Hubballi: ದೇಶದ ಗಮನ ಸೆಳೆದಿದ್ದ ಏಕೈಕ ಪೊಲೀಸ್‌ ಠಾಣೆ ಇನ್ನು ನೆನಪು ಮಾತ್ರ!

0
67

ಹರ್ಷ ಕುಲಕರ್ಣಿ
ಹುಬ್ಬಳ್ಳಿ
: ದಶಕಗಳ ಹಿಂದೆ ಅಕ್ರಮ ಸಾರಾಯಿ ತಯಾರಿಕೆ ಮತ್ತು ಮಾರಾಟ ಪ್ರಕರಣಗಳಿಂದ ಇಡೀ ರಾಜ್ಯದ ಗಮನ ಸೆಳೆದಿದ್ದ `ಕಮರಿಪೇಟ್’ ಪೊಲೀಸ್ ಠಾಣೆ ಇದೀಗ ಇತಿಹಾಸದ ಪುಟ ಸೇರಿದೆ.

ಕಮರಿಪೇಟ್ ಎಂಬ ಒಂದು ಬಡಾವಣೆಯಿಂದಾಗಿ ಇಡೀ ದೇಶವೇ ಹುಬ್ಬಳ್ಳಿಯತ್ತ ತಿರುಗಿ ನೋಡುವಂತಾಗಿತ್ತು. ಅಲ್ಲದೆ, ವಾಣಿಜ್ಯ ನಗರಿಗೆ `ಛೋಟಾ ಮುಂಬೈ’ ಎಂಬ ಹೆಸರು ಬರಲು ಕಮರಿಪೇಟ್ ಪಾತ್ರ ಮಹತ್ವದ್ದಿದೆ.

ಅಬಕಾರಿ ಲಾಬಿ ಕಮರಿಪೇಟ್ ಮೇಲೆ ಕೆಂಗಣ್ಣು ಬೀರಿದಾಗಲೆಲ್ಲ ಸಂಸತ್, ವಿಧಾನಸಭೆಯಲ್ಲಿ ಕಮರಿಪೇಟ್ ಹೆಸರು ಮಾರ್ದನಿಸುತ್ತಿತ್ತು. ಅಬಕಾರಿ ಇಲಾಖೆಯ ಆದಾಯ ಹೆಚ್ಚಿಸುವ ವಿಷಯ ಚರ್ಚೆಗೆ ಬಂದಾಗಲೆಲ್ಲ ಕಮರಿಪೇಟ್ ನಿಯಂತ್ರಿಸುವ ಬಗ್ಗೆ ಮತ್ತು ಅಲ್ಲಿಗೆ ದಕ್ಷ ಪೊಲೀಸ್ ಅಧಿಕಾರಿಯನ್ನು ನಿಯೋಜಿಸುವ ಬಗ್ಗೆ ಚರ್ಚೆಗಳು ಜೋರಾಗಿಯೇ ನಡೆಯುತ್ತಿದ್ದವು. ಆದರೆ, ಅದೀಗ ನೆನಪು ಮಾತ್ರ.

ಹುಬ್ಬಳ್ಳಿ ಕಮರಿಪೇಟೆ ಪೊಲೀಸ್ ಠಾಣೆ ನಿರ್ಮಾಣವಾಗಿ 16 ವರ್ಷಗಳಾಗಿವೆ. ಕಟ್ಟಡವೂ ಗಟ್ಟಿಮುಟ್ಟಾಗಿದೆ. ಆದರೆ, ರಾಜಕಾಲುವೆ ಮೇಲೆ ಕಟ್ಟಡ ನಿರ್ಮಾಣವಾಗಿದ್ದೆ ಸಮಸ್ಯೆಗೆ ಕಾರಣ. ಕಾಲುವೆಯ ತಳಭಾಗ ಶಿಥಿಲ ಆಗಿದ್ದಲ್ಲದೆ, ಹುಬ್ಬಳ್ಳಿಯ-ಬೆಂಗಳೂರು-ಪುಣೆ ಮುಖ್ಯರಸ್ತೆಯ ಪಕ್ಕದಲ್ಲಿರುವ ಕಮರಿಪೇಟೆ ಪೊಲೀಸ್ ಠಾಣೆಯ ರಾಷ್ಟ್ರೀಯ ಹೆದ್ದಾರಿ ಸಹ ರಾಜಕಾಲುವೆ ಮೇಲೆಯೇ ಇದೆ. ಪರಿಣಾಮ ಭಾರವಾದ ವಾಹನ ರಸ್ತೆಯಲ್ಲಿ ಸಂಚರಿಸಿದರೆ, ಕಾಲುವೆ ತಡೆಗೋಡೆ ಅಲುಗಾಡಿ ಪೊಲೀಸ್ ಠಾಣೆಯ ಕಟ್ಟಡವೂ ಅಲುಗಾಡುತ್ತಿತ್ತು.

ನಿತ್ಯ ಭಾರಿ ವಾಹನಗಳ ಓಡಾಟದಲ್ಲಿ ಠಾಣೆ ಅಲುಗಾಡುವುದರಿಂದ ಸಿಬ್ಬಂದಿ ಹೊರಗಡೆ ಓಡಿ ಬಂದ ಉದಾಹರಣೆಯೂ ಸಾಕಷ್ಟಿವೆ. ಹೀಗಾಗಿ ಯಾವುದೇ ಕ್ಷಣ ಕಾಲುವೆಯ ತಳಪಾಯ ಕುಸಿದು, ಠಾಣೆಯ ಕಟ್ಟಡವೂ ನೆಲಸಮ ಆಗುತ್ತದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಕಮರಿಪೇಟ್ ಪೊಲೀಸ್ ಠಾಣೆಯನ್ನು ನೆಲಸಮ ಮಾಡಲಾಗುತ್ತಿದೆ.

ವರ್ಷದಿಂದ ಈಚೆಗೆ ಠಾಣೆಯ ಕಟ್ಟಡ ಜಾಸ್ತಿ ಅಲುಗಾಡಲು ಶುರುವಾಗಿತ್ತು. ವಾಸಿಸಲು ಯೋಗ್ಯವಲ್ಲದಿರುವುದರಿಂದ ಕೂಡಲೇ ಕಮರಿಪೇಟೆ ಪೊಲೀಸ್ ಠಾಣೆ ಸ್ಥಳಾಂತರ ಮಾಡಬೇಕು ಎಂಬ ನಿರ್ಧಾರ ಕೈಗೊಂಡರೂ ಸ್ಥಳಾಂತರಕ್ಕೆ ಸಮರ್ಪಕ ಕಟ್ಟಡ ದೊರೆಯದೇ ಕಮರಿಪೇಟೆ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಹೀಗಾಗಿ ಸಿಬ್ಬಂದಿ ಭಯದಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾಗಿತ್ತು.

ಕಟ್ಟಡವನ್ನು ನೆಲಸಮಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು 2024ರ ಮೇ 15 ರಂದು ಲಿಖಿತ ಪತ್ರವನ್ನು ನೀಡಿದ್ದರು. ಜಿಲ್ಲಾಧಿಕಾರಿ, ಆಯುಕ್ತರು, ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಠಾಣೆ ಸ್ಥಳಾಂತರ ಕುರಿತು ಮೌಖಿಕ ಆದೇಶವನ್ನೂ ನೀಡಿದ್ದರು.

ಆದರೆ, ಸ್ಥಳಾಂತರಕ್ಕೆ ಸೂಕ್ತ ಸ್ಥಳ ದೊರೆಯದ ಹಿನ್ನೆಲೆಯಲ್ಲಿ ಸ್ಥಳಾಂತರ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಅಲ್ಲದೆ, ನಾಲಾದ ಮೇಲೆ ಕಟ್ಟಡ ನಿರ್ಮಾಣವಾಗಿದ್ದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತಿತ್ತು. ಕೆಳಗಡೆ ಹೂಳು, ಕಸ ಸಿಲುಕಿಕೊಳ್ಳುತ್ತಿದ್ದು, ಅದರಿಂದ ನಾಲಾ ತುಂಬಿ, ಠಾಣೆ, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುತ್ತಿತ್ತು.

ಪಾಲಿಕೆ ಸಭಾಭವನಕ್ಕೆ ಶಿಫ್ಟ್:
ಹಲವಾರು ಕಾರಣಗಳಿಂದಾಗಿ ಕಮರಿಪೇಟ್ ಪೊಲೀಸ್ ಠಾಣೆ ಸದ್ಯ ಜೈ ಭಾರತ ಸರ್ಕಲ್‌ನಲ್ಲಿರುವ ಪಾಲಿಕೆಯ ಸಭಾಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿದೆ. ಹಳೇಯ ಪೊಲೀಸ್ ಠಾಣೆಯನ್ನು ನೆಲಸಮಗೊಳಿಸುವ ಕಾರ್ಯವೂ ಭರದಿಂದ ಸಾಗಿದೆ. ಈಗಾಗಲೇ ಠಾಣೆಯ ಕಿಟಕಿ, ಬಾಗಿಲುಗಳನ್ನು ತೆರವುಗೊಳಿಸಲಾಗಿದೆ. ಸುತ್ತಲೂ ರಸ್ತೆಗಳಿರುವುದರಿಂದ ವಾಹನ, ಜನರ ಸಂಚಾರ ನೋಡಿಕೊಂಡು ಸಂಪೂರ್ಣ ಕಟ್ಟಡವನ್ನು ನೆಲಸಮಗೊಳಿಸಲಾಗುತ್ತದೆ. ಮುಂದಿನ ಹಂತದಲ್ಲಿ ಸೂಕ್ತ ಜಾಗೆ ಗುರುತಿಸಿ ಅಲ್ಲಿ ನೂತನ ಪೊಲೀಸ್ ಠಾಣೆಯನ್ನು ನಿರ್ಮಿಸುವ ಯೋಜನೆ ಇದೆ.

ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಕಮರಿಪೇಟೆ ಪೊಲೀಸ್ ಠಾಣೆ ರಾಜಕಾಲುವೆ ಮೇಲೆ ನಿರ್ಮಿಸಿರುವ ಕಟ್ಟಡದಲ್ಲಿ ಇರುವುದರಿಂದ ಅದು ಅಪಾಯದ ಸ್ಥಿತಿಯಲ್ಲಿತ್ತು. ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ತೆರವು ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಕಟ್ಟಡ ಸಾಮರ್ಥ್ಯದ ಕುರಿತು ಪರಿಶೀಲನಾ ವರದಿ ಕೊಟ್ಟಿದೆ. ಹೀಗಾಗಿ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ಸೂಚಿಸಲಾಗಿತ್ತು. ಈಗ ಸ್ಥಾಳಾಂತರ ಆಗಿರುವುದರಿಂದ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Previous articleಐವರಿಗೆ ಪೆವಿಲಿಯನ್‌ ʼರೂಟ್‌ʼ ತೋರಿಸಿದ ಬುಮ್ರಾ
Next article‘ಜೂನಿಯರ್’ ಝಲಕ್: ಜುಲೈ 18ಕ್ಕೆ ಕಿರೀಟಿ ದರ್ಬಾರ್