Home ನಮ್ಮ ಜಿಲ್ಲೆ ಕಲಬುರಗಿ ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಹೈಕೋರ್ಟ್ ತಡೆ – ಪ್ರತ್ಯೇಕ ದಿನಾಂಕ ನಿಗದಿ ಸೂಚನೆ

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಹೈಕೋರ್ಟ್ ತಡೆ – ಪ್ರತ್ಯೇಕ ದಿನಾಂಕ ನಿಗದಿ ಸೂಚನೆ

0

ಕಲಬುರಗಿ: ಚಿತ್ತಾಪುರ ತಾಲೂಕು ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ದಲಿತ ಸಂಘಟನೆಗಳು ಏಕಕಾಲದಲ್ಲಿ ಪಥಸಂಚಲನ ಹಾಗೂ ರ್ಯಾಲಿ ನಡೆಸುವ ಕುರಿತು ಹೈಕೋರ್ಟ್ ತುರ್ತು ವಿಚಾರಣೆ ನಡೆಸಿ, ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ.

ಚಿತ್ತಾಪುರ ತಾಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಅವರು ಭಾನುವಾರ (ಇಂದು) ನಿಗದಿಯಾಗಿದ್ದ ಪಥಸಂಚಲನಕ್ಕೆ ಅನುಮತಿ ನೀಡದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ, ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ. ಜಿ. ಎಸ್. ಕಮಲ್ ಅವರ ಪೀಠ ಈ ಆದೇಶ ಹೊರಡಿಸಿದೆ.

ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು, “ಒಂದೇ ದಿನ, ಒಂದೇ ಸ್ಥಳ ಮತ್ತು ಒಂದೇ ಮಾರ್ಗದಲ್ಲಿ ಹಲವು ಸಂಘಟನೆಗಳಿಗೆ ರ‍್ಯಾಲಿ ನಡೆಸಲು ಅವಕಾಶ ನೀಡಿದರೆ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ” ಎಂದು ವಾದಿಸಿದರು.

ನ್ಯಾಯಾಲಯವು ಈ ವಾದವನ್ನು ಪರಿಗಣಿಸಿ, ಸಂಘಟನೆಗಳಿಗೆ ಪ್ರತ್ಯೇಕ ದಿನಾಂಕಗಳಲ್ಲಿ ರ‍್ಯಾಲಿ ಅಥವಾ ಪಥಸಂಚಲನ ನಡೆಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ, ಹೊಸ ದಿನಾಂಕ ನಿಗದಿ ಮಾಡಿ, ಮಾರ್ಗ ನಕ್ಷೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸುವಂತೆ ಸಂಘಟನೆಗಳಿಗೆ ನಿರ್ದೇಶನ ನೀಡಿದೆ.

ಹೈಕೋರ್ಟ್ ಪೀಠವು ಜಿಲ್ಲಾ ಮತ್ತು ತಾಲೂಕು ಆಡಳಿತವನ್ನು ಕಾನೂನು ಪ್ರಕಾರ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸೂಚಿಸಿದ್ದು, ಅರ್ಜಿಯ ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ಈ ಆದೇಶದಿಂದ ಇಂದು ನಿಗದಿಯಾಗಿದ್ದ ಆರ್‌ಎಸ್‌ಎಸ್ ಮತ್ತು ದಲಿತ ಸಂಘಟನೆಗಳ ಪಥಸಂಚಲನ ಹಾಗೂ ರ‍್ಯಾಲಿ ನಡೆಯದಂತಾಗಿದೆ. ಎಲ್ಲಾ ಮಾಹಿತಿಯನ್ನು ಪರಿಗಣಿಸಿ ಸರ್ಕಾರ ವರದಿ ಸಲ್ಲಿಸಬೇಕು. ಸರ್ಕಾರದ ವರದಿ ಆಧರಿಸಿ ಪ್ರಕರಣ ಪರಿಗಣಿಸಲಾಗುವುದು ಎಂದು ಆದೇಶಿಸಿದ ನ್ಯಾಯಾಲಯ. ಅಕ್ಟೋಬರ್‌ 24ರ ಮಧ್ಯಾಹ್ನ 2:30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version