ಕಲಬುರಗಿ: ಮತಗಳ್ಳತನ (voter data theft) ಪ್ರಕರಣದ ತನಿಖೆಯ ಅಂಗವಾಗಿ, ವಿಶೇಷ ತನಿಖಾ ತಂಡ (ಎಸ್ಐಟಿ) ಇಂದು (ಅಕ್ಟೋಬರ್ 15) ಕಲಬುರಗಿಯಲ್ಲಿ ಆಳಂದದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಕುಟುಂಬ ಸದಸ್ಯರ ನಿವಾಸಗಳ ಮೇಲೆ ದಾಳಿ ನಡೆಸಿದೆ.
ಮಾಜಿ ಶಾಸಕರ ಪುತ್ರರಾದ ಹರ್ಷಾನಂದ ಗುತ್ತೇದಾರ್ (ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ) ಮತ್ತು ಸಂತೋಷ್ ಗುತ್ತೇದಾರ್ (ಉದ್ಯಮಿ) ಅವರ ಮನೆಗಳ ಮೇಲೆ ಹಾಗೂ ಅವರ ಉದ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಎಸ್ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ದಾಳಿಗಳು ಬೆಳಗಿನ ಜಾವದಿಂದಲೇ ಪ್ರಾರಂಭವಾಗಿದ್ದು, ನಗರದ ಗುಬ್ಬಿ ಕಾಲೋನಿ, ವಸಂತನಗರ (ರಾಜರಾಜೇಶ್ವರಿ ನಗರ) ಪ್ರದೇಶದಲ್ಲಿರುವ ನಿವಾಸಗಳಲ್ಲಿ ದಾಖಲೆಗಳು, ಕಂಪ್ಯೂಟರ್‌ಗಳು, ಮೊಬೈಲ್‌ಗಳು ಮತ್ತು ಬ್ಯಾಂಕ್ ವ್ಯವಹಾರಗಳ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ವಿವೇಕಾನಂದ ನಗರದ ಖುಭಾ ಪ್ಲಾಟ್ ವ್ಯಾಪ್ತಿಯಲ್ಲಿರುವ ಚಾರ್ಟರ್ಡ್ ಅಕೌಂಟೆಂಟ್ ಮಲ್ಲಿಕಾರ್ಜುನ್ ಮಹಾಂತಗೋಳ ಅವರ ಮನೆಯಲ್ಲಿ ಸಹ ದಾಳಿ ನಡೆದಿದೆ. ಈ ದಾಳಿಗಳು ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳು ಮತ್ತು ದಾಖಲೆಗಳ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ನಡೆದಿರುವುದಾಗಿ ಎಸ್ಐಟಿ ಮೂಲಗಳು ಸ್ಪಷ್ಟಪಡಿಸಿವೆ.
ಎಸ್ಐಟಿ ಮುಖ್ಯಸ್ಥ ಎಸ್ಪಿ ಶುಭನ್ವಿತ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳದಲ್ಲೇ ಇದ್ದು, ದಾಖಲೆಗಳನ್ನು ವಶಪಡಿಸಿಕೊಳ್ಳುತ್ತಿದೆ. ಈ ಕ್ರಮದಿಂದ ಕಲಬುರಗಿಯಲ್ಲಿ ರಾಜಕೀಯ ವಲಯದಲ್ಲಿ ಚರ್ಚೆ ಚುರುಕಾಗಿದೆ.
ಸುದ್ದಿ ಪ್ರಕಾರ, ಮತಗಳ್ಳತನ ಪ್ರಕರಣದಲ್ಲಿ ಕೆಲವು ಖಾಸಗಿ ಕಂಪನಿಗಳೊಂದಿಗೆ ರಾಜಕೀಯ ನಾಯಕರ ಸಂಪರ್ಕವಿದೆ ಎಂಬ ಶಂಕೆಯ ಮೇರೆಗೆ ಎಸ್ಐಟಿ ವ್ಯಾಪಕ ತನಿಖೆ ಕೈಗೊಂಡಿದೆ. ತನಿಖೆಯ ಮೊದಲ ಹಂತದಲ್ಲಿಯೇ ಸಾಕ್ಷ್ಯಾಧಾರಗಳ ಆಧಾರದ ಮೇಲೆ ದಾಳಿ ನಡೆದಿದ್ದು, ಮುಂದಿನ ಹಂತದಲ್ಲಿ ಇನ್ನಷ್ಟು ಸ್ಥಳಗಳ ಮೇಲೂ ತಪಾಸಣೆ ನಡೆಯುವ ಸಾಧ್ಯತೆ ಇದೆ.