ಬಾಗಲಕೋಟೆ: “ಕುತಂತ್ರದಿಂದ ಸರ್ಕಾರ ರಚನೆ ಮಾಡಲು ಬಿಜೆಪಿ ಹೈಕಮಾಂಡ್ ರಾಜ್ಯದ 55 ಕಾಂಗ್ರೆಸ್ ಶಾಸಕರನ್ನು ಗುರಿಯಾಗಿಸಿ ಪಟ್ಟಿ ತಯಾರಿಸಿದೆ. ಬಿಜೆಪಿಗೆ ಬರದಿದ್ದರೆ ಸಿಬಿಐ, ಇಡಿ ದಾಳಿ ಮಾಡುವ ಬೆದರಿಕೆಯನ್ನೊಡ್ಡುತ್ತಿದೆ” ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್ ಸಿಡಿಸಿದ್ದಾರೆ.
ಹುನಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಬಣದಿಂದ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.
“ಬಿಜೆಪಿಗರ ಪಟ್ಟಿಯಲ್ಲಿ ನಾನೂ ಸೇರಿ ಉಳಿದ ಶಾಸಕರಿರುವ ಅನುಮಾನವಿದೆ. ನಾನೇನು ಬೇನಾಮಿ ಆಸ್ತಿ ಮಾಡಿಲ್ಲ. ನನಗೆ ಯಾವುದರ ಭಯವೂ ಇಲ್ಲ” ಎಂದು ಹೇಳಿದರು.
“ಬಿಜೆಪಿಯವರು ಒಮ್ಮೆಯೂ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ರಚಿಸಿಲ್ಲ. ಸಮ್ಮಿಶ್ರ ಸರ್ಕಾರ, ಹಿಂಬಾಗಿಲಿನ ರಾಜಕಾರಣವಷ್ಟೇ ಅವರಿಗೆ ತಿಳಿದಿದೆ. ಕಳೆದ ಬಾರಿಯು ದುಡ್ಡು ಕೊಟ್ಟು ಅಧಿಕಾರಕ್ಕೆ ಬಂದಿದ್ದರು. ಅವರು ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂಬದು ಗೊತ್ತಿದ್ದೆ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಸಿಬಿಐ, ಇಡಿ ದಾಳಿಗಳನ್ನು ಹೆದರಿಸೋಕೆ ಮಾಡುತ್ತಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ಶಾಸಕರು ಬರದಿದ್ದರೆ ದಾಳಿ ನಡೆಸುವ ಬೆದರಿಕೆ ಹಾಕುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
“ನನ್ನ ಮೇಲೆ ಇಡಿ ದಾಳಿಯನ್ನಾದರೂ ಮಾಡಲಿ, ಸಿಬಿಐ ದಾಳಿಯಾದರೂ ನಡೆಯಲಿ. ನನ್ನನ್ನು ಏನು ಮಾಡಲು ಸಾಧ್ಯವಿಲ್ಲ. ಈಗಾಗಲೇ ಬಿಜೆಪಿ ಅವರು ಶಾಸಕರ ಮನೆಗೆ ಏಜೆಂಟರ್‌ನ್ನು ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿಗೆ ಬರದಿದ್ದರೆ ಇಡಿ ದಾಳಿ ಮಾಡಿಸಿ ಅಕ್ರಮ ಸಂಪತ್ತು ಬಯಲಿಗೆ ಎಳೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನಾನು ಭಯ ಪಡುವುದಿಲ್ಲ.” ಎಂದರು.
“ಇತ್ತೀಚೆಗೆ ಬಳ್ಳಾರಿ ಶಾಸಕರು, ಭರತ ರೆಡ್ಡಿ, ತುಕಾರಾಮ್, ನಾಗೇಂದ್ರ ಅವರ ಮನೆ ಮೇಲೆಲ್ಲ ದಾಳಿ ಮಾಡಲಾಗಿದೆ. ದ್ವೇಷದ ರಾಜಕಾರಣ, ಕುತಂತ್ರ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ ಎಂದು ಹೇಳಿ 2028ರ ಚುನಾವಣೆಯಲ್ಲಿ ಬಿಜೆಪಿ ಜನರ ಮಧ್ಯೆ ಬರಲಿ” ಎಂದು ಸವಾಲು ಹಾಕಿದರು.