Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿ: ಮುಂಗಾರು ಹಂಗಾಮು ಬೆಳೆ ವಿಮೆ ಪರಿಹಾರ ಬಿಡುಗಡೆ

ಕಲಬುರಗಿ: ಮುಂಗಾರು ಹಂಗಾಮು ಬೆಳೆ ವಿಮೆ ಪರಿಹಾರ ಬಿಡುಗಡೆ

0

ಕಲಬುರಗಿ: 2024-25 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ರೂ 656.62 ಕೋಟಿ ಪರಿಹಾರ ಬಿಡುಗಡೆಯಾಗಿತ್ತು. ಅದರಲ್ಲಿ ಮೊದಲ ಕಂತಿನ ಪರಿಹಾರವಾಗಿ ರೂ 364.70 ಕೋಟಿ ಈಗಾಗಲೇ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಬಾಕಿ ಉಳಿದಿದ್ದ ರೂ 291.92 ಕೋಟಿ ಆರ್ಥಿಕ‌ ಇಲಾಖೆಯಿಂದ ಬಿಡುಗಡೆಯಾಗಿದ್ದು, ಮುಂದಿನ‌ ವಾರ ಬೆಳೆವಿಮೆ ಪರಿಹಾರ ರೈತರ ಬ್ಯಾಂಕ್ ಖಾತೆಗೆ ಜಮಾವಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ತೊಗರಿ, ಹೆಸರು, ಉದ್ದು, ಹತ್ತಿ. ಸೋಯಾ ಅವರೆ ಹಾಗೂ ಇತರೆ ಬೆಳೆಗಳಿಗೆ ಜಿಲ್ಲೆಯಲ್ಲಿ ಒಟ್ಟು 2.04 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿರುತ್ತಾರೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಶ್ರಮ ಹಾಗೂ ಸರ್ಕಾರದ ಕಾಳಜಿಯಿಂದಾಗಿ ರೈತರು ವಿಮೆ ಮಾಡಿಸಿದ್ದಾರೆ ಎಂದರು.

ಬೆಳೆ ವಿಮೆ ಮಾಡಿಸಿದ 2.04 ಲಕ್ಷ ರೈತರಿಗೆ ಒಟ್ಟು ರೂ. 656.62 ಕೋಟಿ ಬೆಳೆ ವಿಮೆ ಮಂಜೂರಾಗಿರುತ್ತದೆ. ಇದರಲ್ಲಿ ಮೊದಲನೆಯ ಕಂತು ಒಟ್ಟು ರೂ.364.70 ಕೋಟಿ ಈಗಾಗಲೇ ರೈತರ ಬ್ಯಾಂಕ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ವರ್ಗಾವಣೆ ಮಾಡಲಾಗಿರುತ್ತದೆ. ಬಾಕಿ ಉಳಿದಿದ್ದ ರೂ 291.92 ಕೋಟಿ ವಿಮೆ ಪರಿಹಾರ ಇದೀಗ ಬಿಡುಗಡೆಯಾಗಿದ್ದು ಮುಂದಿನ‌ವಾರ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದರು.

ಯಾದಗಿರಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಗಳಿಗೆ ಬೆಳೆ ವಿಮೆ‌ಪರಿಹಾರ ಸಿಕ್ಕಿಲ್ಲ. ಆದರೆ ಕಲಬುರಗಿ ಜಿಲ್ಲೆಗೆ ರೂ 656 ಕೋಟಿ ಪರಿಹಾರ ಸಿಕ್ಕಿದೆ ಎಂದ ಸಚಿವರು, ಬೆಳೆ ವಿಮೆ ಮಾಡಿಸದ ರೈತರಿಗೂ ಕೂಡಾ ಪರಿಹಾರ ದೊರಕಿಸಿಕೊಡಲು ಪ್ರಸ್ತಾಪ ಮಾಡಲಾಗಿದೆ ಎಂದರು.

1.05 ಲಕ್ಷ ಹೆಕ್ಟೇರ್ ಬೆಳೆ ಹಾನಿ: ಇತ್ತೀಚಿಗೆ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 1.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ‌ ಹಾನಿಯಾಗಿದೆ. ತೊಗರಿ, ಉದ್ದು, ಹತ್ತಿ, ಬಾಳೆಸೇರಿದಂತೆ ಇತರೆ ಬೆಳೆ ಹಾನಿಯಾಗಿರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹೋಬಳಿವಾರು ಸಮೀಕ್ಷೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಇನ್ನೂ ಹತ್ತು ದಿನದಲ್ಲಿ ತಾಲೂಕು, ಹೋಬಳಿ ಮಟ್ಟದಲ್ಲಿ ಸರಿಯಾದ ಮಾಹಿತಿ ಪಡೆದು ನಂತರ ಕಂದಾಯ ಇಲಾಖೆಯಿಂದ ಪರಿಹಾರ ಪೋರ್ಟಲ್‌ನಲ್ಲಿ ದಾಖಲು ಮಾಡಲಾಗುವುದು. ಹಾಗಾಗಿ ರೈತರು ಬೆಳೆ ಹಾನಿ ಬಗ್ಗೆ ಮಾಹಿತಿ ನೀಡುವಂತೆ ಸಚಿವರು ಕೋರಿದರು.

ಕೇಂದ್ರದಲ್ಲಿ ಎನ್‌ಡಿಎ ಪಕ್ಷ ಅಧಿಕಾರಕ್ಕೆ ಬಂದ ನಂತರ‌ ಎನ್‌ಡಿಆರ್‌ಎಫ್ ನಿಯಮಾವಳಿಗಳ ಬಗ್ಗೆ ಬದಲಾವಣೆ ಮಾಡಲಾಗಿದೆ. ನೆರೆ ಪರಿಹಾರಕ್ಕೂ ಕೂಡಾ ಈಗ ಅದೇ ನಿಯಮಾವಳಿಗಳನ್ನು ಅನ್ವಯ ಮಾಡಲಾಗುತ್ತಿದೆ ಎಂದು ದೂರಿದರು. ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ ಕೃಷಿ‌ ಸಚಿವರು ಬಂದಿಲ್ಲ, ನೀವೂ ಕೂಡಾ ಭೇಟಿ ನೀಡಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಾವು ಸರ್ಕಾರದ‌ ಮೇಲೆ ಹಾಗೂ ಖಾಸಗಿ ಕೆಲಸದ ಮೇಲೆ ವಿದೇಶಕ್ಕೆ ಹೋಗಿದ್ದು ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದ್ದೇನೆ. ಕೃಷಿ ಸಚಿವರೂ ಕೂಡಾ ಜಿಲ್ಲೆಗೆ ಈ ಹಿಂದೆ ಬಂದು ಹೋಗಿದ್ದಾರೆ ಎಂದರು.

ಸಿಎಂ ಭೇಟಿ: ಕಲ್ಯಾಣ ಕರ್ನಾಟಕ ಉತ್ಸವ ಉದ್ಘಾಟನೆಗೆ ಸೆಪ್ಟೆಂಬರ್ 17 ರಂದು ಸಿಎಂ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಸೆ. 16 ರಂದೇ ಸಂಜೆ ಸಿಎಂ ಕಲಬುರಗಿ ಗೆ ಆಗಮಿಸಲಿದ್ದಾರೆ. ಧ್ವಜಾರೋಹಣ ನಂತರ ಸಮಾಜದ ಕಡೆಯಿಂದ ಖಾಸಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಬೇಡಿಕೆ‌ ಪರಿಶೀಲನೆ ಹಂತದಲ್ಲಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version