೋಟಿಸ್ ಸಹ ನೀಡಿದ್ದರೆಂದು ತಿಳಿದುಬಂದಿದೆ.

ಮತ್ತೊಂದೆಡೆ 2021ರಲ್ಲಿ ಗಣೇಶ್ ಮತ್ತು ಶ್ರೀನಿವಾಸ್‌ ಪುತ್ರ ಬಿ.ಎಸ್.ಕಾರ್ತಿಕ್ ಒಗ್ಗೂಡಿ ಎಕರೆ ಒಂದಕ್ಕೆ 14,37,15000 ರೂಪಾಯಿಯಂತೆ ವ್ಯಕ್ತಿಯೊಬ್ಬರೊಂದಿಗೆ ನೋಂದಾಯಿತು ಮಾರಾಟ ಒಪ್ಪಂದಮಾಡಿಕೊಂಡಿದ್ದರೆನ್ನಲಾಗಿದೆ. ಈ ಎಲ್ಲಾ ಮಾಹಿತಿಯನ್ವಯ ಹಾಗೂ ಕಳೆದ ಮೇ ನಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಉಲ್ಲೇಖಿಸಿ ಭೂ ಮಂಜೂರಾತಿ ಆದೇಶದ ಷರತ್ತುಗಳ ಉಲ್ಲಂಘನೆಯಾಗಿರುವುದರಿಂದ ಸ್ಟುಡಿಯೋಗೆ ನೀಡಿದ್ದ ಭೂಮಿಯನ್ನು ಸರ್ಕಾರ ಹಿಂಪಡೆಯಲು ಮುಂದಾಗಿದೆ.

ವಿಷ್ಣುವರ್ಧನ್ ಅಳಿಯ ಅನಿರುದ್ಧ ಮಾತನಾಡಿ, “ಸರ್ಕಾರ ಅಭಿಮಾನ್‌ ಸ್ಟುಡಿಯೋ ಜಾಗ ವಶಪಡಿಸಿಕೊಳ್ಳಬಹುದು ಅಂತಾ ಮೊದಲೇ ಗೊತ್ತಿತ್ತು. ಆ ನಿಟ್ಟಿನಲ್ಲಿ 6 ವರ್ಷದಿಂದ ಪ್ರಯತ್ನ ಪಟ್ಟಿದ್ವಿ, ಆದರೆ ಆಗಿರಲಿಲ್ಲ. ಈಗ ನಮಗೆ ತುಂಬಾ ಖುಷಿಯಾಗಿದೆ. ಅಪ್ಪಾಜಿ ಅಂತ್ಯ ಸಂಸ್ಕಾರದ ಜಾಗದಲ್ಲಿ ಭಾರತಿ ಅಮ್ಮ ಸ್ಮಾರಕ ಕಟ್ಟಿದ್ದರು. ಆದರೆ ವಿರೋಧಿಗಳು ನೆಲಸಮ ಮಾಡಿಬಿಟ್ಟರು. ಮುಟ್ಟುಗೋಲು ಬಗ್ಗೆ ಅಧಿಕೃತ ಘೋಷಣೆ ಬಂದಿರಲಿಲ್ಲ, ಈಗ ಬಂದಿದೆ. ಕೇವಲ 10 ಗುಂಟೆ ಜಾಗ ಕೇಳ್ತಿವಿ. ಕೊಟ್ಟರೆ ಅಲ್ಲೇ ಸ್ಮಾರಕ ಆಗುತ್ತೆ” ಎಂದರು.

ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, “ಡಾ.ವಿಷ್ಣುವರ್ಧನ್‌ ಅವರ ಸಮಾಧಿಯನ್ನು ನೆಲಸಮಗೊಳಿಸಿದ್ದ ಅಭಿಮಾನ್‌ ಸ್ಟುಡಿಯೋ ಮಾಲೀಕರಿಗೆ ಸರ್ಕಾರ ಕಾನೂನಿನ ಮಹತ್ವ ತಿಳಿಸಿದೆ. ಅಭಿಮಾನ್‌ ಸ್ಟುಡಿಯೋವನ್ನು ಪುನಃ ಸರ್ಕಾರದ ವಶಕ್ಕೆ ಪಡೆಯುವ ನಿರ್ಧಾರವಾಗಿದೆ. ಮೊದಲಿನಿಂದಲೂ ನಾನು ಆ ಜಾಗದ ವಿರುದ್ಧ, ಅಲ್ಲಿನ ಹಣಕಾಸು ಅವ್ಯವಹಾರದ ವಿರುದ್ಧ ದೊಡ್ಡಮಟ್ಟದಲ್ಲಿ ಧ್ವನಿ ಎತ್ತುತ್ತಲೇ ಇದ್ದೆ. ಈಗ ನಮ್ಮ ಕೂಗಿಗೆ ನ್ಯಾಯ ಸಿಕ್ಕಿದೆ. ನಿಜಕ್ಕೂ ಅಭಿನಂದನೀಯ ಕೆಲಸ. ಅಸಂಖ್ಯಾತ ಅಭಿಮಾನಿಗಳ 15 ವರ್ಷಗಳ ನೋವು, ಕಣ್ಣೀರು ಮತ್ತು ಅಸಹಾಯಕತೆಗೆ ನ್ಯಾಯ ಸಿಕ್ಕಿದೆ” ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version