Home ನಮ್ಮ ಜಿಲ್ಲೆ ಮೈಸೂರು ಧರ್ಮಸ್ಥಳ ಕೇಸ್; ಎಸ್‌ಐಟಿ ಹೀಗೆ ತನಿಖೆ ಮಾಡಲಿ ಎಂದು ಹೇಳಲಾಗದು

ಧರ್ಮಸ್ಥಳ ಕೇಸ್; ಎಸ್‌ಐಟಿ ಹೀಗೆ ತನಿಖೆ ಮಾಡಲಿ ಎಂದು ಹೇಳಲಾಗದು

0

ಮೈಸೂರು: “ಧರ್ಮಸ್ಥಳ ಪ್ರಕರಣದಲ್ಲಿ‌ ಎಸ್‌ಐಟಿ ಹೀಗೆ ತನಿಖೆ ಮಾಡಲಿ ಎಂದು ಹೇಳಲು ನಾವು ಯಾರು?, ತನಿಖೆಗೆ ಏನು ಅಗತ್ಯವಿದೆಯೋ? ಅದನ್ನು ಪೊಲೀಸರು ಮಾಡುತ್ತಾರೆ. ಮಂಪರು ಪರೀಕ್ಷೆ ಬೇಕೋ, ಬೇಡವೋ? ಎಂಬುದನ್ನು ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ಮೈಸೂರು ನಗರದಲ್ಲಿನ ಕಾರ್ಯಕ್ರವೊಂದಕ್ಕೆ ಆಗಮಿಸಿದ್ದ ವೇಳೆ ಧರ್ಮಸ್ಥಳದ ವಿರುದ್ಧ ಆರೋಪ ಮಾಡಿದವರ ಮಂಪರು ಪರೀಕ್ಷೆ ನಡೆಯಬೇಕೆಂಬ ಆಗ್ರಹ ಕುರಿತು ಸುದ್ದಿಗಾರರೊಡನೆ ಪ್ರತಿಕ್ರಿಯಿಸಿ, “ಎಸ್‌ಐಟಿ ಸರಿಯಾಗಿ ತನಿಖೆ ಮಾಡುತ್ತಿದೆ. ಪ್ರಕರಣವನ್ನು ಎನ್‌ಐಎಗೆ ವಹಿಸುವ ಅಗತ್ಯ ಇಲ್ಲ. ಹೇಳಿಕೆಗಳಿಂದ ಸತ್ಯ ಹೊರಬರುವುದಿಲ್ಲ. ಮೊದಲು ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಲಿ” ಎಂದು ತಾಕೀತು ಮಾಡಿದರು.

“ತನಿಖೆ ಪೂರ್ಣಗೊಳಿಸಲು ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ಇಷ್ಟೇ ಅವಧಿಯಲ್ಲಿ ತನಿಖೆ ಮಾಡಿ ಎಂದು ಹೇಳಲು ಹೇಗೆ ಸಾಧ್ಯ?, ಆದಷ್ಟು ಬೇಗ ತನಿಖೆ ಮುಗಿಸಲು ಸೂಚಿಸಲಾಗಿದೆ” ಎಂದು ತಿಳಿಸಿದರು.

ಧರ್ಮಸ್ಥಳಕ್ಕೆ ರ‍್ಯಾಲಿಗಳನ್ನು ಹಮ್ಮಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, “ಮಂಜುನಾಥನ ದರ್ಶನ ಮಾಡಲು ಹೋಗುತ್ತಿರಬೇಕು ಹೋಗಲಿ ಬಿಡಿ. ಮಂಜುನಾಥನ ದರ್ಶನಕ್ಕೆ ಹೋಗುವವರನ್ನ ತಡೆಯಲು ಸಾಧ್ಯವೇ?, ಪ್ರಕರಣವನ್ನು ಯಾರೂ ಸಹಾ ರಾಜಕೀಯ ಮಾಡಬಾರದು ಎಂಬುದೇ ತಮ್ಮ ಮನವಿಯಾಗಿದೆ” ಎಂದು ಸ್ಪಷ್ಟಪಡಿಸಿದರು.

ಮೈಸೂರು ದಸರಾ ಉದ್ಘಾಟನೆ: ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಹಲವರು ಆಕ್ಷೇಪಿಸಿರುವುದರ ಕುರಿತು ಮಾತನಾಡಿ, “ದಸರಾ ನಾಡ ಹಬ್ಬ, ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ಅಲ್ಲ. ಒಂದು ಧರ್ಮವನ್ನು ಹೊರಗಿಟ್ಟು ದಸರಾ ಮಾಡಲು ಸಾಧ್ಯವೇ?, ಮಿರ್ಜಾ ಇಸ್ಮಾಯಿಲ್ ದಿವಾನರಾಗಿ ದಸರಾ ಮಾಡಲಿಲ್ಲವೇ?, ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಲಿಲ್ಲವೇ?, ಇದಕ್ಕೆಲ್ಲಾ ತಕರಾರು ತೆಗೆಯಬಾರದು. ಚಾಮುಂಡಿ ತಾಯಿಯನ್ನು ನಂಬುತ್ತಾರೆಯೋ, ಬಿಡುತ್ತಾರೆಯೋ? ಅದು ಅವರಿಗೆ ಸೇರಿದುದಾಗಿದೆ. ಇದು ಊರ ಹಬ್ಬ, ಎಲ್ಲರೂ ಸೇರಿಯೇ ಮಾಡಬೇಕು” ಎಂದರು.

ಗೃಹ ಇಲಾಖೆಯಲ್ಲಿ ಲಂಚಾವತಾರವಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆರೋಪ ಕುರಿತು ಮಾತನಾಡಿ, “ಸಾರಾ ಮಹೇಶ್ ಸಚಿವರಾಗಿದ್ದವರು, ಜವಾಬ್ದಾರಿಯುತ ಮುಖಂಡರೂ ಆಗಿದ್ದಾರೆ. ಯಾರು ಹಣ ಪಡೆದರು, ಯಾರು ನೀಡಿದರು ಎಂಬುದರ ಬಗ್ಗೆ ದೂರು ನೀಡಿದರೆ ತನಿಖೆ ಮಾಡಿಸುತ್ತೇವೆ. ಲಂಚ ನೀಡುತ್ತಿರುವುದು ತಿಳಿದಿದ್ದರೆ ಬರಹ ರೂಪದಲ್ಲಿ ದೂರು ನೀಡಲಿ, ತನಿಖೆ ನಡೆಸುತ್ತೇವೆ” ಎಂದು ಹೇಳಿದರು.

ಅನಾಮಿಕನ ಹಿಂದಿನ ಕಾಣದ ಕೈಗಳ ಬಂಧಿಸಿ: ಧರ್ಮಸ್ಥಳ ಪ್ರಕರಣದ ಬಗ್ಗೆ ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, “ಅಪಪ್ರಚಾರವೆಸಗಿ, ಕಪ್ಪುಚುಕ್ಕೆ ತರಲು ಯತ್ನಿಸಿದ ಅನಾಮಿಕನೊಬ್ಬನನ್ನು ಬಂಧಿಸಿದರೆ ಸಾಲದು. ಷಡ್ಯಂತ್ರದ ಹಿಂದಿನ ಕಾಣದ ಕೈಗಳನ್ನು ಬಂಧಿಸಬೇಕು” ಎಂದು ಆಗ್ರಹಿಸಿದರು.

“ಎಸ್‌ಐಟಿ ತನಿಖೆ ನಡೆಯುತ್ತಿರುವ ಕಾರಣ ಈ ಬಗ್ಗೆ ಚರ್ಚೆ ಮಾಡಿರಲಿಲ್ಲ. ಹಸ್ತಕ್ಷೇಪ ಕೂಡ ಯಾರೂ ಮಾಡಿಲ್ಲ. ಈಗ ಅನಾಮಿಕನನ್ನು ಬಂಧಿಸಿದ ಮೇಲೆ ಅನಿವಾರ್ಯವಾಗಿ ಜನರಿಗೆ ಸತ್ಯಾಂಶವನ್ನು ತಿಳಿಸುವ ಕೆಲಸ ಮಾಡಬೇಕಾಗಿದೆ” ಎಂದರು.

“ಪೊಲೀಸರು ದಕ್ಷತೆಯಿಂದ ಕೆಲಸ ಮಾಡುತ್ತಿರುವುದು ನಿಜವಾಗಿದ್ದಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ ಸತ್ಯವನ್ನು ಹೊರತರಬೇಕು. ದಕ್ಷಿಣ ಭಾರತದಲ್ಲೇ ಸೂಕ್ಷ್ಮಾತಿ ಸೂಕ್ಷ್ಮ ಸಮಾಜದ ಧಾರ್ಮಿಕ ಟ್ರಸ್ಟ್ ಆಗಿರುವ ಧರ್ಮಸ್ಥಳದಲ್ಲಿ ನೂರಾರು ವರ್ಷಗಳಿಂದ ಒಂದು ಹೆಣವನ್ನು ಹೂಳುವುದೇ ಕಷ್ಟಕರ. ಅಂತಹದರಲ್ಲಿ ನೂರಾರು ಹೆಣಗಳನ್ನು ಹೂಳುವುದಕ್ಕೆ ಸಾಧ್ಯವಿಲ್ಲ. ಒಬ್ಬನೇ 4 ಅಡಿ ಗುಂಡಿ ತೋಡಿ ಹೂಳುವುದಕ್ಕೂ ಸಾಧ್ಯವಿಲ್ಲ. ಆತ ದೂರು ನೀಡಿದಾಗ ಅಧಿಕಾರಿಗಳು ಯೋಚಿಸಲಿಲ್ಲ. ಸರ್ಕಾರ ಕೂಡ ಪರಿಗಣಿಸಲಿಲ್ಲ. ಕೂಡಲೇ ಸತ್ಯಾಂಶವನ್ನು ಬಯಲು ಮಾಡುವಂತೆ” ಒತ್ತಾಯಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version